ಜ.10ಕ್ಕೆ ಸುರ್ಜೇವಾಲ ಬೆಂಗಳೂರಿಗೆ ಲೋಕಸಭಾ ಚುನಾವಣೆ ಹಿನ್ನಲೆ ಚರ್ಚೆ: ಸಚಿವ ದಿನೇಶ್ ಗುಂಡೂರಾವ್
News.Ashwasurya.in
ಬೆಂಗಳೂರು: ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಜ.10ರಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಲೋಕಸಭೆ ಚುನಾವಣಾ ಪೂರ್ವ ಬಾವಿತಯಾರಿ ಬಗ್ಗೆ ಅವರ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಸಾಕಷ್ಟು ಚರ್ಚೆಯಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ಅವರು, ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ ಹೆಚ್ವಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಸಂಸದರನ್ನ ಆಯ್ಕೆ ಮಾಡಿ ಕಳುಹಿಸಬೇಕಿದೆ.ಸುಮಾರು 22 ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಸಂಸದರನ್ನಾಗಿ ದೆಹಲಿಗೆ ಕಳಿಸಿಕೊಡುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ ಈ ನಿಟ್ಟಿನಲ್ಲಿ ಹೆಚ್ಚಿನ ಚರ್ಚೆಗಳು ಪಕ್ಷದೊಳಗೆ ನಡೆಯುತ್ತಿದೆ ಎಂದರು.
ಸಮುದಾಯವಾರು ಡಿಸಿಎಂ ಹುದ್ದೆ ಬಗ್ಗೆ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಸದ್ಯಕ್ಕೆ ಪಕ್ಷ ಸಂಘಟನೆ, ಲೋಕಸಭೆ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ತರುವ ನಿಟ್ಟಿನಲ್ಲಿ ಪಕ್ಷದ ನಾಯಕರ ಗಮನವಿದೆ ಎಂದು ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭೋಜನಕೂಟಕ್ಕೆ ಕರೆದಿದ್ದು ನಿಜ. ನಾವೆಲ್ಲ ಭಾಗವಹಿದ್ದೆವು. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಇದೊಂದು ಸೌಹಾರ್ದಯುತ ಔತಣವಾಗಿತ್ತು. ಯಾವುದೆ ಕಾರ್ಯಸೂಚಿ ಇರಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನವನ್ನು ಗೆಲ್ಲಿಸಿಕೊಳ್ಳಬೇಕಿದೆ ಈ ನಿಟ್ಟಿನಲ್ಲಿ ಎಲ್ಲಾ ನಾಯಕರ ಗಮನವಿದೆ ಎಂದರು