ಗ್ರಾಮ ಪಂಚಾಯತಿ ಮಟ್ಟದಲ್ಲಿ ಕೂಸಿನ ಮನೆ ನಿರ್ಮಾಣ ಅವೈಜ್ಞಾನಿಕ-ಆರ್ಥಿಕ ಹೊರೆ ಹೇರುವ ಮುನ್ನ ಎಚ್ಚರವಹಿಸಲಿ:ಒಕ್ಕೂಟದ ಅಧ್ಯಕ್ಷ ಅನಿಲ್
ತೀರ್ಥಹಳ್ಳಿ: ಸೆ.14,2023 ರಂದು ಗ್ರಾಮಪಂಚಾಯತಿ ಮಟ್ಟದಲ್ಲಿ ಕೂಸಿನ ಮನೆ ಯೋಜನೆಯಡಿ ಶಿಶುಪಾಲನಾ ಕೇಂದ್ರ ಗಳನ್ನು ಸ್ಥಾಪಿಸಬೇಕೆಂಬ ಅವೈಜ್ಞಾನಿಕ ಆದೇಶವನ್ನು ಹೊರಡಿಸಿ ಗ್ರಾಮಪಂಚಾಯತಿ ಗಳಿಗೆ ಆರ್ಥಿಕ ಹೊರೆಯನ್ನು ಹೇರಲಾರಂಭಿಸಿದೆ.ಇಂತಹ ಯೋಜನೆಗಳನ್ನು ಜಾರಿಗೆ ತರುವ ಮುನ್ನ ಸರ್ಕಾರ ಎಚ್ಚರ ವಹಿಸಬೇಕು. ಈಗಾಗಲೇ ಸ್ವಂತ ಸಂಪನ್ಮೂಲ ಗಳಿಲ್ಲದೇ ಪಂಚಾಯತಿಗಳು ಆರ್ಥಿಕ ದಿವಾಳಿ ಹಂತ ತಲುಪಿವೆ. ಅವೈಜ್ಞಾನಿಕ ಯೋಜನೆಗಳು ಅಭಿವೃದ್ಧಿ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿ ಗಳ ನಡುವೆ ಸಂಘರ್ಷ ಕ್ಕೆಡೆ ಮಾಡಿಕೊಡುತ್ತಿದೆ ಎಂದು ತಾಲೂಕು ಅಧ್ಯಕ್ಷ-ಉಪಾಧ್ಯಕ್ಷರ ಒಕ್ಕೂಟದ ಅಧ್ಯಕ್ಷ ಅನಿಲ್. ಟಿ.ಜೆ ತಿಳಿಸಿದ್ದಾರೆ.
ಕೂಸಿನ ಮನೆಯನ್ನು ನರೇಗಾ ಯೋಜನೆಯಲ್ಲಿ ದುಡಿಯುವ ಮಹಿಳೆಯರು ನೆಮ್ಮದಿಯಿಂದ ಕೆಲಸ ಮಾಡಲು ಮತ್ತು ಅವರ ಮಕ್ಕಳಿಗೆ ಸುರಕ್ಷತೆ,ಪೂರಕ ಪೌಷ್ಟಿಕ ಆಹಾರ ಸೌಲಭ್ಯ ಒದಗಿಸಲು ಸಹಕಾರಿಯಾಗುತ್ತದೆಂಬ ಉದ್ದೇಶದಿಂದ ಯೋಜನೆಯನ್ನು ಜಾರಿಗೆ ತಂದಿದ್ದಾರಾದರೂ ಅದು ಪ್ರಯೋಜನಕ್ಕೆ ಬರುವುದಿಲ್ಲ. ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಒಂದು ಕೂಸಿನ ಮನೆ ತೆರೆಯುವುದರಿಂದ ಸದುಪಯೋಗ ವಾಗುವುದಿಲ್ಲ.
ಪಂಚಾಯತಿ ವ್ಯಾಪ್ತಿಯ ನಾನಾ ಪ್ರದೇಶಗಳಲ್ಲಿ ನರೇಗಾ ಯೋಜನೆ ಯಡಿ ಕೂಲಿ ಕೆಲಸ ನಡೆಯುತ್ತಿರುತ್ತದೆ.ಎಲ್ಲಾ ಮಕ್ಕಳನ್ನು ಒಂದೇ ಕೂಸಿನ ತಂದು ಬಿಡಲು ಅಸಾಧ್ಯ.ಅಷ್ಟೇ ಅಲ್ಲದೇ ಸರ್ಕಾರ ಈ ಯೋಜನೆಗೆ ಪ್ರತ್ಯೇಕ ಹಣ ಬಿಡುಗಡೆ ಮಾಡದೇ ಹಳೇ ಕಟ್ಟಡ ಕ್ಕೆ ಸುಣ್ಣಬಣ್ಣ ಬಳಿಯುವುದೋ ಹೊಸ ಕಟ್ಟಡ ನಿರ್ಮಾಣ ಮಾಡುವುದು, ಕೇರ್ ಟೇಕರ್ ಗಳಿಗೆ ನರೇಗಾ ದಲ್ಲಿ ಹಣ ಬಿಡುಗಡೆ ಮಾಡಬೇಕೆಂಬ ಆದೇಶ ವನ್ನು ಯಾವ ಪಂಚಾಯತಿ ಗಳೂ ಪಾಲಿಸಲು ಅಸಾಧ್ಯ.
ಕೆಲವು ಗ್ರಾಮಪಂಚಾಯತಿಗಳಲ್ಲಿ ವರ್ಗ-1 ರಲ್ಲಿ ಹಣವೇ ಇಲ್ಲ.ಆದರೂ ರಾಜ್ಯದಲ್ಲಿ ನಾಲ್ಕು ಸಾವಿರ ಕೂಸಿನ ಮನೆಯನ್ನು ಸರ್ಕಾರ ಪ್ರಾರಂಭಿಸಲು ಆದೇಶ ಹೊರಡಿಸಿದೆ.ಈಗಾಗಲೇ ಆರು ತಿಂಗಳಿನಿಂದ ಮೂರು ವರ್ಷದ ವರೆಗಿನ ಲಾಲನೆ ಹಾಗೂ ಪಾಲನೆಯ ನಿರ್ವಹಣೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ವಹಿಸುತ್ತಿದ್ದು ಆ ಇಲಾಖೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಸದೃಢ ಗೊಳಿಸುವುದು ಸೂಕ್ತ ಹಾಗೂ ಪ್ರತಿ ಗ್ರಾಮಗಳಲ್ಲೂ ಅಂಗನವಾಡಿ ಕೇಂದ್ರ ಗಳು ಕಾರ್ಯನಿರ್ವಹಿಸುತ್ತಿದ್ದು ಅದೂ ಸಹ ಕೂಸಿನ ಮನೆಯ ಕಲ್ಪನೆಯೇ ಆಗಿರುವುದರಿಂದ ಇಂತಹ ಅವೈಜ್ಞಾನಿಕ ಯೋಜನೆಯ ಅವಶ್ಯಕತೆ ಇದ್ದಂತೆ ಕಂಡುಬರುತ್ತಿಲ್ಲ.
ಸರ್ಕಾರ ಗ್ರಾಮಪಂಚಾಯತಿ ಗಳಿ ಹೆಚ್ಚಿನ ಜವಾಬ್ದಾರಿ ಹೇರಿಕೆಯ ಇಂತಹ ಯೋಜನೆಗಳನ್ನು ಕೈಬಿಡಬೇಕೆಂದು ಗ್ರಾಮಪಂಚಾಯತಿ ಒಕ್ಕೂಟದ ಅಧ್ಯಕ್ಷ ಅನಿಲ್ ಆಗ್ರಹಿಸಿದ್ದಾರೆ.