ತಾಲ್ಲೂಕಿನ ಜನತೆಗೆ ಉಪಯೋಗವಾಗುವ ಬಹುಗ್ರಾಮ ಶುದ್ಧ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಅಗತ್ಯ ದಿಕ್ಕು ತಪ್ಪಿಸುವ ಪ್ರಯತ್ನ ನಡೆದರೆ ನೀರು ಕೊಡಿ – ಜೀವ ಉಳಿಸಿ ಎಂಬ ಹೋರಾಟ ನಡೆಸುವುದು ಅನಿವಾರ್ಯ – ಟಿ.ಜೆ. ಅನಿಲ್

ತಾಲ್ಲೂಕಿನ ಜನತೆಗೆ ಉಪಯೋಗವಾಗುವ ಬಹುಗ್ರಾಮ ಶುದ್ಧ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಅಗತ್ಯ

ದಿಕ್ಕು ತಪ್ಪಿಸುವ ಪ್ರಯತ್ನ ನಡೆದರೆ ನೀರು ಕೊಡಿ – ಜೀವ ಉಳಿಸಿ ಎಂಬ ಹೋರಾಟ ನಡೆಸುವುದು ಅನಿವಾರ್ಯ – ಟಿ.ಜೆ. ಅನಿಲ್

ತೀರ್ಥಹಳ್ಳಿ : ತಾಲ್ಲೂಕಿನ ಗ್ರಾಮೀಣ ಪ್ರದೇಶದ ಜನತೆಗೆ ಶುದ್ಧ ಕುಡಿಯುವ ನೀರು ನೀಡುವಂತಹ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳ್ಳಬೇಕು. ದಿಕ್ಕು ತಪ್ಪಿಸುವ ಪ್ರಯತ್ನ ನಡೆದರೆ ನೀರು ಕೊಡಿ ಜೀವ ಉಳಿಸಿ ಎಂಬ ಹೋರಾಟ ನಡೆಸುವುದು ಅನಿವಾರ್ಯ ಎಂದು ತಾಲ್ಲೂಕು ಗ್ರಾಮ ಪಂಚಾಯಿತಿ ಅಧ್ಯಕ್ಷ – ಉಪಾಧ್ಯಕ್ಷರ ಒಕ್ಕೂಟದ ಅಧ್ಯಕ್ಷ ಟಿ.ಜೆ. ಅನಿಲ್ ಹೇಳಿದರು.
ಅ. 13 ರಂದು ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣವೊಂದರಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾವು ಹೋರಾಟ ನಡೆಸುವವರಿಗೆ ಪ್ರತಿರೋಧ ಮಾಡುತ್ತಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಅವರ ಹೋರಾಟ ದಿಕ್ಕು ತಪ್ಪಿಸುವ ರೀತಿ ಕಂಡು ಬರುತ್ತಿದೆ. ಗ್ರಾಮಪಂಚಾಯಿತಿಗಳಿಗೆ ತೆರಳಿ ಅರ್ಜಿಗಳನ್ನು ನೀಡಿ, ಮಾಹಿತಿ ಹಕ್ಕು ಆಧಾರದಲ್ಲಿ ಮಾಹಿತಿ ಕೇಳುವುದನ್ನು ಗಮನಿಸಿದಾಗ ನಮ್ಮಲ್ಲೂ ಆತಂಕ ಮೂಡುತ್ತಿದೆ. ಇದುವರೆಗೂ ಹೋರಾಟ ನಡೆಸುವವರು ಆ ಭಾಗದ ರೈತರಾಗಿದ್ದು, ಅವರಿಗಾಗುವ ಅನಾನುಕೂಲವನ್ನು ಪ್ರಶ್ನಿಸಿ, ವಿಮರ್ಶಿಸಿ ಬಗೆಹರಿಸಿಕೊಳ್ಳಲಿ ಎಂಬ ನಿಟ್ಟಿನಲ್ಲಿ 36 ಗ್ರಾಾಮ ಪಂಚಾಯಿತಿಗಳು ಇದರ ಫಲಾನುಭವಿಗಳಾಗಿದ್ದರೂ ಮೌನ ವಹಿಸಿದ್ದರು. ಆದರೀಗ ಅನುಷ್ಠಾನವನ್ನೇ ಆಗದಂತೆ ನೋಡಿಕೊಳ್ಳುವ ಪ್ರಯತ್ನ ಮಾಡುತ್ತಿರುವ ಆತಂಕ ನಮ್ಮನ್ನು ಕಾಡುವಂತಾಗಿದೆ. ಆ ಕಾರಣದಿಂದ ಪತ್ರಿಕಾಗೋಷ್ಠಿಯನ್ನು ಕರೆಯಬೇಕಾಗಿದೆ ಎಂದು ಅವರು ತಿಳಿಸಿದರು.
ಗೋಷ್ಠಿಯಲ್ಲಿ ಶೇಡ್ಗಾಾರ್ ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ್, ಗುಡ್ಡೇಕೊಪ್ಪ ಗ್ರಾ.ಪಂ. ಅಧ್ಯಕ್ಷರಾದ ರಾಘವೇಂದ್ರ ಪವಾರ್, ಆರಗ ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ್, ಸಿಂಗನಬಿದರೆ ಗ್ರಾ.ಪಂ. ಅಧ್ಯಕ್ಷ ನವೀನ್, ಬೆಜ್ಜವಳ್ಳಿ ಗ್ರಾ.ಪಂ. ಉಪಾಧ್ಯಕ್ಷ ಸುಬ್ರಹ್ಮಣ್ಯ, ಹೆದ್ದೂರು ಗ್ರಾ.ಪಂ. ಅಧ್ಯಕ್ಷರಾದ ಲೋಕೇಶ್, ನೆರಟೂರು ಗ್ರಾ.ಪಂ. ಅಧ್ಯಕ್ಷರಾದ ಕವಿತಾ ಭಾಸ್ಕರ್ ಮತ್ತಿತರರು ಉಪಸ್ಥಿತರಿದ್ದರು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಆರ್ಥಿಕವಾಗಿ ಪಂಚಾಯಿತಿಗಳು ಸದೃಢವಾಗುತ್ತವೆ. ಶುದ್ಧ ಕುಡಿಯುವ ನೀರೂ ದೊರಕುತ್ತದೆ

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳ್ಳುವುದರಿಂದ ಪ್ರತೀ ಗ್ರಾಮ ಪಂಚಾಯಿತಿಗೆ ವಿದ್ಯುತ್ ಮೋಟಾರ್‌ಗಳು, ಪೈಪ್‌ಗಳ ರಿಪೇರಿಗೆಂದು ವ್ಯಯವಾಗುತ್ತಿರುವ ಪ್ರತಿ ತಿಂಗಳು ಒಂದು ಲಕ್ಷಕ್ಕೂ ಹೆಚ್ಚು ಹಣ ಉಳಿತಾಯವಾಗುತ್ತದೆ. ಜೊತೆಗೆ ಶುದ್ಧ ಕುಡಿಯುವ ನೀರನ್ನು ಗ್ರಾಮೀಣ ಪ್ರದೇಶದ ಜನರಿಗೆ ನೀಡಿದಂತಾಗುತ್ತದೆ. ಪಂಚಾಯಿತಿ ವ್ಯಾಪ್ತಿಯ ದಲಿತ ಕೇರಿಗಳಿಂದ ಹಿಡಿದು ಕಡು ಬಡವರ ಮನೆಗೆ ಕುಡಿಯುವ ನೀರನ್ನೇ ಪ್ರತಿನಿತ್ಯ ನೀಡಲಾಗದೇ ಎರಡು – ಮೂರು ದಿನಕ್ಕೊಮ್ಮೆ ಗ್ರಾಮ ಪಂಚಾಯಿತಿಗಳು ನೀಡುತ್ತಿವೆ. ಈ ಯೋಜನೆ ಜಾರಿಯಾಗುವುದರಿಂದ ಪ್ರತಿದಿನ ಶುದ್ಧ ನೀರು ನೀಡಲು ಸಾಧ್ಯವಾಗುತ್ತದೆ. ಇಂತಹ ಮಹತ್ತರ ಯೋಜನೆ ಜಾರಿಯಾಗುವುದು ಅತ್ಯವಶ್ಯವಾಗಿದೆ ಎಂದರು.

ಬೋರ್‌ವೆಲ್‌ಗಳನ್ನು ನೀರಿನ ಮೂಲ ಎನ್ನಲು ಸಾಧ್ಯವಿಲ್ಲ

ತಾಲ್ಲೂಕಿನ ಬಹುತೇಕ ಗ್ರಾಮ ಪಂಚಾಯಿತಿಗಳು ಬೋರ್‌ವೆಲ್‌ನ್ನು ನೀರಿನ ಮೂಲವನ್ನಾಗಿ ಮಾಡಿಕೊಂಡಿವೆ. ಆದರೆ, ಅದನ್ನು ನೀರಿನ ಮೂಲ ಎಂದು ಹೇಳಲು ಸಾಧ್ಯವಿಲ್ಲ. ನೀರಿನ ಮೂಲ ಎಂದು ಕೆರೆ ಮತ್ತು ಬಾವಿಯನ್ನು ಮಾತ್ರ ಪರಿಗಣಿಸಲಾಗುತ್ತದೆ. ಬೋರ್‌ವೆಲ್‌ಗಳು ಯಾವ ಸಂದರ್ಭದಲ್ಲಿ ಬೇಕಾದರೂ ಕೈಕೊಡಬಹುದು. ಭೂಮಿಯೊಳಗಿನ ನೀರನ್ನು ಬಗೆದು ನೋಡಲು ಸಾಧ್ಯವಿಲ್ಲ. ಅಷ್ಟೇ ಅಲ್ಲದೇ ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ 10 ರಿಂದ 15 ಬೋರ್‌ವೆಲ್‌ಗಳನ್ನು ಕೊರೆದು ಒಂದು ಬೋರ್‌ವೆಲ್‌ಗಳಲ್ಲಿ ನೀರನ್ನು ಕಾಣುವಂತಾಗಿದೆ. ಆ ನೀರೂ ಸಹ ಕೆಲವು ಗ್ರಾಮ ಪಂಚಾಯಿತಿಗಳು ಉಪಯೋಗಿಸುವ ಸ್ಥಿತಿಯಲ್ಲಿಲ್ಲ. ಫ್ಲೋರೈಡ್ ಅಂಶ ಹೆಚ್ಚಾಗಿ ಕಂಡು ಬರುವುದರಿಂದ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಆ ಕಾರಣದಿಂದ ಅಂತಹ ಬೋರ್‌ಗಳನ್ನು ಸ್ಥಗಿತಗೊಳಿಸಲಾಗುತ್ತಿದೆ. ಹಲವು ಬೋರ್‌ವೆಲ್‌ಗಳು ಕ್ರಮೇಣವಾಗಿ ಫ್ಲೋರೈಡ್ ಅಂಶ ಹೆಚ್ಚಾಾಗುತ್ತಿರುವುದು ಕಂಡು ಬರುತ್ತಿದ್ದು, ಹೀಗೇ ಮುಂದುವರಿದರೆ ಬೋರ್‌ವೆಲ್‌ಗಳಿಂದ ನೀರು ಸರಬರಾಜು ಮಾಡುವುದು ಕಷ್ಟಸಾಧ್ಯವಾಗುತ್ತದೆ.

ಶುದ್ಧ ನೀರು – ವಿದ್ಯುತ್, ಶಿಕ್ಷಣ ನೀಡುವ ಜವಾಬ್ದಾರಿ ಗ್ರಾಮಪಂಚಾಯಿತಿಗಳದ್ದು

ಶುದ್ಧ ನೀರು, ವಿದ್ಯುತ್, ಶಿಕ್ಷಣ ನೀಡುವ ಜವಾಬ್ದಾಾರಿ ಗ್ರಾಮಪಂಚಾಯಿತಿಗಳದ್ದಾಗಿದ್ದು, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಯಾಗುವುದಕ್ಕೆೆ ತಾಲ್ಲೂಕಿನ 32 ಗ್ರಾಮಪಂಚಾಯಿತಿಗಳು ಈಗಾಗಲೇ ನಿರ್ಣಯವನ್ನು ಮಾಡಿವೆ. ಎರಡು ಗ್ರಾಮ ಪಂಚಾಯಿತಿಗಳು ಈ ಯೋಜನೆಯಿಂದ ಹೊರಗುಳಿದಿದೆ. ಉಳಿದ ನಾಲ್ಕು ಗ್ರಾಮ ಪಂಚಾಯಿತಿಗಳು ತಟಸ್ಥ ನಿಲುವನ್ನು ಇದುವರೆಗೂ ಸೂಚಿಸಿದ್ದು, ಆ ಗ್ರಾಮಪಂಚಾಯಿತಿಗಳವರೂ ಕೂಡಾ ಶುದ್ಧ ಕುಡಿಯುವ ನೀರಿನ ಅಪೇಕ್ಷಿತರಾಗಿದ್ದಾರೆ. ಈ ಯೋಜನೆಯ ಅನುಷ್ಠಾನದ ವಿರುದ್ಧ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ – ಸದಸ್ಯರುಗಳು ಹಾಗೂ ಗ್ರಾಮಸ್ಥರು ಮೌನ ವಹಿಸಿದ್ದಾರೆಂದರೆ ಯೋಜನೆಯನ್ನು ವಿರೋಧಿಸುತ್ತಿದ್ದೇವೆಂದೇನಲ್ಲ. ಹೋರಾಟ ನಡೆಸುವವರು ಅನುಮಾನವನ್ನು ಬಗೆಹರಿಸಿಕೊಂಡು ಅನುಷ್ಠಾನಕ್ಕೆೆ ಸಹಕರಿಸುತ್ತಾಾರೆಂಬ ಆಶಾ ಭಾವನೆಯಿಂದಷ್ಟೇ. ಆದರೆ, ಹೋರಾಟದ ಸ್ವರೂಪ ಯೋಜನೆಯ ಅನುಷ್ಠಾನವನ್ನೇ ರದ್ದುಗೊಳಿಸುವ ಹಂತಕ್ಕೆೆ ಹೋಗುತ್ತಿದೆ ಎಂಬ ಆತಂಕ ನಮ್ಮನ್ನು ಕಾಡುವಂತಾಗಿದ್ದು, ಜೀವನ ಉಳಿಸಿ ಎಂದು ಅವರು ಹೋರಾಟ ನಡೆಸಿದರೆ ನೀರು ಕೊಡಿ ಜೀವ ಉಳಿಸಿ ಎಂಬ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದರು.

ಆರೋಗ್ಯ ಹದಗೆಟ್ಟರೆ ವೈದ್ಯರು ಹೇಳಿದ್ದನ್ನೇ ಕೇಳುತ್ತೇವೆ. ಇಂತಹ ಯೋಜನೆಗಳು ಜಾರಿಯಾಗುವಾಗ ಇಂಜಿನಿಯರ್‌ಗಳ ಮಾತನ್ನೇ ಕೇಳಬೇಕಿದೆ

ಆರೋಗ್ಯ ಹದಗೆಟ್ಟರೆ ವೈದ್ಯರ ಬಳಿಯೇ ಹೋಗುತ್ತೇವೆ. ಅವರು ಕೊಡುವ ಔಷಧಿಯನ್ನು ಪಡೆಯುವ ಬದಲು ಕಿಡ್ನಿ ಹೋಗುತ್ತದೆ, ಬೇರಿನ್ನೇನೋ ಆಗುತ್ತದೆ ಎಂದು ಯೋಚಿಸಲು ಸಾಧ್ಯವಾ. ಅದೇ ರೀತಿ ಇಂಜಿನಿಯರ್‌ಗಳು ನೀಡಿದ ಮಾಹಿತಿಯ ಪ್ರಕಾರ ಇದೊಂದು ಅತ್ಯುತ್ತಮವಾದ ಯೋಜನೆ. ಈ ಯೋಜನೆಯಿಂದ ಗ್ರಾಮೀಣ ಪ್ರದೇಶದ ಜನತೆಗೆ ಶುದ್ಧ ಕುಡಿಯುವ ನೀರು ದೊರಕುತ್ತದೆ. ನ್ಯೂನ್ಯತೆಗಳನ್ನು ಬಗೆಹರಿಸುವ ಜವಾಬ್ದಾಾರಿ ಅವರುಗಳದ್ದೇ ಆಗುತ್ತದೆ. ಅವರ ಮಾತನ್ನೇ ನಂಬುತ್ತೇವೆಯೇ ವಿನಃ ತಂತ್ರಜ್ಞರಲ್ಲದೇ ಊಹಾಪೋಹದ ಮಾತುಗಳನ್ನಾಡಿದರೆ ಕೇಳಲು ಸಾಧ್ಯವಾ. ಯಾವುದೇ ಚರ್ಚೆ ತಾರ್ಕಿಕವಾಗಿರಬೇಕು. ಡ್ಯಾಂ ಕಟ್ಟುತ್ತಾರೆ, ನಾಳೆ ಮಳೆ ಬರುತ್ತದೋ ಇಲ್ಲವೋ, ವಿಧೇಯಕಗಳನ್ನೇ ಬದಲು ಮಾಡಿದವರು ಎಸ್ಟಿಮೇಟ್‌ಗಳನ್ನು ಬದಲು ಮಾಡಲು ಸಾಧ್ಯವಿಲ್ಲವೇ, ತಾಲ್ಲೂಕಿನ ರೈತರ ಮಾರಣ ಹೋಮವೇ ಇದರಿಂದಾಗುತ್ತದೆ. ಡ್ಯಾಂ ಕಟ್ಟಿ ಮುಳುಗಡೆ ಮಾಡಲಾಗುತ್ತದೆ. ಹಿಂದೆ ಮಾಡಿಸಿದ ಏತ ನೀರಾವರಿ ಸೇರಿದಂತೆ ಹಲವು ಕಾಮಗಾರಿಗಳು ಹಳ್ಳ ಹಿಡಿದಿವೆ. ಇದೂ ಹಳ್ಳ ಹಿಡಿಯುತ್ತದೆ ಎಂದು ಭವಿಷ್ಯತ್ ಕಾಲದ ಮಾತುಗಳನ್ನಾಡುವುದರ ಜೊತೆಗೆ ಈ ಯೋಜನೆ ಅನುಷ್ಠಾನಕ್ಕೆೆ ಬರುವುದರಿಂದ ಇದುವರೆಗೆ ವ್ಯಯಿಸಿದ ಹಣ ವ್ಯರ್ಥವಾಗುತ್ತದೆ ಎಂದೆಲ್ಲಾ ಮಾತನಾಡುವ ಮೂಲಕ ಯೋಜನೆಯ ಅನುಷ್ಠಾನಕ್ಕೆೆ ವ್ಯವಸ್ಥಿತವಾದ ಪಿತೂರಿ ನಡೆಸುವುದು ಗ್ರಾಮ ಪಂಚಾಯಿತಿಗಳಿಗೆ ಶುದ್ಧ ಕುಡಿಯುವ ನೀರು ನೀಡಬೇಕೆಂಬ ಕನಸನ್ನು ಭಗ್ನಗೊಳಿಸುವ ಆಲೋಚನೆಯಾಗಿದೆಯೇ ಎಂಬ ಪ್ರಶ್ನೆೆಯೂ ಕಾಡುವಂತಾಗಿದೆ ಎಂದರು.

ಸುಧೀರ್ ವಿಧಾತ ,ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!