ಮೃತ ಯುವಕ ಅಮರ್ ಶೆಟ್ಟಿ
ಹೊಟೇಲ್ ಉದ್ಯಮಿ ಅಮರ್ ಶೆಟ್ಟಿಗೆ ಜ್ವರಕ್ಕೆಂದು ಕೊಟ್ಟ ಇಂಜೆಕ್ಷನ್ ಅಡ್ಡ ಪರಿಣಾಮ ಬೀರಿ ಸಾವು..!
ಕುಂದಾಪುರ: ಜ್ವರ ಕಡಿಮೆಯಾಗಲೆಂದು ವೈದ್ಯರು ನೀಡಿದ ಚುಚ್ಚುಮದ್ದು ದೇಹದ ಒಳ ಸೇರುತ್ತಿದ್ದಂತೆ ಅಡ್ಡ ಪರಿಣಾಮ ಬೀರಿದ ಹಿನ್ನಲೆಯಲ್ಲಿ ಕಟ್ಟುಮಸ್ತಾದ ಸುಂದರ ಯುವಕನೊಬ್ಬ ಸಾವಿನ ಮನೆ ಸೇರಿದ್ದಾನೆ.ಈ ಘಟನೆ ನೆಡೆದದ್ದು ಬೆಂಗಳೂರಿನ ಕೆ.ಪಿ. ಅಗ್ರಹಾರದಲ್ಲಿ
ಕುಂದಾಪುರ ತಾಲ್ಲೂಕಿನ ಹೊಸಂಗಡಿ ಸಮೀಪದ ಬೆದ್ರಳ್ಳಿ ನಿವಾಸಿ ದಿ. ಚಂದ್ರ ಶೆಟ್ಟಿ ಎಂಬುವವರ ಪುತ್ರ ಅಮರ್ ಶೆಟ್ಟಿ ಮೂವತ್ತೊಂದು ವರ್ಷದ ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ದೂರದ ದುಬೈನಲ್ಲಿ ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದ ಅಮರ್ ಶೆಟ್ಟಿ ಒಂದು ವರ್ಷದ ಹಿಂದಷ್ಟೇ ತವರೂರಿಗೆ ಹಿಂದಿರುಗಿದ್ದ ಅಮರ್ ಬೆಂಗಳೂರಿನಲ್ಲಿ ಹೋಟೆಲ್ ವ್ಯವಹಾರ ಮಾಡಿಕೊಂಡಿದ್ದರು.
ಆಗಸ್ಟ್13ರಂದು ಕೆ.ಪಿ. ಅಗ್ರಹಾರದ ಸಂಬಂಧಿಕರ ಮನೆಗೆ ಹೋಗಿದ್ದಾಗ ಮೈ ಯಾಕೊ ಬಿಸಿ ಇರುವುದನ್ನು ಗಮನಿಸಿದ ಅಮರ್ ಅಲ್ಲಿಯೇ ಸಮೀಪವಿದ್ದ ಖಾಸಗಿ ಕ್ಲಿನಿಕ್‌ಗೆ ತೆರಳಿದ್ದಾರೆ ವೈದ್ಯರು ಪರೀಕ್ಷಿಸಿ ಜ್ವರವೆಂದು ಇಂಜೆಕ್ಷನ್ ಹಾಗೂ ಮಾತ್ರೆಗಳನ್ನು ನೀಡಿದ್ದಾರೆ. ಆದರೆ ಅಮರ್ ಶೆಟ್ಟಿಗೆ ಇಂಜೆಕ್ಷನ್ ನೀಡಿದ ಭಾಗ ತಕ್ಷಣವೇ ಊದಿಕೊಂಡು ನೋವು ಕಾಣಿಸಿಕೊಂಡಿದೆ.
ಹಾಗಾಗಿ ಆಗಸ್ಟ್ 15ರಂದು ರಾಜಾಜಿನಗರದ ಖಾಸಗಿ ಕ್ಲಿನಿಕ್‌ಗೆ ತೆರಳಿದ್ದಾರೆ. ವೈದ್ಯರು ಪರೀಕ್ಷಿಸಿ ಮಾತ್ರೆ ಹಾಗೂ ಗ್ಲೂಕೋಸ್ ನೀಡಿದ್ದರು. ಒಂದು ದಿನದ ಬಳಿಕ ನೋವು ಕಡಿಮೆಯಾಗದಿದ್ದರೆ ಚಿಕಿತ್ಸೆ ನೀಡುವುದಾಗಿ ಹೇಳಿ ಕಳುಹಿಸಿದ್ದರು. ಆದಾಗ್ಯೂ ನೋವು ಕಡಿಮೆಯಾಗದ ಕಾರಣಕ್ಕೆ ಆಗಸ್ಟ್ 16ರಂದು ಕೀಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು.
ಅಲ್ಲಿ ಪರೀಕ್ಷಿಸಿದಾಗ ವೈದ್ಯರು ಇಂಜೆಕ್ಷನ್ ಅಡ್ಡ ಪರಿಣಾಮದಿಂದಿಂದ ಮಲ್ಟಿ ಆರ್ಗನ್ ಡಿಸ್ ಫಂಕ್ಷನ್ ಆಗಿದೆ ಎಂದು ವೈದ್ಯರು ಕುಟುಂಬಸ್ಥಕರಿಗೆ ತಿಳಿಸಿದ್ದಾರೆ. ಆಗಸ್ಟ್ 18ರ ಸಂಜೆ ಅಮರ್ ಶೆಟ್ಟಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಬಾಳಿ ಬದುಕಬೇಕಾದ ಮನೆಯ ಮಗನನ್ನು ಕಳೆದುಕೊಂಡ
ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಮೃತನ ಅಂತ್ಯಸಂಸ್ಕಾರವನ್ನು ತಾಯಿ ಮನೆ ಶಂಕರನಾರಾಯಣದ ಹದ್ದೂರಿನಲ್ಲಿ ನಡೆಸಲಾಗಿದೆ. ಮೃತ ಯುವಕ ಅಮರ್ ಶೆಟ್ಟಿ ತಾಯಿ ಹಾಗೂ ಇಬ್ಬರು ಸಹೋದರರು, ಓರ್ವ ಸಹೋದರಿ ಹಾಗೂ ಕುಟುಂಬಸ್ಥರನ್ನು ಬಿಟ್ಟು ಅಗಲಿದ್ದಾರೆ.