ಕುಂದಾಪುರ ಉದ್ಯಮಿ ಸುರೇಂದ್ರ ಶೆಟ್ಟಿ ಹತ್ಯೆಯತ್ನ.! ಓರ್ವನ ಬಂಧನ
ಅಶ್ವಸೂರ್ಯ/ಶಿವಮೊಗ್ಗ: ಕುಂದಾಪುರದ ಕೂಗಳತೆ ದೂರದಲ್ಲಿರುವ ಕೋಟೇಶ್ವರದ ಸಹನಾ ಸಮೂಹ ಸಂಸ್ಥೆಗಳ ಮಾಲಿಕ ಸುರೇಂದ್ರ ಶೆಟ್ಟಿ ಅವರನ್ನು ಹತ್ಯೆಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಕುಂದಾಪುರ ಪೊಲೀಸರು ಹೆಡೆಮುರಿ ಕಟ್ಟಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕರಾವಳಿ ಭಾಗದ ಪ್ರಸಿದ್ಧ ಎಸ್.ಎಸ್.ಎಸ್. ಟ್ರಾವೆಲ್ಸ್ ಎಂಬ ಸಂಸ್ಥೆಯೊಂದರ ಮಾಲಿಕರಾದ ಸತೀಶ್ ಶೆಟ್ಟಿ(53) ಬಂಧಿತ ಆರೋಪಿ. ಈತನ ಪುತ್ರ ಸನ್ನಿಧಿ ಶೆಟ್ಟಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಹನಾ ಎನ್ನುವ ಮಹಿಳೆ ಸುರೇಂದ್ರ ಶೆಟ್ಟಿಯವರ ಪತ್ನಿ ಕುಂದಾಪುರ ನಗರದ ಎ.ಎಸ್. ಟ್ರೇಡರ್ ಎಂಬ ಕಟ್ಟಡದಲ್ಲಿ ಮಳೆ ನೀರು ಸೋರಿಕೆ ಸಂಬಂಧ ಕೆಲಸ ಮಾಡಿಸುತ್ತಿದ್ದರು. ಈ ಬಗ್ಗೆ ಒಂದನೇ ಮಹಡಿಯಲ್ಲಿರುವ ಸತೀಶ್ ಶೆಟ್ಟಿ ಎಂಬಾತ ಅಸಮಧಾನ ವ್ಯಕ್ತಪಡಿಸಿದ್ದನಂತೆ.! ಇದೇ ವಿಚಾರವಾಗಿ ಆತ ಸುರೇಂದ್ರ ಶೆಟ್ಟಿಗೆ ಕರೆ ಮಾಡಿ ಅವಾಚ್ಯವಾಗಿ ಬೈದಿದ್ದನಂತೆ ಎಂದು ತಿಳಿದುಬಂದಿದೆ.
ಹಲ್ಲೆಗೆ ಒಳಗಾದ ಸುರೇಂದ್ರ ಶೆಟ್ಟಿ
ಜು.7ರಂದು ಬೆಳಗ್ಗೆ ಕುಂದಾಪುರದ ಕಡೆ KSRTC ಡಿಪೋ ಎದುರಿನ ಸರ್ವಿಸ್ ರಸ್ತೆಯಲ್ಲಿ ಸುರೇಂದ್ರ ಶೆಟ್ಟಿಯವರ ಕಾರಿಗೆ ತಮ್ಮ ಕಾರನ್ನು ಅಡ್ಡ ನಿಲ್ಲಿಸಿ ಕಬ್ಬಿಣದ ರಾಡ್ ಮೂಲಕ ಹಲ್ಲೆ ನಡೆಸಲು ಯತ್ನಿಸಲಾಗಿದೆ. ಈ ವೇಳೆ ಕಾರಿನ ಗ್ಲಾಸ್ ಹಾಗೂ ಬಾಗಿಲು ತೆಗೆಯದಿದ್ದರಿಂದ ಕಾರಿನ ಡೋರ್ ಜಖಂ ಮಾಡಿದ್ದಲ್ಲದೆ ಪೊಲೀಸರಿಗೆ ದೂರು ನೀಡಿದರೆ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದಾರೆಂದು ದೂರು ದಾಖಲಿಸಲಾಗಿದೆ.
ಈ ಪ್ರಕರಣ ಸಂಬಂಧ ಕುಂದಾಪುರ ಪೊಲೀಸರು ತಕ್ಷಣ ಕಾರ್ಯಚರಣೆಗೆ ಇಳಿದು ಆರೋಪಿ ಸತೀಶ್ ಶೆಟ್ಟಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.