ಸುಳ್ಳು ಸುದ್ದಿ ಹಾಗೂ ಅಪಪ್ರಚಾರದ ಮೂಲಕ ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ : ಮಾಜಿ ಉಪ ಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ
ASHWASURYA/SHIVAMOGGA
✍️ ಸುಧೀರ್ ವಿಧಾತ
ಅಶ್ವಸೂರ್ಯ/ಶಿವಮೊಗ್ಗ: ಬಿಜೆಪಿಯ ಶಿವಮೊಗ್ಗ ಲೋಕಸಭಾ ಅಭ್ಯರ್ಥಿ ಬಿವೈ ರಾಘವೇಂದ್ರ ಮತದಾನದ ದಿನ ಕೊನೇ ಗಳಿಗೆಯಲ್ಲಿ ಸುಳ್ಳು ಸುದ್ದಿ ಹಾಗೂ ಅಪಪ್ರಚಾರದ ಮೂಲಕ ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದು, ಕೂಡಲೇ ಅವರನ್ನು ಬಂಧಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆಎಸ್ ಈಶ್ವರಪ್ಪ ಗುರುವಾರ ಒತ್ತಾಯಿಸಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಮತದಾನದ ದಿನ ಕೊನೇ ಗಳಿಗೆಯಲ್ಲಿ ಸುಳ್ಳು ಸುದ್ದಿ ಹಾಗೂ ಅಪಪ್ರಚಾರದ ಮೂಲಕ ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದು ಅಲ್ಲದೆ ನನ್ನ ಅಭಿಮಾನಿಗಳು ಮತ್ತು ಮತದಾರರಲ್ಲಿ ಗೊಂದಲ ಮೂಡುವಂತೆ ಮಾಡಿದ್ದಾರೆ ಕೂಡಲೇ ಅವರನ್ನು ಬಂಧಿಸಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಗುಡುಗಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಪತ್ರಿಕೆಯ ಹೆಸರಿಲ್ಲದೆ, ಸುದ್ದಿ ರೂಪದಲ್ಲಿ ಪ್ರಕಟವಾಗಿರುವ ನಕಲಿ ಸುದ್ದಿಗಳನ್ನು ಒಳಗೊಂಡ ಪೆನ್ ಡ್ರೈವ್ ಅನ್ನು ಬಿಡುಗಡೆ ಮಾಡಿದರು. ಇದರಲ್ಲಿ ಈಶ್ವರಪ್ಪ ಅವರು ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ ಎಂಬ ರೀತಿ ಬಿಂಬಿಸಲಾಗಿದೆ. ರಾಘವೇಂದ್ರ ಅವರು ಶಿಕಾರಿಪುರದಲ್ಲಿ ಸಾರ್ವಜನಿಕ ಸಭೆ ಆಯೋಜಿಸದಂತೆ ತಡೆದಿದ್ದು, ಶಿರಾಳಕೊಪ್ಪದ ರಾಷ್ಟ್ರಭಕ್ತರ ಬಳಗದ ಕಚೇರಿಯಲ್ಲಿ ಮಾಂತ್ರಿಕ ಕೃತ್ಯವೆಸಗಿದ್ದಾರೆ ಎಂದು ಮಾಜಿ ಡಿಸಿಎಂ ಆರೋಪಿಸಿದ್ದಾರೆ.
ನನ್ನ ಪರವಾಗಿ ಬಿಜೆಪಿಗೆ ವೋಟ್ ಕೊಡಿ, ಈಶ್ವರಪ್ಪ, ನನಗೆ ನನ್ನ ತಪ್ಪಿನ ಅರಿವಾಗಿದೆ, ಕಾಂಗ್ರೆಸ್ಸಿಗೆ ಲಾಭವಾಗುವುದು ಬೇಡ ಈ ರೀತಿಯ ಶೀರ್ಷಿಕೆಯಲ್ಲಿ ಹಳೆಯ ಫೋಟೋಗಳನ್ನು ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿರುವಂತೆ ಮಾಡಲಾಗಿದೆ. 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಶಿವಮೊಗ್ಗ ಬಿಜೆಪಿ ಅಭ್ಯರ್ಥಿಯಾಗಿದ್ದ ಬಿ ವೈ ರಾಘವೇಂದ್ರ ಅವರ ಪರ ಪ್ರಚಾರ ಮಾಡಿದ್ದ ವಿಡಿಯೋವೊಂದು ಇದೀಗ ವೈರಲ್ ಆಗುವಂತೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಮತದಾನದ ದಿನದಂದು ವೈರಲ್ ಆಗಿರುವ ಸುಳ್ಳು ಸುದ್ದಿ ಮತ್ತು ವಿಡಿಯೋಗಳನ್ನು ತಯಾರಿಸಿ ಹರಿಬಿಟ್ಟಿರುವ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದೇನೆ. ಈ ಸಮಸ್ಯೆಯು ಕೆಲವು ಮತದಾರರನ್ನು ಗೊಂದಲಕ್ಕೀಡುಮಾಡಿದೆ ಮತ್ತು ಅನೇಕರು ನನ್ನ ಪರವಾಗಿ ತಮ್ಮ ಮತಗಳನ್ನು ಚಲಾಯಿಸುವುದನ್ನು ತಡೆದಿದೆ ಎಂದು ಈಶ್ವರಪ್ಪ ಹೇಳಿದ್ದಾರೆ.
ಈ ಬಗ್ಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಒಂದು ವಾರದವರೆಗೆ ಕಾಲಾವಕಾಶ ನೀಡುವುದಾಗಿ ತಿಳಿಸಿದ ಈಶ್ವರಪ್ಪ, ತಪ್ಪಿದ್ದಲ್ಲಿ ಮುಂದಿನ ಹಾದಿಯ ಬಗ್ಗೆ ತೀರ್ಮಾನಿಸಬೇಕಾಗುತ್ತದೆ ಎಂದರು.
‘ಬಿಜೆಪಿ ನನ್ನ ತಾಯಿ ಇದ್ದಂತೆ, ನಾನು ಪಕ್ಷದ ಜೊತೆ ಇರುತ್ತೇನೆ. ಚುನಾವಣಾ ಫಲಿತಾಂಶದ ನಂತರ ಹೊಸ ಪಕ್ಷ ಕಟ್ಟಲು ನಾನು ಬಿಎಸ್ ಯಡಿಯೂರಪ್ಪ ಅಲ್ಲ. ಬಿಜೆಪಿಯ ಹಿಂದುತ್ವ ಸಿದ್ಧಾಂತವನ್ನು ರಕ್ಷಿಸುವುದು ನನ್ನ ಏಕೈಕ ಗುರಿಯಾಗಿದೆ ಎಂದರು