ಬಂಗಾರಪ್ಪರ ಅನ್ಯಾಯದ ಸೋಲಿಗೆ ನ್ಯಾಯ ಕಂಡುಕೊಳ್ಳಬೇಕಿದೆ : ಸಚಿವ ಮಧು ಬಂಗಾರಪ್ಪ
ASHWASURYA/SHIVAMOGGA
✍️ ಸುಧೀರ್ ವಿಧಾತ
ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಅವರನ್ನು ಅಂದು ಅನ್ಯಾಯದಿಂದ ಸೋಲಿಸಲಾಗಿತ್ತು. ಅದು ಅವರ ನ್ಯಾಯದ ಸೋಲಲ್ಲ. ಆದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ನಿವೆಲ್ಲರೂ ಗೀತಕ್ಕನಿಗೆ ಮತ ನೀಡಿ ಆ ಸೋಲಿಗೆ ನ್ಯಾಯ ಕಂಡುಕೊಳ್ಳಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪನವರು ಗೀತಾ ಶಿವರಾಜಕುಮಾರ್ ಪರ ಮತಯಾಚನೆಯ ಸಂಧರ್ಭದಲ್ಲಿ ಹೇಳಿದರು.
ಸೊರಬ ವಿಧಾನಸಭಾ ವ್ಯಾಪ್ತಿಯ ಸೊರಬ, ಚಂದ್ರಗುತ್ತಿ , ಜಡೆ, ಕುಪ್ಪಗಡ್ಡೆಯಲ್ಲಿ ಗುರುವಾರ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಪರ ಆಯೋಜಿಸಿದ್ದ ರೋಡ್ ಷೊನಲ್ಲಿ ಸಚಿವರಾದ ಮಧು ಬಂಗಾರಪ್ಪನವರು ಪಾಲ್ಗೊಂಡು ಮಾತನಾಡಿದರು.
ಹಿಂದೆ ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಿದ್ದ ಬಂಗಾರಪ್ಪ ಅವರ ಋಣ ಇಲ್ಲಿ ತೀರಿಸಬೇಕಿದೆ. ರಾಜ್ಯದಲ್ಲಿ ಆಶ್ರಯ, ಆರಾಧನ, ಗ್ರಾಮೀಣ ಕೃಪಾಂಕ ನೀಡಿ, ಜನ ಸಾಮಾನ್ಯರಿಗೆ ನೆರವಾಗಿದ್ದರು.ಬಡವರ ಪರ ಯೋಜನೆಗಳ ಹರಿಕಾರರಾಗಿದ್ದ ಎಸ್ ಬಂಗಾರಪ್ಪ ನವರನ್ನೆ ಅಂದು ಚುನಾವಣೆಯಲ್ಲಿ ಸೋಲಿಸಲಾಯಿತು. ಇದಕ್ಕೆ ಉತ್ತರ ಕಂಡುಕೊಳ್ಳಬೇಕಿದೆ ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನರಿಗೆ ಸುಳ್ಳುಗಳನ್ನು ಹೇಳಿ, ಅಧಿಕಾರ ನಡೆಸುತ್ತಿದ್ದಾರೆ. ಇಲ್ಲಿ ಬಿಜೆಪಿ ಪಕ್ಷದವರು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದಾರೆ. ಆದರೆ, ಬಿಜೆಪಿಯವರು ಕೂಡ ಗ್ಯಾರಂಟಿಗಳ ಫಲಾನುಭವಿಗಳಾಗಿದ್ದಾರೆ. ಇದನ್ನು ಮರೆಯಕೂಡದು ಎಂದರು.
ಕ್ಷೇತ್ರದ ಧ್ವನಿಯಾಗಿ ಗೀತಕ್ಕ ನಿಲ್ಲಲಿದ್ದಾರೆ. ಜಾತಿ-ಧರ್ಮ, ಹಣದ ಅಮಲಿನಿಂದ ಇಲ್ಲಿ ಅಧಿಕಾರ ನಡೆಸಲು ಗೀತಕ್ಕ ಚುನಾವಣೆಗೆ ಸ್ಪರ್ಧಿಸಿಲ್ಲ, ಬದಲಿಗೆ
ನಿಮ್ಮ ಸಮಸ್ಯೆಗೆ ಪರಿಹಾರವಾಗಿ ಗೀತಕ್ಕ ಸ್ಪರ್ಧಿಸಿದ್ದಾರೆ. ಆದ್ದರಿಂದ, ಮತ ನೀಡಿ ಆಶೀರ್ವದಿಸಬೇಕು ಎಂದರು.
ನಟ ಶಿವರಾಜಕುಮಾರ್ ಮಾತನಾಡಿ, ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು. ಆದರೆ, ಅದಕ್ಕೆ ಅವಕಾಶ ನೀಡಬೇಕು. ಕೆಲವರು ಅಧಿಕಾರ ನಡೆಸಲು ಗೀತಾಗೆ ಅನುಭವ ಕಡಿಮೆಯೆಂದು ಟೀಕಿಸುತ್ತಿದ್ದಾರೆ. ಕ್ಷೇತ್ರದ ಜನರಿಗೆ ಸೇವೆ ಸಲ್ಲಿಸಲು ಅನುಭವ ಬೇಡ, ಒಳ್ಳೆಯ ಮನಸ್ಸಿರಬೇಕು ಎಂದರು.
ಇಲ್ಲಿ ಅನುಭವ ಉಳ್ಳವರು ಏನು ಸಾಧನೆ ಮಾಡಿದ್ದಾರೆ. ಸೇವೆಯ ಹೆಸರಿನಲ್ಲಿ ನಾಟಕ ಮಾಡುವ ಅವಶ್ಯಕತೆ ಇಲ್ಲ. ನಮ್ಮ ತಂದೆ ನಮಗೆ ಸಂಸ್ಕಾರ ಹೇಳಿಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ಗೀತಾಗೆ ಮನೆಯಿಲ್ಲವೆಂದು ಅನಾವಶ್ಯಕ ಟೀಕೆ ಸಲ್ಲದು. ಇಲ್ಲಿ ಮತದಾರರ ಹೃದಯದಲ್ಲಿ ಮನೆ ಮಾಡಬೇಕು.ಜಿಲ್ಲೆಯು ಗೀತಾಗೆ ತವರು ಮನೆ. ಟೀಕಿಸುವ ಮೊದಲು ಅರಿತು ಮಾತನಾಡಬೇಕು ಎಂದು ಹೇಳಿದರು.
ನಟ ದುನಿಯಾ ವಿಜಯ ಮಾತನಾಡಿ,
ಇಲ್ಲಿನ ಬಂಗಾರಧಾಮ ನೋಡಿ ಭಾವುಕನಾದೆ. ಅದನ್ನು ದೇವಸ್ಥಾನವೆಂದು ಪರಿಗಣಿಸಬಹುದು. ಕೆಲವರು ಗೀತಕ್ಕ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟೀಕಿಸುತ್ತಿದ್ದಾರೆ. ಇದು ನೋವುಂಟು ಮಾಡಿದೆ ಎಂದರು.
ಒಳ್ಳೆಯವರಿಗೆ ಕೆಟ್ಟದನ್ನು ಬಯಸಿದರೆ, ಕೆಟ್ಟದ್ದೇ ಆಗುತ್ತದೆ. ಆದ್ದರಿಂದ ಎಚ್ಚರಿಕೆಯಿಂದ ಇರಬೇಕು.
ದ್ವೇಷ ರಾಜಕಾರಣ ಸರಿಯಲ್ಲ. ಗೀತಕ್ಕ ಕ್ಷೇತ್ರದಲ್ಲಿಯೇ ನೆಲಸಲಿದ್ದಾರೆ. ಜನರ ಕಷ್ಟಗಳಿಗೆ ಸ್ಪಂದಿಸಲಿದ್ದಾರೆ. ಆದ್ದರಿಂದ, ಮತ ನೀಡಿ ಆಶೀರ್ವದಿಸಿ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಮಾತನಾಡಿ,
ಸೊರಬ ಕ್ಷೇತ್ರ ನನ್ನ ಮನೆ. ರಾಜ್ಯದಲ್ಲಿ
ಚುನಾವಣೆಯ ಬಳಿಕ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುತ್ತದೆ ಎಂದು ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ. ಆದರೆ, ಅದು ಸುಳ್ಳು ಮಾಹಿತಿ. ಅದಕ್ಕೆ ಜನರು ಕಿವಿ ಕೊಡಕೂಡದು. ಕ್ಷೇತ್ರದ ಜನರ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಿ ಎಂದರು.
‘. ಕ್ಷೇತ್ರದ ಅಳಿಯ ನಾನು : ಶಿವಣ್ಣ
ಸೊರಬ ಕ್ಷೇತ್ರದ ಅಳಿಯ ನಾನು. ಹಿಂದಿನ ಚುನಾವಣೆಯಲ್ಲಿ ಸಚಿವ ಮಧುಬಂಗಾರಪ್ಪ ಅವರಿಗೆ ಮತ ನೀಡಿ ಆಶೀರ್ವದಿಸಿದ್ದ ಜನರು, ಈ ಲೋಕಸಭಾ ಚುನಾವಣೆಯಲ್ಲಿ ಪತ್ನಿ ಗೀತಾಗೆ ಮತ ನೀಡಿ ಆಶೀರ್ವದಿಸಬೇಕು
– ನಟ ಶಿವರಾಜಕುಮಾರ್