ಪಕ್ಷಕ್ಕೆ ಸೇರುವಾಗ ಜಾಮೂನು, ಈಗ ವಿಷ ಕೊಡ್ತಾರೆ : ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಕೆ ಎಸ್ ಈಶ್ವರಪ್ಪನವರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ!!
News.Ashwasurya.in
ಮೈಸೂರು: ಅಂದು ಕಾಂಗ್ರೆಸ್ ಪಕ್ಷಕ್ಕೆ ನಾನು ರಾಜೀನಾಮೆ ಕೊಟ್ಟು ಬಿಜೆಪಿಗೆ ಬರುವಾಗ ಜಾಮೂನು ಕೊಟ್ಟಿದ್ದರು ಈಗ ಅಧಿಕಾರ ಮುಗಿದ ಮೇಲೆ ವಿಷ ಕೊಡ್ತಾರೆ. ನನ್ನನ್ನ ಪಕ್ಷದಿಂದ ಹೊರಹಾಕಲು ಕೆಲವರು ಮಾನಸಿಕವಾಗಿ ಸಿದ್ಧರಾಗಿ ಬಿಟ್ಟಿದ್ದಾರೆ. ವಿಧಾನಸಭೆ ಚುನಾವಣೆ ಮುಗಿದ ಬಳಿಕ ಪಕ್ಷದಲ್ಲಿ ( ಬಿಜೆಪಿ ) ನನಗೆ ಸೂಕ್ತ ಗೌರವ ದೊರೆಯುತ್ತಿಲ್ಲ’ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಅಸಮಾಧಾನ ವ್ಯಕ್ತಪಡಿಸಿದರು.
ಈಗ ಪಕ್ಷದಲ್ಲಿ ಉಸಿರುಗಟ್ಟಿಸುವಂತಹ ವಾತಾವರಣ ಸೃಷ್ಟಿಯಾಗಿದೆ. ಐದಾರು ಜನ ನನ್ನನ್ನು ಈಗಲೇ ಹೋಗಲಿ ಎನ್ನುತ್ತಿದ್ದಾರೆ. ನಾನು ಆಧಿಕಾರಕ್ಕಾಗಿ ಯಾರ ಬಳಿಯೂ ಹೋಗುತ್ತಿಲ್ಲ ಹೋಗುವುದು ಇಲ್ಲ, ಕಾಂಗ್ರೆಸ್ ಪಕ್ಷವು ಬಹುಮತದಿಂದ ಅಧಿಕಾರಕ್ಕೆ ಬಂದಿದೆ ಅವರಿಗೆ ನನ್ನ ಅಗತ್ಯವೂ ಇಲ್ಲ. ಆದರೆ ನನ್ನ ಕ್ಷೇತ್ರದ ಹಿತದೃಷ್ಟಿಯಿಂದ ಕಾಂಗ್ರೆಸ್ ಸರ್ಕಾರದ ಒಡನಾಟ ನನಗೆ ಬೇಕಿದೆ’ ಎಂದು ಮೈಸೂರು ನಗರದಲ್ಲಿ ಬುಧವಾರ ಹೇಳಿದರು.
ನನ್ನನ್ನು ಪಕ್ಷ ಬಿಟ್ಟು ಹೋಗುವಂತೆ ಹೇಳಲು ಈಶ್ವರಪ್ಪ ಅವರಿಗೆ ನೈತಿಕ ಶಕ್ತಿಯಿಲ್ಲ. ಯಡಿಯೂರಪ್ಪ ನನ್ನನ್ನು ಪಕ್ಷಕ್ಕೆ ಕರೆತಂದವರು ಅವರೇ ಕರೆದು ಪಕ್ಷ ಬಿಡಬೇಡ ಎಂದಿದ್ದಾರೆ. ಮತ್ತೆ ಇವರು ಯಾರು? ಸ್ವತಃ ಟಿಕೆಟ್ ಪಡೆಯಲು ಆಗದ ಅಶಕ್ತರ ಮಾತಿಗೆ ಉತ್ತರ ನೀಡಿ ನನ್ನ ಗೌರವ ಕಳೆದುಕೊಳ್ಳುವುದಿಲ್ಲ ಅದು ನನಗೆ ಬೇಕಿಲ್ಲ ಎಂದು ಹರಿಹಾಯ್ದಿದ್ದಾರೆ.
ನನ್ನ ಕ್ಷೇತ್ರದ ಜನರಿಗೆ ಗ್ಯಾರಂಟಿ ಪ್ರಯೋಜನ ದೊರೆಯಲು ಪ್ರಯತ್ನಿಸುತ್ತಿದ್ದೇನೆ. ಕ್ಷೇತ್ರಕ್ಕೆ ಬಂದ ಸಿ.ಎಂ, ಡಿಸಿಎಂ ಜತೆ ಸಮಸ್ಯೆ ಚರ್ಚಿಸಿದ್ದೇನೆ. ಇದು ದೊಡ್ಡ ತಪ್ಪಾ? ನನ್ನ ಮತದಾರರು ಅಭಿವೃದ್ದಿ ಯಾಗಬಾರದೇ? ಬರ ವೀಕ್ಷಣೆಗೆ ಕೇಂದ್ರದ ಅಧಿಕಾರಿಗಳು ಬಂದು ಹೋಗಿದ್ದಾರೆ ಆದರೆ ಇನ್ನೂ ಯಾವುದೇ ಪರಿಹಾರ ಕೂಡ ಬಂದಿಲ್ಲ. ನನ್ನನ್ನು ಕರೆಯದಿದ್ದರೂ ಪರವಾಗಿಲ್ಲ, ಅವರಾದರೂ ಹಿಂದೆ ಬಿದ್ದು ಪರಿಹಾರ ಕೂಡಿಸಲು ಪ್ರಯತ್ನಿಸಲಿ ಎಂದು ಕಿಡಿಕಾರಿದರು.
————-+++++++++++————–
ನಾನು ಶಾಸಕ ಎಸ್.ಟಿ.ಸೋಮಶೇಖರ್ ಅವರನ್ನು ಪಕ್ಷ ಬಿಟ್ಟು ಹೋಗು ಎಂದಿಲ್ಲ : ಕೆ ಎಸ್ ಈಶ್ವರಪ್ಪ
ನಾನು ಶಾಸಕ ಎಸ್.ಟಿ.ಸೋಮಶೇಖರ್ ಅವರನ್ನು ಪಕ್ಷ ಬಿಟ್ಟು ಹೋಗು ಎಂದಿಲ್ಲ : ಕೆ ಎಸ್ ಈಶ್ವರಪ್ಪ
News.Ashwasurya.in
Political news:
ಬೆಂಗಳೂರು: ಬಿಜೆಪಿಯವರು ಕರೆಸಿ ಜಾಮೂನು ತಿನ್ನಿಸಿ, ಈಗ ವಿಷ ಕೊಟ್ಟಿದ್ದಾರೆ. ನನ್ನ ಬಗ್ಗೆ ಮಾತನಾಡಲು ಈಶ್ವರಪ್ಪ ಯಾರು ಎಂದು ಸೋಮಶೇಖರ್ ನೀಡಿರುವ ಹೇಳಿಕೆಗೆ ಸುದ್ದಿಗೋಷ್ಠಿಯಲ್ಲಿ ಈಶ್ವರಪ್ಪನವರು ಪ್ರತಿಕ್ರಿಯೆ ನೀಡಿದ್ದಾರೆ.
ಸೋಮಶೇಖರ ಅವರನ್ನು ಪಕ್ಷ ಬಿಟ್ಟು ಹೋಗು ಎಂದಿಲ್ಲ. ಹಾಗೆ ಹೇಳಲು ನಾನ್ಯಾರು? ನಮ್ಮ ಪಕ್ಷದಲ್ಲಿ ಅನೇಕರು ಜಾಮೂನ್ ತಿಂದಿದ್ದಾರೆ ಹೊರತು ವಿಷ ಕುಡಿದವರು ಒಬ್ಬರಾದರೂ ಇದ್ದಾರಾ? ಅದರಲ್ಲೂ ಅವರು ಜಾಮೂನ್ ತಿಂದು ಸಚಿವರಾದರು. ನಾವೂ ಸಚಿವರಾದೆವು. ಸರ್ಕಾರವೂ ಬಂತು. ಬಿಜೆಪಿ ಈಗ ಅಧಿಕಾರಕ್ಕೆ ಬಂದಿದ್ದರೆ ಈ ರೀತಿ ಮಾತನಾಡುತ್ತಿದ್ದರಾ? ಬಿಜೆಪಿಯಲ್ಲಿ ಕೋಟ್ಯಂತರ ಕಾರ್ಯಕರ್ತರಿದ್ದಾರೆ. ಬಿಜೆಪಿಯಲ್ಲಿ ಶಾಸಕರಾಗಿ ಇದ್ದು ಈ ರೀತಿ ಮಾತನಾಡುವುದು ಯಾರಿಗೂ ಒಳ್ಳೆಯದಲ್ಲ. ಎಂದು ಹೇಳಿದರು.
ನಮಗೂ ತಲೆಹರಟೆ ಮಾತನಾಡುವವರನ್ನು ಯಾವಾಗ ತೆಗೆಯಬೇಕು ಗೊತ್ತಿದೆ. ಸಂದರ್ಭ ಬಂದಾಗ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಅವರು ತಮ್ಮದೇ ಪಕ್ಷದ ಶಾಸಕ ಎಸ್.ಟಿ.ಸೋಮಶೇಖರ್ ಅವರನ್ನು ಮತ್ತೊಮ್ಮೆ ಟಾರ್ಗೆಟ್ ಮಾಡಿ ಮಾತನಾಡಿದ್ದಾರೆ
ಸುಧೀರ್ ವಿಧಾತ ,ಶಿವಮೊಗ್ಗ