ರಾಜ್ಯ JDS ಕಾರ್ಯಕಾರಿ ಸಮಿತಿ ವಿಸರ್ಜನೆ ಮಾಡಿದ ಜೆಡಿಎಸ್ ವರಿಷ್ಠರು. ಕುಮಾರಸ್ವಾಮಿಗೆ JDS ಪಕ್ಷದ ಹೊಣೆ
ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆ ಮುಗಿದ ಮೇಲೆ ಸ್ಥಗಿತಗೊಂಡಿದ್ದ ಪಕ್ಷದ ಚಟುವಟಿಕೆಗಳಿಗೆ ವೇಗ ನೀಡುವ ಉದ್ದೇಶದಿಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೆಗೌಡರು ಈಗಿರುವ ರಾಜ್ಯದ ಜೆಡಿಎಸ್ ಘಟಕದ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಿ ಆದೇಶ ಹೊರಡಿಸಿದ್ದಾರೆ.
ಜೋತೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ರಾಜ್ಯ ಜೆಡಿಎಸ್ ಘಟಕದ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಎರಡೂ ಆದೇಶಗಳು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ರಾಷ್ಟ್ರೀಯ ಅಧ್ಯಕ್ಷರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಜಾತ್ಯತೀತ ಜನತಾದಳ ಪಕ್ಷದ ಸಂವಿಧಾನ ಮತ್ತು ನಿಯಮಗಳ ಅಡಿಯಲ್ಲಿ ಅಂದರೆ ಆರ್ಟಿಕಲ್ 10ರ ಪ್ರಕಾರ, ಕರ್ನಾಟಕ ಪ್ರದೇಶ ಜಾತ್ಯಾತೀತ ಜನತಾದಳ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಮತ್ತು ರಾಜ್ಯ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಒಳಗೊಂಡಂತೆ ಈ ಕೂಡಲೇ ಜಾರಿಗೆ ಬರುವಂತೆ ಹಾಲಿ ಸಮಿತಿಯನ್ನು ವಿಸರ್ಜನೆ ಮಾಡಿರುವುದಾಗಿ ದೇವೇಗೌಡರು ಆದೇಶದಲ್ಲಿ ತಿಳಿಸಿದ್ದಾರೆ.
ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿಗೆ ಜೆಡಿಎಸ್ ಪಕ್ಷದ ಹೊಣೆ
ಕರ್ನಾಟಕ ಪ್ರದೇಶ ಜಾತ್ಯತೀತ ಜನತಾದಳ ( JDS ) ಪಕ್ಷದ ರಾಜ್ಯಾಧ್ಯಕ್ಷರು ಮತ್ತು ರಾಜ್ಯ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಒಳಗೊಂಡಂತೆ ಆ ಸಮಿತಿಯನ್ನು ಈಗಾಗಲೇ ವಿಸರ್ಜನೆ ಮಾಡಲಾಗಿದೆ. ಪಕ್ಷದ ಮುಂದಿನ ಕಾರ್ಯ ಚಟುವಟಿಕೆಗಳನ್ನು ಸುಲಲಿತವಾಗಿ ಮುಂದುವರಿಸಿಕೊಂಡು ಹೋಗಲು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಪಕ್ಷದ ರಾಜ್ಯ ಘಟಕದ ಅಡಾಕ್ ಅಧ್ಯಕ್ಷರನ್ನಾಗಿ ಕೂಡಲೇ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ” ಎಂದು ಮಾಜಿ ಪ್ರಧಾನಿ ಜೆಡಿಎಸ್ ಪಕ್ಷದ ವರಿಷ್ಠರಾದ ಹೆಚ್ ಡಿ ದೇವೆಗೌಡರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಅವಲೋಕನ ಮಾಡಿದ ಜೆಡಿಎಸ್ ರಾಜ್ಯ ಕಾರ್ಯಕಾರಿಣಿ ಸದಸ್ಯರು ಈ ಮಹತ್ವದ ನಿರ್ಧಾರ ಕೈಗೊಳ್ಳಲು ರಾಷ್ಟ್ರೀಯ ಅಧ್ಯಕ್ಷರಿಗೆ ಸಂಪೂರ್ಣ ಸರ್ವಸಮ್ಮತದ ಅಧಿಕಾರ ನೀಡಿತು.
ಇದಾದ ಬಳಿಕ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡರು ಸೇರಿದಂತೆ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಘಟಕಗಳ ಅಧ್ಯಕ್ಷರು ಹಾಗೂ ಹಿರಿಯ ನಾಯಕರನ್ನು ಒಳಗೊಂಡಂತೆ ಮಾಧ್ಯಮಗೋಷ್ಠಿ ನಡೆಸಿದ ಮಾಜಿ ಪ್ರಧಾನಿಗಳು, ಸಮಿತಿ ಕೈಗೊಂಡ ಈ ಮಹತ್ವದ ತೀರ್ಮಾನವನ್ನು ಪ್ರಕಟಿಸಿ ಆದೇಶ ಹೊರಡಿಸಿದರು
*************************************************
ನೂರಕ್ಕೆ ನೂರು ಜೆಡಿಎಸ್ ಅಪ್ಪ-ಮಕ್ಕಳ ಪಕ್ಷ ಅಂತಾ ಕೊನೆಗೂ ನಿಜವಾಯ್ತು! ದೇವೇಗೌಡರ ವಿರುದ್ಧ ಬೆಂಕಿ ಉಗುಳಿದ ಸಿ ಎಮ್ ಇಬ್ರಾಹಿಂ
ನೂರಕ್ಕೆ ನೂರು ಜೆಡಿಎಸ್ ಅಪ್ಪ-ಮಕ್ಕಳ ಪಕ್ಷ ಅಂತಾ ಕೊನೆಗೂ ನಿಜವಾಯ್ತು! ದೇವೇಗೌಡರ ವಿರುದ್ಧ ಬೆಂಕಿ ಉಗುಳಿದ ಸಿ ಎಮ್ ಇಬ್ರಾಹಿಂ
ಬೆಂಗಳೂರು: ನನ್ನ ಹೋರಾಟ ಈಗ ಶುರುವಾಗಿದೆ. ಅವರ ನೊಟೀಸ್ ನನ್ನ ಕೈಗೆ ಮೊದಲು ಬರಲಿ ಆಮೇಲೆ ಮಾತಾಡುತ್ತೇನೆ.ಅಸಲಿ ಆಟ ಎನು ಅನ್ನುವುದನ್ನು ನಾನು ತೋರಿಸುತ್ತೆನೆ. ಒರಿಜಿನಲ್ ಜೆಡಿಎಸ್ ಪಕ್ಷ ನಮ್ಮದೇ ಎಂದು ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.
ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಸಿ ಎಮ್ ಇಬ್ರಾಹಿಂ ಅವರನ್ನು ಉಚ್ಛಾಟಿಸಿರುವ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್ ಡಿ ದೇವೆಗೌಡ ಮತ್ತು ಮಾಜಿ ಸಿ ಎಮ್ ಕುಮಾರಸ್ವಾಮಿ ಅವರ ವಿರುದ್ಧ ಸಿಟ್ಟಿಗೆದ್ದ ಅವರು ಅವರಿಗೆ ಅಧಿಕಾರ ಇರೊದಾದರೆ ಮೊದಲು ಸಭೆ ಕರೆದು ನನ್ನ ವಿರುದ್ಧ ಅವಿಶ್ವಾಸ ನಿರ್ಣಯ ಮಾಡಬೇಕಿತ್ತು. ಇಂದು ಗುರುವಾರ ನಾನು ಉಪವಾಸ ಇದೀನಿ. ಗುರುವಾರ ನನ್ನ ಮಗನನ್ನು ಕಳೆದುಕೊಂಡ ದಿನ ದೇವೆಗೌಡರಿಗೆ ಒಂದು ಮಾತು ಹೇಳೊದಕ್ಕೆ ಇಷ್ಟಪಡ್ತಿನಿ ಇವತ್ತು ನಿಮ್ಮ ಮಗನ ಸಲುವಾಗಿ ಬೇರೆಯವರ ಮಕ್ಕಳನ್ನು ಬಲಿ ಕೊಡ್ತಾ ಇದೀರಿ. ನಿಮಗೆ ಪುತ್ರವ್ಯಾಮೋಹ ಇದೆ ಅಂತಾಯ್ತು. ನನಗೆ ಈ ನಿರ್ಣಯ ಖುಷಿ ಕೊಟ್ಟಿದೆ. ಇದರ ವಿರುದ್ದ ಕೋರ್ಟ್ ನಲ್ಲಿ ಸ್ಟೇ ತರ್ತಿನಿ ಒಂದು ರೀತಿ ನನ್ನ ಹೋರಾಟ ಈಗ ಶುರುವಾಗಿದೆ ಎಂದರು.
ಗೌಡ್ರೇ ನಿಮ್ಮನ್ನು ನನ್ನ ತಂದೆ ಸಮಾನ ಅಂದ್ಕೊಂಡಿದ್ದೆ ನೀವು ಇದೇನಾ ಮಗನಿಗೆ ಕೊಡೋ ಪ್ರೀತಿ, ಗೌರವ? ನಾನು ಆರು ವರ್ಷ MLC ಸ್ಥಾನವನ್ನೆ ಬಿಟ್ಟು ನಿಮ್ಮ ಜೊತೆಗೆ ಬಂದೆ? ನೀವು ಕೊನೆಗೂ ತೋರಿಸಿ ಬಿಟ್ರಿ ನಿಮ್ಮ ಬುದ್ಧಿನಾ? ನಾನು ಸುಮ್ಮನೆ ಕೂರುವ ವ್ಯಕ್ತಿಯಲ್ಲ. ಕಾನೂನು ಹೋರಾಟ ಮಾಡ್ತೀನಿ. ದೇವರು ಮತ್ತು ಜನರು ನನ್ನ ಜೊತೆಗಿದ್ದಾರೆ. ನಾನು ಮಗನ ಸಮಾಧಿ ಹತ್ರ ಹೋಗ್ತಿದೀನಿ. ಹೇಳದೇ ಕೇಳದೆ ವಿಸರ್ಜನೆ ಮಾಡಿದ್ದು ತಪ್ಪು. ನೂರಕ್ಕೆ ನೂರು ಜೆಡಿಎಸ್ ಅಪ್ಪ ಮಕ್ಕಳ ಪಕ್ಷ ಅನ್ನೊದು ನಿಜವಾಯ್ತು. ನನ್ನ ಮುಂದಿನ ನಡೆ ಜನತಾದಳ. ಜನತಾದಳ ನಮ್ಮದೇ ಪಕ್ಷ. ಜನತಾ ದಳವನ್ನು ವಿಸರ್ಜನೆ ಮಾಡಲು ಆಗೋಲ್ಲ. ಇದನ್ನು ಚುನಾವಣಾ ಆಯೋಗದಲ್ಲಿ ಪ್ರಶ್ನೆ ಮಾಡ್ತೇನೆ ಎಂದರು.
ಈಗಲೂ ಹೇಳ್ತಿನಿ ನಿಜವಾದ ಜನತಾ ದಳ ನಮ್ಮದೇ. ಬಹುತೇಕ ಶಾಸಕರು ನಮ್ಮ ಜತೆ ಇದ್ದಾರೆ. ಸಮಯ ಸಂದರ್ಭ ಬಂದಾಗ ಶಾಸಕರ ಸಭೆ ಕರೀತೀನಿ. ಶಾಸಕರನ್ನು ಎಲ್ಲಾ ಬಲಗಳಿಂದಲೂ ಅವರು ಹೆದರಿಸಿ ಇಟ್ಕೊಂಡಿದ್ದಾರೆ. ಲಾಲೂ,ಕೇಜ್ರಿವಾಲ್, ನಿತೀಶ್ ಕುಮಾರ್ ನನ್ನ ಸಂಪರ್ಕದಲ್ಲಿ ಇದ್ದಾರೆ. ಕಾಂಗ್ರೆಸ್ಸಿಗೆ ಗ ವಾಪಸ್ಸು ಹೋಗುವ ವಿಚಾರ ಈಗಲೇ ಹೇಳೋಕೆ ಆಗಲ್ಲ. ನಾನಿನ್ನೂ ಜೆಡಿಎಸ್ ನಿಂದ ಡೈವರ್ಸ್ ಆಗಿಲ್ಲ ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ.
ನಾನು ಎಲ್ಲಿಗೂ ಹೋದ್ರೂ ಹೋಲ್‌ಸೇಲ್ ಆಗಿಯೇ ಹೋಗೋದು. ನಾನು ಸಿದ್ದರಾಮಯ್ಯ ಅವರನ್ನು ಬೈತಿಲ್ಲ ಅಂತ ದೇವೇಗೌಡರಿಗೆ ಬೇಸರ ಇದೆ ಸುಮ್ಮಸುಮ್ಮನೆ ನಾನ್ಯಾಕೆ ಸಿದ್ದರಾಮಯ್ಯರನ್ನು ಬೈಯಲಿ? ಸಿದ್ದರಾಮಯ್ಯ ಜತೆ ಯಾವುದೇ ವೈಷಮ್ಯ ಇಲ್ಲ. ಅವರು ಅವರ ಪಾಡಿಗೆ ಅಧಿಕಾರ ಮಾಡ್ತಿದ್ದಾರೆ. ನನಗೆ ಕಾಂಗ್ರೆಸ್ ಬಿಟ್ಟಿದ್ದು ತಪ್ಪು ಅನಿಸಿಲ್ಲ. ಮುಂದೆ ಕಾಂಗ್ರೆಸ್ ಆಹ್ವಾನಿಸಿದ್ರೆ ಹೋಗುವ ಸುಳಿವು ನೀಡಿದ ಸಿಎಂ ಇಬ್ರಾಹಿಂ.
ಸುಧೀರ್ ವಿಧಾತ ,ಶಿವಮೊಗ್ಗ ,