Headlines

ಮೈಸೂರು ಕಾಗದ ಕಾರ್ಖಾನೆ ಪುನರಾರಂಭಕ್ಕೆ ಸಚಿವ ಎಂ ಬಿ ಪಾಟೀಲ್ ದಿಟ್ಟ ಹೆಜ್ಜೆ

ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ

ಸ್ಥಳೀಯ ಶಾಸಕರು, ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನೆಡೆಸಿದ ಸಚಿವ ಎಂ ಬಿ ಪಾಟೀಲ್

ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ‌ ನಡೆಸಿದ ನಂತರ ಖಾಸಗೀಕರಣದ ಬಗ್ಗೆ ತೀರ್ಮಾನ: ಎಂ.ಬಿ.ಪಾಟೀಲ್

ಬೆಂಗಳೂರು: ಒಂದು ಕಾಲದಲ್ಲಿ ಕೈಗಾರಿಕಾ ರಂಗದ ಪ್ರತಿಷ್ಠೆಯ ಸಂಕೇತವಾಗಿದ್ದು ಈಗ ಬೀಗಮುದ್ರೆ ಕಂಡಿರುವ ಭದ್ರಾವತಿಯ ಮೈಸೂರು ಪೇಪರ್ ಮಿಲ್ಸ್ (ಎಂಪಿಎಂ) ಕಾರ್ಖಾನೆಗೆ ಮರುಜೀವ ನೀಡಲು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೆಜ್ಜೆ ಇಟ್ಟಿದ್ದಾರೆ. ಈ ಸಂಬಂಧ ಅವರು ಭದ್ರಾವತಿ ಶಾಸಕ ಬಿ ಕೆ ಸಂಗಮೇಶ್ವರ ಮತ್ತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಗುರುವಾರ ಇಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು.

ಸಭೆಯಲ್ಲಿ ವಿಸ್ತೃತ ವಿಚಾರ ವಿನಿಮಯ ನಡೆಸಿದ ಅವರು, ಕಾರ್ಖಾನೆ ಉಳಿಸಿಕೊಂಡಿರುವ ಸಾಲದ ಮೊತ್ತ, ವಿದ್ಯುತ್ ಬಿಲ್ ಮತ್ತು ಮುಂದಿನ ಹಾದಿ ಏನಾಗಿರಬೇಕು ಎಂಬ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅಧ್ಯಕ್ಷತೆಯಲ್ಲಿ ಸಭೆ‌ ನಡೆಸಲು‌ ಸಚಿವರು‌ ಸೂಚಿಸಿದರು. ಈ ಸಭೆಗೆ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಅವರನ್ನೂ ಕರೆಯಲು ಸಚಿವರು ಸೂಚಿಸಿದರು.

ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದಿವಾನರಾಗಿದ್ದ ಸರ್ ಎಂ ವಿಶ್ವೇಶ್ವರಯ್ಯನವರ ಕನಸಿನ ಕೂಸಾದ ಮೈಸೂರು ಪೇಪರ್ ಮಿಲ್ಸ್ ಸದ್ಯಕ್ಕೆ 1,482 ಕೋಟಿ ರೂ. ನಷ್ಟದ ಸುಳಿಯಲ್ಲಿದೆ. ಜೊತೆಗೆ 229 ಕೋಟಿ ರೂ.ಗಳಷ್ಟು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ. ರಾಜ್ಯ ಸರ್ಕಾರ 2010 ರಿಂದ ಈತನಕ 850 ಕೋಟಿ ರೂ. ಸಾಲದ ರೂಪದಲ್ಲಿ ಕೊಟ್ಟಿದೆ ಎಂದು ಅವರು ತಿಳಿಸಿದರು.

ಈ ಮಧ್ಯೆ ಎಂಪಿಎಂ ಖಾಸಗೀಕರಣಕ್ಕೆ ಯತ್ನ ನಡೆದಿತ್ತು. ಸಂಸ್ಥೆ ಮೇಲೆ ಇರುವ ಆರ್ಥಿಕ‌ ಹೊರೆಯನ್ನು ನಿಭಾಯಿಸಲು ಹಣಕಾಸು ಇಲಾಖೆಯ ಸಹಕಾರ ಬೇಕಾಗುತ್ತದೆ. ಹೀಗಾಗಿ ಅಧಿಕಾರಿಗಳ ಸಭೆ ನಂತರ ಖಾಸಗೀಕರಣದ ರೂಪುರೇಷೆ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಸಚಿವರು ಹೇಳಿದರು.

ಎಂಪಿಎಂ ವ್ಯಾಪ್ತಿಯಲ್ಲಿ ಸುಮಾರು 23 ಸಾವಿರ ಹೆಕ್ಟೇರ್ ಅರಣ್ಯ ಮತ್ತು ಅರಣ್ಯೇತರ ಭೂಮಿ ಇದ್ದು ಇಲ್ಲಿ ಸದ್ಯಕ್ಕೆ ಅಕೇಶಿಯಾ, ನೀಲಗಿರಿ ಮತ್ತು ಬಿದಿರನ್ನು ಬೆಳೆಯಲಾಗುತ್ತಿದೆ. ಒಂದು ವೇಳೆ ಕಾರ್ಖಾನೆಯನ್ನು ಗುತ್ತಿಗೆ ‌ನೀಡಿದರೂ, ಕಾರ್ಖಾನೆ ಜಾಗದಲ್ಲಿ‌, ನಿಷೇಧಿಸಿರುವ ನೀಲಿಗಿರಿ ಬೆಳೆಯಲು ಅವಕಾಶ‌ ನೀಡಬಹುದೇ ಎಂಬುದನ್ನೂ ಕೂಲಂಕಶವಾಗಿ ಪರಿಶೀಲಿಸಬೇಕು ಎಂದು ಅವರು ವಿವರಿಸಿದರು.

ಇದಲ್ಲದೆ ಎಂಪಿಎಂನ ಕೆಲವು ಉದ್ಯೋಗಿಗಳಿಗೆ ಸರ್ಕಾರದ ವಿವಿಧ ಸಂಸ್ಥೆ/ನಿಗಮಗಳಲ್ಲಿ ನೌಕರಿ ಕೊಡಿಸುವ ಕೆಲಸವೂ ಆಗುತ್ತಿದೆ. ಕೆಲವರಿಗೆ ಸ್ವಯಂ ನಿವೃತ್ತಿ ನೀಡಲಾಗಿದೆ. ಜತೆಗೆ ತಾತ್ಕಾಲಿಕ ಆಧಾರದಲ್ಲಿ ಕೆಲಸ ಮಾಡುತ್ತಿರುವ 250 ಫಾರೆಸ್ಟ್ ವಾಚರ್ ಗಳ ವೇತನ ಏರಿಕೆಗೂ ಒಂದು ಪರಿಹಾರ ರೂಪಿಸಬೇಕು ಎಂದು ಪಾಟೀಲ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಸಭೆಯಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ‌ ಕಾರ್ಯದರ್ಶಿ ಸೆಲ್ವಕುಮಾರ್, ಶಿವಮೊಗ್ಗ ಜಿಲ್ಲಾಧಿಕಾರಿ ಮತ್ತು ಎಂಪಿಎಂ ವ್ಯವಸ್ಥಾಪಕ ನಿರ್ದೇಶಕ ಸೆಲ್ವಮಣಿ, ಎಪಿಸಿಸಿಎಫ್ ವನಶ್ರೀ ವಿಪಿನ್ ಸಿಂಗ್, ಚೀಫ್ ಆಪರೇಟಿಂಗ್ ಆಫೀಸರ್ ರವೀಂದ್ರನಾಥ್ ಮುಂತಾದವರು ಭಾಗವಹಿಸಿದ್ದರು.

ಸುಧೀರ್ ವಿಧಾತ,ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!