ನೆಲಮಂಗಲ ಭೀಕರ ರಸ್ತೆ ಅಪಘಾತ: ಸ್ವಗ್ರಾಮದಲ್ಲಿ ಲಿಂಗಾಯತ ಸಂಪ್ರದಾಯದಂತೆ ಆರು ಮೃತ ದೇಹಗಳ ಅಂತ್ಯಕ್ರಿಯೆ.
ASHWASURYA/SHIVAMOGGA
ಅಶ್ವಸೂರ್ಯ/ ಬೆಂಗಳೂರು: ನೆಲಮಂಗಲ ಭೀಕರ ಅಪಘಾತದಲ್ಲಿ ಸಾವೀಗೀಡಾಗಿದ್ದ 6 ಜನರ ಮೃತದೇಹಗಳು ಮಹಾರಾಷ್ಟ್ರದ ಸ್ವಗ್ರಾಮಕ್ಕೆ ತಲುಪಿದ್ದು, ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ರವಿವಾರ (ಡಿ.22) ಬೆಳಿಗ್ಗೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೊರಬಗಿ ಗ್ರಾಮಕ್ಕೆ ಮೃತದೇಹವನ್ನು ತೆಗೆದುಕೊಂಡು ಹೋಗಲಾಗಿತ್ತು. ಮೂರು ಅಂಬುಲೆನ್ಸ್ ಗಳ ಮೂಲಕ ಆರು ಮೃತದಹೇಗಳನ್ನು ಒಯ್ಯಲಾಗಿತ್ತು.ಗ್ರಾಮಕ್ಕೆ ತೆರಳಿದ ಮೃತದೇಹಗಳನ್ನು ನೋಡುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಮೃತ ಚಂದ್ರಮ್ ಅವರ ಜಮೀನಿನಲ್ಲಿ ಲಿಂಗಾಯತ ಸಮಾಜದ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದರು. ಮೃತದೇಹಗಳು ಹೋಗುತ್ತಿದ್ದಂತೆ ಕುಟುಂಬಸ್ಥರು ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ಅಗ್ನಿ ಸ್ಪರ್ಶಿಸುವ ಮೂಲಕ ಅಂತ್ಯಕ್ರಿಯೆ ನೆರವೇರಿಸಿದರು.
ಅಪಘಾತಕ್ಕೆ ಕಾರಣ.?
ಬೆಂಗಳೂರು ಹೊರವಲಯದ ನೆಲಮಂಗಲ ಬಳಿ ಭೀಕರ ಸರಣಿ ಅಪಘಾತ ಸಂಭವಿಸಿತ್ತು. ಚಾಲಕನ ನಿಯಂತ್ರಣ ತಪ್ಪಿದ ಕಂಟೇನರ್ ಒಂದು ವೋಲ್ವೋ ಕಾರಿನ ಮೇಲೆ ಉರುಳಿದ್ದ ಪರಿಣಾಮ ಕಾರಲ್ಲಿದ್ದ ಒಂದೇ ಕುಟುಂಬದ ಆರು ಮಂದಿ ಬಲಿ ಆಗಿಯಾಗಿದ್ದರು. ಮೃತರನ್ನು 48 ವರ್ಷದ ಐಟಿ ಉದ್ಯಮಿ ಚಂದ್ರಮ್ ಯೇಗಪ್ಪಗೋಳ್, 42 ವರ್ಷದ ಗೌರಾಬಾಯಿ, 12 ವರ್ಷದ ದೀಕ್ಷಾ, 6 ವರ್ಷದ ಆರ್ಯ, ಜ್ಞಾನ್ ಏಗಪ್ಪ, 36 ವರ್ಷದ ವಿಜಯಲಕ್ಷ್ಮಿ ಎಂದು ಗುರುತಿಸಲಾಗಿದೆ.
ವೀಕೆಂಡ್ ಇದ್ದ ಕಾರಣ ಚಂದ್ರಮ್ ಕುಟುಂಬ ಇತ್ತೀಚಿಗಷ್ಟೇ ಖರೀದಿಸಿದ್ದ ಹೊಸ ವೋಲ್ವೋ ಕಾರಿನಲ್ಲಿ ತಮ್ಮ ಊರಿಗೆ ಹೊರಟಿದ್ದರಂತೆ. ಆದರೆ ವಿಧಿ ಆಟವೆ ಬೇರೆಯಾಗಿತ್ತು. ಟೀ.ಬೇಗೂರು ಸಮೀಪ ಹೋಗುತ್ತಿದ್ದ ಸಂದರ್ಬದಲ್ಲಿ ಕಂಟೇನರ್ ಇವರ ವೋಲ್ವೋ ಕಾರಿನ ಮೇಲೆ ಉರುಳಿ ಬಿದ್ದಿದೆ.! ಕಾರಲ್ಲಿದ್ದ ಒಂದೆ ಕುಟುಂಬದ ಎಲ್ಲಾ ಆರು ಮಂದಿಯು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ದಾಬಸ್‌ಪೇಟೆಯಿಂದ ಬೆಂಗಳೂರಿಗೆ ಕಂಟೇನರ್ ಬರುತ್ತಿತ್ತು. ತನ್ನ ಮುಂದಿನ ಕಾರನ್ನು ಸೇಫ್ ಮಾಡಲು ಹೋಗಿ ಅಪಘಾತ ಸಂಭವಿಸಿದೆ ಎಂದು ಚಾಲಕ ಹೇಳಿಕೊಂಡಿದ್ದಾನೆ. ಈ ಅಪಘಾತದ ಪರಿಣಾಮ ವೋಲ್ವೋ ಮುಂದಿದ್ದ ವಾಹನಗಳು ಸಡನ್ ಬ್ರೇಕ್ ಹಾಕಿದಕ್ಕೆ ಹಲವು ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡಿವೆ. 2 ಲಾರಿ, 2 ಕಾರು, ಸ್ಕೂಲ್ ಬಸ್ ಒಂದಕ್ಕೊಂದು ಡಿಕ್ಕಿ ಹೊಡೆದು ಕೊಂಡಿವೆ. ಸರಣಿ ಅಪಘಾತದಿಂದಾಗಿ ಕೆಲವು ಸಮಯ ಬೆಂಗಳೂರು-ತುಮಕೂರು ಹೈವೇಯಲ್ಲಿ ಭಾರೀ ಟ್ರಾಫಿಕ್ ಜಾಮ್ ಕೂಡ ಉಂಟಾಗಿತ್ತು,ವಾಹನವನ್ನು ಚಲಾಯಿಸಲಲಾಗದೆ ಸವಾರರು ಪರದಾಡಿದರು. ಇನ್ನೂ ಮೃತ ಉದ್ಯಮಿ ಚಂದ್ರಮ್ ಮೂಲತಃ ಮಹಾರಾಷ್ಟ್ರದ ಜತ್ ತಾಲೂಕಿನ ಮೊರಬಗಿ ಗ್ರಾಮದವರು. ಬೆಂಗಳೂರಿನಲ್ಲಿ ಐಎಎಸ್‌ಟಿ ಎಂಬ ಸಂಸ್ಥೆ ಸ್ಥಾಪಿಸಿ, 300ಕ್ಕೂ ಹೆಚ್ಚು ಜನಕ್ಕೆ ಕೆಲಸ ಕೊಟ್ಟಿದ್ದರು. ಇದೀಗ ಸಂಸ್ಥೆಯ ಸಿಬ್ಬಂದಿ ದಿಕ್ಕು ತೋಚದಂತಾಗಿದ್ದು, ಕುಟುಂಬಸ್ಥರ ನೋವು ಹೇಳತೀರದಾಗಿದೆ.
ಒಂದೆ ಕುಟುಂಬದ ಆರು ಮಂದಿಯ ಪ್ರಾಣ ತೆಗೆದ ಟ್ರಕ್ ಚಾಲಕ ಆರೀಫ್ ಹೇಳಿದ್ದೆನು..
ಬೆಂಗಳೂರು: ನಮ್ಮ ಮುಂದೆ ಸಾಗುತ್ತಿದ್ದ ಕಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಮತ್ತೊಂದು ಅನಾಹುತ ನಡೆಯಿತು ಎಂದು ನೆಲಮಂಗಲದಲ್ಲಿ ನಡೆದ ಸರಣಿ ಅಪಘಾತದಲ್ಲಿ ಒಂದೆ ಕುಟುಂಬದ ಆರು ಮಂದಿಯ ಪ್ರಾಣ ತೆಗೆದ ಲಾರಿ ಚಾಲಕ ಆರೀಫ್ ಹೇಳಿದ್ದಾನೆ.
ಡಾಬಸ್ಪೇಟೆಯಿಂದ ಬೆಂಗಳೂರಿನ ಕಡೆಗೆ ನಾನು ಸಾಗುತ್ತಿದೆ. ನನ್ನ ಮುಂದಿನ ಕಾರನ್ನು ಬಚಾವ್ ಮಾಡಲು ಹೋಗಿ ಹೀಗೆ ಆಗಿದೆ. ಲಾರಿ ಡಿವೈಡರ್ ದಾಟಿ ಮುಂದಿನ ರಸ್ತೆಗೆ ಪಲ್ಟಿ ಆಯ್ತು. ಅಲ್ಲಿ ಏನಾಯ್ತು ಆಮೇಲೆ ಅನ್ನೋದು ಗೊತ್ತಿಲ್ಲ. ಕಾರಿನ ಮೇಲೆ ನನ್ನ ಲಾರಿ ಪಲ್ಟಿಯಾಗಿತ್ತು ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೀಫ್ ಹೇಳಿದ್ದಾನೆ.