ಬೆಂಗಳೂರು ಅಗ್ನಿಅವಘಡ : ಹುಟ್ಟುಹಬ್ಬ ಆಚರಿಸಿ ಕೊಳ್ಳಬೇಕಾದ ಪ್ರಿಯಾ ಮಸಣದೆಡೆಗೆ..!
ಅಶ್ವಸೂರ್ಯ/ಶಿವಮೊಗ್ಗ: ಮಗಳ ಅಗಲಿಕೆಯಿಂದ ದಿಕ್ಕೇ ತೋಚದಂತೆ ಕುಳಿತ ತಂದೆ, ತಾಯಿ.ಬಾಳಿ ಬದುಕ ಬೇಕಾಗಿದ್ದ ಮನೆಯ ಮಗಳನ್ನು ಕಳೆದುಕೊಂಡ ಕುಟುಂಬದವರ ಅಕ್ರಂದನ ಮುಗಿಲು ಮುಟ್ಟಿದೆ.ಹುಟ್ಟುಹಬ್ಬದ ಸಂಭ್ರಮದಲ್ಲಿರಬೇಕಾದ ಮನೆಯಲ್ಲಿ ಸೂತಕ ಛಾಯೆ ಆವರಿಸಿದೆ . ಹೊಸ ಬಟ್ಟೆ ಧರಿಸಿ ಸಂಭ್ರಮಿಸ ಬೇಕಾದ ಮನೆ ಮಗಳು ಮಸಣ ಸೇರಿದ್ದಾಳೆ. ಈ ಹೃದಯ ವಿದ್ರಾವಕ ಘಟನೆಗೆ ಕಾರಣವಾಗಿದ್ದು ಬೆಂಗಳೂರಿನಲ್ಲಿ ಬೆಂಕಿಯ ಜ್ವಾಲೆಗೆ ಹೊತ್ತಿ ಉರಿದ ಇವಿ ಶೋರೂಂ.! ಶಾರ್ಟ್ ಸರ್ಕ್ಯೂಟ್ ನಿಂದ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಈ ಬದುಕಿಗೆ ವಿದಾಯ ಹೇಳಿದ ಯುವತಿಯ ಹೆಸರು ಪ್ರಿಯಾ. ರಾಜಾಜಿನಗರದ ರಾಜ್ ಕುಮಾರ್ ರಸ್ತೆಯಲ್ಲಿರುವ ಇವಿ ಸ್ಕೂಟರ್ ಶೋ ರೂಂ ನಲ್ಲಿ ಕೆಲಸ ಮಾಡುತ್ತಿದ್ದಳು. ನವೆಂಬರ್19 ರ ಸಂಜೆ 5.30 ರ ಸುಮಾರಿಗೆ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಪ್ರಿಯಾ ಬೆಂಕಿಯ ಜ್ವಾಲೆಗೆ ಸಿಲುಕಿ ಸುಟ್ಟು ಕರಕಲಾಗಿದ್ದಾಳೆ.
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕಾಗಮಿಸಿದ ಕುಟುಂಬಸ್ಥರು ದಿಕ್ಕೆ ತೋಚದಹಾಗೆ ಕುಸಿದು ಹೋಗಿದ್ದರು. ಮಗಳು ಪ್ರಿಯಾ 19ನೇ ತಾರೀಖು ಸಾವಿನಂಚಿಗೆ ಸರಿದರೆ ನವಂಬರ್ 20 ರಂದು ಪ್ರಿಯಾಳ 26 ನೇ ಹುಟ್ಟು ಹಬ್ಬವಿತ್ತು. ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಬೇಕಾದ ಪ್ರಿಯಾ ಒಂದು ದಿನ ಮುಂಚಿತವಾಗಿಯೇ ಸಾವಿನ ಮನೆ ಸೇರಿದ್ದಾಳೆ. ಮಗಳ ಹುಟ್ಟುಹಬ್ಬಕ್ಕಾಗಿ ತಂದೆ ಸೀರೆ ಖರೀದಿ ಮಾಡಿ ಮನೆಗೆ ತಂದಿದ್ದರಂತೆ..ಅಲ್ಲದೆ ಮಗಳಿಗೆ ಖರ್ಚಿಗೆ 1 ಸಾವಿರ ರೂಪಾಯಿ ಹಣವನ್ನು ನೀಡಿದ್ದರಂತೆ. ಸಾಕಷ್ಟು ಬುದ್ಧಿವಂತೆಯಾಗಿದ್ದ ಪ್ರಿಯಾ ಬಿಕಾಂ ಮುಗಿಸಿ ಸಿಎ ಆಗುವ ಕನಸು ಕಂಡಿದ್ದಳಂತೆ. ಪ್ರಿಯಾಳ ಕನಸು ನನಸಾಗುವ ಮುನ್ನವೇ ವಿಧಿಯಾಟಕ್ಕೆ ಬಲಿಯಾಗಿ ಸಾವಿನೆಡೆಗೆ ಹೆಜ್ಜೆ ಹಾಕಿದ್ದಾಳೆ. ತಾನು ಓದು ಮುಗಿಸಿ ಪದವಿದರೆ ಯಾಗುತ್ತಿದ್ದಂತೆ ಸಂಸಾರದ ಬದುಕು ದೂಡಲು ಅಪ್ಪನಿಗೆ ಹೆಗಲು ಕೊಟ್ಟ ಮಗಳು ಸಂಪಾದನೆಗೆ ನಿಂತುಬಿಟ್ಟಿದ್ದಳು. ಅಪ್ಪನ ಜೊತೆಗೆ ಕೈಜೋಡಿಸಿ ಸಂಸಾರಕ್ಕೆ ಆಸರೆಯಾಗಿದ್ದ ಪ್ರಿಯಾ ತನಗೆ ಅರಿವಿಲ್ಲದೆ ಸಾವಿನಮನೆ ಸೇರಿದ್ದಾಳೆ. ಕುಟುಂಬದ ಅಷ್ಟು ಕನಸುಗಳು ನುಚ್ಚುನೂರಾಗಿದೆ .
ಇನ್ನೂ ಘಟನೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ರಾಜಾಜಿನಗರ ಠಾಣೆ ಪೊಲೀಸರು. ಪ್ರಿಯಾ ಸಹೋದರ ಪ್ರತಾಪ್ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಸಿ ದೂರುದಾಖಲಿಸಿಕೊಂಡಿದ್ದಾರೆ.ಈ ಘಟನೆಗೆ ಮಾಲೀಕರ ನಿರ್ಲಕ್ಷ್ತವೇ ಕಾರಣ ಎನ್ನಲಾಗಿದ್ದು , ಸ್ಥಳದಿಂದ ಪರಾರಿಯಾಗಿದ್ದ ಇವಿ ಶೋರೂಂ ಮಾಲೀಕ ಪುನೀತ್ ನನ್ನು ಬಂಧಿಸಿ ಪೊಲೀಸರು ವಿಚಾರಣೆ ಒಳಪಡಿಸಿದ್ದಾರೆ. ಅದೆನೇ ಇರಲಿ ಬದುಕಿ ಬಾಳಬೇಕಾಗಿದ್ದ ಮುದ್ದಾದ ಹುಡುಗಿ ಪ್ರಿಯಾ ತನ್ನ ನೂರಾರು ಕನಸುಹೊತ್ತು ನಡು ಹಾದಿಯಲ್ಲೆ ಯಾರದ್ದೋ ನಿರ್ಲಕ್ಷ್ಯಕ್ಕೋ ಅಥವಾ ವಿಧಿಯಾಟಕ್ಕೋ ಬಲಿಯಾಗಿ ಸಾವಿನ ಮನೆಸೇರಿದ್ದು ಮಾತ್ರ ದುರಂತವೇ ಹೌದು.