ಲಕ್ನೋ-ದೆಹಲಿ ಹೆದ್ದಾರಿಯಲ್ಲಿ ಸೂಟ್‌ಕೇಸ್ ನಲ್ಲಿ ಪತ್ತೆ ಆಯ್ತು ಮಹಿಳೆಯ ಶವ!
ಅಶ್ವಸೂರ್ಯ/ಲಕ್ನೋ: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ದೆಹಲಿ-ಲಕ್ನೋ ಹೆದ್ದಾರಿಯಲ್ಲಿ ಮಹಿಳೆಯೊಬ್ಬಳ ಮೃತದೇಹ ತುಂಬಿದ ಸೂಟ್‌ಕೇಸ್ ಪತ್ತೆಯಾಗಿದೆ. ಮೃತ ಮಹಿಳೆಯ ವಯಸ್ಸು ಸುಮಾರು 25 ರಿಂದ 30 ವರ್ಷ ಎಂದು ಪೊಲೀಸರು ಅಂದಾಜಿಸಿದ್ದಾರೆ.
ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಜನ ಈ ಸೂಟ್‌ಕೇಸನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ವಿಷಯ ತಿಳಿದ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸೂಟ್‌ಕೇಸನ್ನು ಪರಿಶೀಲಿಸಿದಾಗ ಮಹಿಳೆಯ ಶವ ಪತ್ತೆಯಾಗಿದೆ. ಮಹಿಳೆಯ ಮೃತದೇಹದ ಮೇಲೆ ಅಲ್ಲಲ್ಲಿ ಗಾಯದ ಗುರುತುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೂಟ್‌ಕೇಸ್ ನಲ್ಲಿ ಪತ್ತೆಯಾದ ಸ್ಥಳದಲ್ಲಿ ಪೊಲೀಸರು ಹಾಗೂ ಫೋರೆನ್ಸಿಕ್ ತಜ್ಞರು ಸ್ಥಳ ಮಹಜರು ಮಾಡಿ ಪರಿಶೀಲನೆ ನೆಡೆಸಿದ್ದಾರೆ. ಮಹಿಳೆಯ ಮೃತದೇಹದ ಜೊತೆಗೆ ಬಟ್ಟೆಗಳು ಸಹ ಅದರಲ್ಲಿದ್ದವು. ಅವುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ಮುಂದುವರೆದಿದೆ.
ಮಹಿಳೆ ಶುಕ್ರವಾರ ಸಾವನ್ನಪ್ಪಿರುವ ಸಾಧ್ಯತೆ ಇದ್ದು. ಪೊಲೀಸರು ಸಿಸಿಟಿವಿ ಕ್ಯಾಮೆರಾಗಳನ್ನು ಆಧರಿಸಿ ತನಿಖೆ ಚುರುಕುಗೊಳಿಸಿದ್ದಾರೆ. ಮಹಿಳೆಯ ಗುರುತು ಪತ್ತೆಹಚ್ಚಲು ಪೊಲೀಸರು ಕ್ರಮಕೈಗೊಂಡಿದ್ದಾರೆ ಎಂದು ಎಎಸ್ಪಿ ವಿನೀತ್ ಭಟ್ನಾಗರ್ ಹೇಳಿದ್ದಾರೆ.