BREAKING: ನಮ್ಮ ಕೇಂದ್ರ ನಾಯಕರು ಯಡಿಯೂರಪ್ಪ ದೊಡ್ಡ ಶಕ್ತಿ ಎನ್ನುವ ಭ್ರಮೆಯಲ್ಲಿದ್ದಾರೆ: ಮತ್ತೆ ವಾಗ್ದಾಳಿಗೆ ಇಳಿದ ಕೆ ಎಸ್ ಈಶ್ವರಪ್ಪ
ASHWASURYA/SHIVAMOGGA
✍️ ಸುಧೀರ್ ವಿಧಾತ
ಶಿವಮೊಗ್ಗ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಮತ್ತೆ ವಾಗ್ದಾಳಿಮಾಡಿದ್ದಾರೆ.
ಆರು ತಿಂಗಳು ಸ್ಥಾನ ಖಾಲಿ ಇದ್ದರೂ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಯಾರನ್ನೂ ನೇಮಕ ಮಾಡಲಿಲ್ಲ. ಒಕ್ಕಲಿಗರು, ಕುರುಬರು, ಲಿಂಗಾಯತ ನಾಯಕರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಬಹುದಾಗಿತ್ತು. ಸಿ.ಟಿ. ರವಿ, ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಗೆ ನೇಮಕ ಮಾಡಬಹುದಾಗಿತ್ತು. ಆದರೆ, ಯಡಿಯೂರಪ್ಪ ಅವರು ತಮ್ಮ ಪುತ್ರ ವಿಜಯೇಂದ್ರನನ್ನೆ ರಾಜ್ಯಾಧ್ಯಕ್ಷರನ್ನಾಗಿ ಮಾಡುವಂತೆ ಕೇಂದ್ರ ನಾಯಕರ ಎದುರು ಹಠ ಹಿಡಿದಿದ್ದರಿಂದ ಆರು ತಿಂಗಳ ಕಾಲ ರಾಜ್ಯಾಧ್ಯಕ್ಷ ಸ್ಥಾನ ಖಾಲಿ ಇತ್ತು ಎಂದು ಹೇಳಿದ್ದಾರೆ.
ಯಡಿಯೂರಪ್ಪನವರ ಕುಟುಂಬದ ಹಿಡಿತದಲ್ಲಿ ಪಾರ್ಟಿ ಇದೆ. ಪಕ್ಷ ಅಂದರೆ ತಾಯಿ, ತಾಯಿ ಕತ್ತನ್ನು ಹಿಸುಕುತಿದ್ದಾರೆ ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದು, ಕೇಂದ್ರ ನಾಯಕರು ಯಡಿಯೂರಪ್ಪ ದೊಡ್ಡ ಶಕ್ತಿ ಎನ್ನುವ ಭ್ರಮೆಯಲ್ಲಿದ್ದಾರೆ ಅದೆ ದುರಂತ.! ಯಡಿಯೂರಪ್ಪ ಹೊಸ ಪಕ್ಷ ಕಟ್ಟಿದಾಗ ಪಡೆದಿದ್ದು ಆರು ಸ್ಥಾನ ಮಾತ್ರ ಎಂದು ಹೇಳಿದ್ದಾರೆ.
ನನ್ನ ಮಗನಿಗೆ ಟಿಕೆಟ್ ಸಿಕ್ಕಿಲ್ಲ ಎಂದು ನಾನು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ನಾನು ರಾಜ್ಯದ ನೊಂದ ಕಾರ್ಯಕರ್ತರ ಧ್ವನಿಯಾಗಿ ಸ್ಪರ್ಧಿಸುತ್ತೇನೆ. ಪ್ರತಾಪ್ ಸಿಂಹ, ಡಿ.ವಿ. ಸದಾನಂದಗೌಡ, ಸಿ.ಟಿ. ರವಿ, ನಳಿನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ತಪ್ಪಿದೆ. ನಾನು ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನನಗೆ ರಾಜ್ಯದೆಲ್ಲೆಡೆಯಿಂದ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಈಶ್ವರಪ್ಪ ಹೇಳಿದ್ದಾರೆ.