ನೀವ್ ದಿನಾ ಓದೋ ಪೇಪರ್ ಮಾಡಿದ್ ಮೋಡಿ ನೋಡಿ ಸ್ವಾಮಿ..!
ಸುಮಾರು ಎರಡ್ ವರ್ಷದ್ ಹಿಂದೆ ಒಬ್ಬ ಸಂಜೆ ನ್ಯೂಸ್ ಪೇಪರ್ ಹಾಕೋ ಹುಡ್ಗ ಹೇಳಿದ್ ಕಥೆಯಿದು, ಹಿಂಗೇ ಒಂದಿನ ಕಾಲೇಜಿಂದ ಬರೋದು ಲೇಟಾಗಿತ್ತು. ಬೇಗ ಕಾಲೇಜಿಂದ ಮನೆಗ್ ಬಂದು ಯೂನಿಫಾರ್ಮ್ ಚೇಂಜ್ ಮಾಡಿ ರಪ-ರಪ ಸೈಕಲ್ ಹೊಡ್ಕೊಂಡು ನ್ಯೂಸ್ ಪೇಪರ್ ಪ್ರಿಂಟಿಂಗ್ ಪ್ರೆಸ್ ಹತ್ರ ಬಂದು ಬೇಗ ಬೇಗ ಪೇಪರ್ ಎಣಿಸ್ತಾ ಒಂದ್ ಮೂರ್ನಾಲ್ಕು ಪೇಪರ್ ಜಾಸ್ತಿನೇ ಬ್ಯಾಗಿಗೆ ಹಾಕ್ಕೊಂಡು ಎಲ್ಲಾ ಮನೆಗಳಿಗೂ ಪೇಪರ್ ಹಾಕೋಕ್ಕೆ ಹೊರುಟ್ನಂತೆ. ಇನ್ನೇನು ಮುಕ್ಕಾಲು ಪೇಪರ್ ನ ರೂಟ್ ಮುಗಿಬೇಕು ಅನ್ನೋ ಅಷ್ಟ್ರಲ್ಲಿ ಜೋರಾಗಿ ಮಳೆ ಶುರುವಾಗಿದೆ ಅಲ್ಲೇ ಯಾವುದೋ ಅಂಗಡಿ ಕೆಳಗೆ ನಿಂತಿದ್ದಾಗ ಅಲ್ಲೆ ಇದ್ದ ಒಬ್ಬ ವಿಚಿತ್ರ ವ್ಯಕ್ತಿ ಒಂದೇ ಸಮನೆ ಆ ಪೇಪರ್ ಹಾಕೋ ಹುಡ್ಗನ್ನೇ ದುರು-ದುರು ನೋಡ್ತಾ ಇದ್ನಂತೆ, ಮಳೆ ನಿಲ್ಲೋ ತನಕ ಕಾದು ಮಳೆ ನಿಂತು ಹೊರಡುವಾಗ ಆ ಹುಡುಗ ಆ ವ್ಯಕ್ತಿಗೆ ಫ್ರೀಯಾಗಿ ಒಂದ್ ಪೇಪರ್ ಓದೋಕ್ಕೆ ಕೊಟ್ ಹೋದ್ನಂತೆ. ಅವತ್ತಿಂದ ಆ ವ್ಯಕ್ತಿ ದಿನಾ ಈ ಹುಡುಗ ಪೇಪರ್ ಹಾಕೋಕ್ಕೆ ಸೈಕಲ್ಲಿಂದ ಇಳಿದಾಗ ಆದೆ ಜಾಗಕ್ಕೆ ಬಂದು ನ್ಯೂಸ್ ಪೇಪರಿಗಾಗಿ ಕೈ ಚಾಚುತ್ತಾ ಇದ್ನಂತೆ. ಪೇಪರ್ ಹಾಕೊ ಹುಡ್ಗಾನು ಏನೂ ಮಾತಾಡ್ಡೆ ದಿನಾ ಒಂದ್ ಪೇಪರ್ನಾ ಫ್ರೀಯಾಗಿ ಕೊಡ್ತಾ ಇದ್ನಂತೆ.!
..ಹೀಗೆ ಸುಮಾರು ಒಂದುವರೆ ವರ್ಷ ಕಳೆದಿರ ಬಹುದೇನೊ. ಆ ವ್ಯಕ್ತಿ ಒಂದಿನ ಈ ಹುಡ್ಗನ್ನ ಮಾತಾಡ್ತಿದ್ದಂತೆ, ಆ ಹುಡ್ಗನ ಹೆಸ್ರು ಕೇಳಿ ತನ್ನನ್ನು ತಾನು ಪರಿಚಯ ಮಾಡಿಕೊಳ್ತಾ “ನಾನು ಈ ಬೀದಿಯ ಮೋರಿ ಬದಿಯಲ್ಲಿ ಸೈಕಲ್ ರಿಪೇರಿ ಮಾಡ್ತಿನಿ. ನಂಗೀಗ ಸುಮಾರು 57 ವರ್ಷದ್ ಮೇಲಾಗಿದೆ. ಆದ್ರೆ, ನಂಗೆ ಓದಕ್ಕೆ ಬರಿಯಕ್ಕೆ ಬರ್ತಿರಲಿಲ್ಲ. ನೀನು ಅವತ್ತಿಂದ ನಂಗೆ ಫ್ರೀಯಾಗಿ ನ್ಯೂಸ್ ಪೇಪರ್ ಕೊಡ್ತಿದ್ದೆ. ಅದನ್ನ ನಾನು ದಿನಾ ಓದಿ-ಓದಿ ಇವತ್ತು ಓದಕ್ಕೆ ಕಲ್ತಿದ್ದೀನಪ್ಪಾ” ಅಂತ ಕಣ್ಣೀರು ಹಾಕ್ತ ಕೈ ಮುಗಿದು ಬಿಟ್ನಂತೆ ಆ ವ್ಯಕ್ತಿ. ಆ ವ್ಯಕ್ತಿ ಕಣ್ಣಲ್ಲಿ “ನಾನು ಇವತ್ತು ಈ ಹುಡ್ಗನಿಂದ ಓದೋದು ಕಲಿತೆ”! ಅನ್ನೋ ಸಾರ್ಥಕತೆಯ ಭಾವನೆ ಆ ಮನುಷ್ಯನ ಕಣ್ಣಲ್ಲಿ ಆನಂದಭಾಷ್ಪವಾಗಿ ಹರಿತಿರೋದುನ್ನ ನೋಡಿ ಆ ಹುಡ್ಗನಿಗೆ ಅವ್ರ ಅಪ್ಪನೇ ನೆನಪಾದ್ರಂತೆ. ಯಾಕಂದ್ರೆ, ಅವ್ರ ಅಪ್ಪನೂ ಕೆಲವು ತಿಂಗಳ ಹಿಂದೆ “ನೀನ್ ಪೇಪರ್ ಹಾಕೋಕೆ ಶುರು ಮಾಡ್ಡಾಗಿಂದ ನಾನೇಷ್ಟೋ ಓದೋಕ್ಕೆ ಕಲಿತೆ ಕಣೋ” ಅಂತ ಹೇಳಿದ್ ಮಾತು ಆ ಹುಡ್ಗನಿಗೆ ಇನ್ನೊಂದ್ ಸಲ ಕಿವಿಲಿ ಹೇಳ್ದಂಗ್ ಆಯ್ತಂತೆ.
ಆ ಹುಡ್ಗ ಆ ಸೈಕಲ್ ರಿಪೇರಿ ಮಾಡೋ ವ್ಯಕ್ತಿಯ ಕಣ್ಣೀರು ಒರೆಸಿ ಮತ್ತೊಂದು ಪೇಪರ್ ಕೊಟ್ಟು ಓದೋಕೆ ಹೇಳಿದ್ದಂತೆ, ಆ ವ್ಯಕ್ತಿಯೂ ಸಹ ಎಡಬಿಡದೆ ಕಾಲೇಜು ಹುಡುಗನಂತೆ ಸಲೀಸಾಗಿ, ಸರಾಗವಾಗಿ, ನಿರಂತರವಾಗಿ, ನಿರರ್ಗಳವಾಗಿ ಆ ನ್ಯೂಸ್ ಪೇಪರ್ ನ ಮೊದಲ ಪುಟ ಓದಿ ತೋರ್ಸಿದ್ದಂತೆ, ಸರಿ, ಈ ಖುಷಿಲೇ ಆ ಹುಡ್ಗ ಮನೆಗೆ ಹೋದ್ನಂತೆ.
ಮರುದಿನ ಪೇಪರ್ ಹಾಕ್ಕೊಂಡು ಬಂದಾಗ ಆ ವ್ಯಕ್ತಿ ಮತ್ತೆ ಸಿಕ್ಕಿ “ನಂಗೆ ಓದಬೇಕ್ ಅಂತ ಆಸೆ ಇದೆ, ಆದ್ರೆ ನಾನು ಎರಡನೇ ಕ್ಲಾಸು ಮಾತ್ರ ಓದಿರೋದು. ಈಗ ಮತ್ತೆ ನಾನು ಓದಬಹುದಾ ?” ಅಂತ ಕೇಳಿದ್ನಂತೆ. ಅದಕ್ಕೆ ಆ ಹುಡ್ಗ “ಖಂಡಿತಾ ಎಕ್ಸಾಮ್ ಕಟ್ಟಿ ಓದಿ ಅಂಕಲ್” ಅಂತ ಒಂದೇ ವಾರದಲ್ಲಿ ಒಬ್ರು ಟೀಚರ್ನ ಪರಿಚಯ ಮಾಡಿಸಿದ್ನಂತೆ. ಅದರ ಪರಿಣಾಮವಾಗಿ ಕರ್ನಾಟಕ ಸರ್ಕಾರದ ಕರ್ನಾಟಕ ಮುಕ್ತ ಶಾಲೆ (ಕೆಓಎಸ್) ಎಂಬ ಯೋಜನೆಯಡಿಯಲ್ಲಿ ಆ ವ್ಯಕ್ತಿ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಪಾಸು ಮಾಡಿ ಈಗ ಪಿಯುಸಿ ಪರೀಕ್ಷೆಯನ್ನು ಕಟ್ಟಿ ಅದಕ್ಕೆ ಓದುತ್ತಿದ್ದಾನಂತೆ. ಆ ವ್ಯಕ್ತಿ ಇವತ್ತಿಗೂ “ನಾನ್ ಸಾಯೋವರ್ಗು ಹೀಗೆ ಯಾವದಾದ್ರೋಂದು ಎಕ್ಸಾಮನ್ನು ಕಡ್ತಾನೇ ಇರ್ತಿನಿ, ನಿರಂತರವಾಗಿ ಓದುತ್ತಾನೆ ಇರ್ತೀನಿ” ಎನ್ನುತ್ತಾನಂತೆ.
ವ್ಹಾ.! ಏನ್ ಅದ್ಭುತ ಅಲ್ವಾ, ಆ ಹುಡ್ಗ ದಿನಾ ಆ ಸೈಕಲ್ ರಿಪೇರಿ ಮಾಡೋ ಅಜ್ಜಂಗೆ ನ್ಯೂಸ್ ಪೇಪರ್ ನ ಒಂದುವರೆ ವರ್ಷ ನಿರಂತರವಾಗಿ ಕೊಟ್ಟಿದ್ದಕ್ಕೆ ಆ ವ್ಯಕ್ತಿಯ ಲೈಫೇ ಚೆಂಜಾಗೋಯ್ತು. ಈ ಸತ್ಯ ಕಥೆಯಿಂದ ನಾವ್ ಕಲಿಬೇಕಾಗಿರೋದು ಏನ್ ಗೊತ್ತಾ? ಯಾವ ಪ್ರಕ್ರಿಯೆಯೂ ಸುಮ್ಮನೆ ಸಂಭವಿಸಲ್ಲ..! ವಿದ್ಯೆ ಅನ್ನೋದು ಯಾರಪ್ಪನ ಸ್ವತ್ತೂ ಅಲ್ಲಾ..! ಅಕ್ಷರ ಜ್ಞಾನ ಅನ್ನೋದು ಯಾವುದೇ ವ್ಯಕ್ತಿಯಲ್ಲಿ ಆನಂದವನ್ನ ಉಂಟು ಮಾಡೋ ದಾರಿಯಾಗಿರುತ್ತೆ..! ಹಾಗೆ ಅಕ್ಷರ ಜ್ಞಾನ ಕಲೀಬೇಕು ಅನ್ನೋ ಆಸೆ ನಿಜವಾಗ್ಲು ಮನದೊಳಗಿದ್ರೆ ಆ ತಾಯಿ ಸರಸ್ವತಿಯೇ ಆತನನ್ನ ಹುಡ್ಕೊಂಡು ಬರ್ತಾಳೆ… ಅದು 5 ವರ್ಷದ ಮಗುವಾದ್ರೂ ಸರಿ, 50 ವರ್ಷ ದಾಟಿದ ಮುದುಕನಾದ್ರೂ ಸರಿ, ಓದಬೇಕು ನಾನು ಸಾಧಿಸ್ಲೆಬೇಕು ಅನ್ನೋ ಹುಚ್ಚು ಇದ್ರೆ ಅಷ್ಟೇ ಸಾಕು… ಹಾಗಾದ್ರೆ ಸ್ನೇಹಿತ್ರೆ, ಇವತ್ತಿಂದ ನಾವೂ ಏನನ್ನಾದ್ರೂ ಸಾಧಿಸೋ ಹುಚ್ಚನ್ನ ಹಿಡಿಸಿಕೊಳ್ಳೋಣ… ಅವಕಾಶಕ್ಕಾಗಿ ತಾಳ್ಮೆಯಿಂದ ಕಾಯೋಣ, ಯಾರಿಗೊತ್ತು ಆ ವಯಸ್ಸಾದ ವ್ಯಕ್ತಿಗೆ ಅಕ್ಷರ ಜ್ಞಾನ ಪಡೆಯಲು ಸಿಕ್ಕ ಅವಕಾಶದಂತೆ ದೂರದಲ್ಲೆಲ್ಲೋ ಅವಕಾಶಗಳ ಬುತ್ತಿ ನಮ್ಮನ್ನು ಕಾಯುತ್ತಲಿರಬಹುದು…. ಅಲ್ಲಿವರ್ಗು ಅನಂತ ಉತ್ಸಾಹ, ಅನಂತ ಶಕ್ತಿ ಹಾಗೂ ಅನಂತ ತಾಳ್ಮೆಗಳಿಂದ ಜೀವನವನ್ನು ಮುನ್ನಡೆಸೋಣ….
ಬರಹ : ನಾಗೇಂದ್ರ.ಟಿ.ಆರ್ ಅಂತಿಮ ವರ್ಷದ ಬಿ ಎಸ್ ಡಬ್ಲ್ಯೂ ವಿದ್ಯಾರ್ಥಿ, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ