ಸ್ವದೇಶೀ ಮೇಳಕ್ಕೆ 3 ಲಕ್ಷದ 75 ಸಾವಿರ ಜನ ಭೇಟಿ:7 ಕೋಟಿ 68 ಲಕ್ಷ ವಹಿವಾಟು, ಅಭೂತಪೂರ್ವ ಯಶಸ್ಸಿನೊಂದಿಗೆ ತೆರೆ ಕಂಡ ಸ್ವದೇಶಿ ಮೇಳ

ಸ್ವದೇಶೀ ಮೇಳಕ್ಕೆ 3 ಲಕ್ಷದ 75 ಸಾವಿರ ಜನ ಭೇಟಿ:7 ಕೋಟಿ 68 ಲಕ್ಷ ವಹಿವಾಟು,
ಅಭೂತಪೂರ್ವ ಯಶಸ್ಸಿನೊಂದಿಗೆ ತೆರೆ ಕಂಡ ಸ್ವದೇಶಿ ಮೇಳ

ಶಿವಮೊಗ್ಗ : ಜನರಿಗೆ ದೇಶೀಯ ವಸ್ತುಗಳ ಪರಿಚಯ ಮತ್ತು ಸ್ವದೇಶಿ ಉತ್ಪಾದಕರಿಗೆ ಮಾರುಕಟ್ಟೆ ಒದಗಿಸುವ ದೃಷ್ಟಿಯಿಂದ ನಗರದ ಫ್ರೀಡಂ ಪಾರ್ಕ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ಸ್ವದೇಶಿ ಜಾಗರಣ ಮಂಚ್‌ ಆಯೋಜಿಸಿದ್ದ ಬೃಹತ್‌ ಸ್ವದೇಶಿ ಮೇಳವು ಅಭೂತಪೂರ್ವ ಯಶಸ್ಸಿನೊಂದಿಗೆ ಭಾನುವಾರ ತೆರೆ ಕಂಡಿದೆ.

ನಗರದಲ್ಲಿ ಐದು ದಿನಗಳ ಕಾಲ ನಡೆದ ಮೇಳಕ್ಕೆ ಪ್ರತಿ ನಿತ್ಯವೂ ಜನ ಸಾಗರೋಪಾದಿಯಲ್ಲಿ ಹರಿದು ಬಂದಿದ್ದು, ಒಟ್ಟು 3 ಲಕ್ಷದ 75 ಸಾವಿರ ಜನರ ಭೇಟಿ ಕೊಟ್ಟಿದ್ದು, ಮೇಳದ 305 ಮಳಿಗೆಗಳ ಮೂಲಕ 7 ಕೋಟಿ 68 ಲಕ್ಷ ರೂಪಾಯಿಗಳ ವ್ಯಾಪಾರ ವಹಿವಾಟು ನಡೆದಿದ್ದು ಐತಿಹಾಸಿಕ ದಾಖಲೆಯಾಗಿದೆ.

ಯಾವುದೇ ಫ್ಲೆಕ್ಸ್ ಗಳ ಪ್ರಚಾರದಾಡಂಬರವಿಲ್ಲದಿದ್ದರೂ ಸ್ವದೇಶೀ ತನಕ್ಕೆ ಶಿವಮೊಗ್ಗ ನಗರದ ಜನತೆ ಮನ್ನಣೆ ಕೊಟ್ಟಿದ್ದು, ಇದು ಸ್ವದೇಶಿ ಪ್ರಜ್ಞೆಗೆ ಸಾಕ್ಷಿಯಾಯಿತಲ್ಲದೇ ಜನರ ನಡುವೆ ಸಂಪರ್ಕ ಕೊಂಡಿಯಾಯಿತು. ದೂಳು ಮುಕ್ತ, ಪ್ಲಾಸ್ಟಿಕ್‌ ಮುಕ್ತವಾಗಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಮೂಲಕ ಪರಿಸರ ಸ್ನೇಹಿ ವಾತಾವರಣ ನಿರ್ಮಾಣ ಮಾಡಲಾಗಿತ್ತು. ಲಕ್ಷಾಂತರ ಮಂದಿ ಸೇರಿದ ಮೇಳದಲ್ಲಿ ಊಟದ ತಟ್ಟೆ, ಲೋಟ ವ್ಯವಸ್ಥೆ, ಟೀ,ಕಾಫಿ ಕೂಟಕ್ಕೆ ಲೋಟಗಳ ವ್ಯವಸ್ಥೆ ಮಾಡಲಾಗಿತ್ತು.

ಆಹಾರ ಉತ್ಪಾದನೆ, ಕೈಗಾರಿಕೆ, ಕೃಷಿ, ಸ್ವದೇಶಿ ಪರಂಪರೆ ಹಾಗೂ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯಗಳ ಪರವಾಗಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ, ಬ್ಯಾಂಕ್‌ ಮಳಿಗೆಗಳು ಹೀಗೆ 305 ಮಳಿಗೆಗಳ ಪೈಕಿ 125 ದೇಶೀಯ ಸ್ಟಾಲ್‌, 28 ಆಹಾರ ಮಳಿಗೆ, ಅಂತಾರಾಷ್ಟ್ರೀಯ ಮಟ್ಟದ ಕೈಗಾರಿಕೆ ಹಾಗೂ 8 ರಾಷ್ಟ್ರೀಕೃತ ಬ್ಯಾಂಕ್‌, 12 ಪ್ರಾಯೋಜಕರ ಉತ್ಪನ್ನ ಪ್ರದರ್ಶನ ಮಳಿಗೆಗಳಿದ್ದವು. ತಾರಸಿ ತೋಟ ತರಬೇತಿ ಕಾರ್ಯಾಗಾರಗಳಿಂದ ಹಿಡಿದು ರೈತರ ನಡೆ ದೇಶೀಯ ಕಡೆ ಅಲ್ಲಿಯ ತನಕ 16 ಕಾರ್ಯಾಗಾರಗಳು
ನಡೆದವು, ಅಲ್ಲದೇ ತರಬೇತಿ ಕಾರ್ಯಾಗಾರಗಳನ್ನು 7 ಸಾವಿರ ಜನ ನೇರ ಪ್ರಸಾರದಲ್ಲಿ ವೀಕ್ಷಣೆ ಹಾಗೂ 1 ಲಕ್ಷದ 20 ಸಾವಿರ ಜನ ಸಾಮಾಜಿಕ ಜಾಲ ತಾಣದಲ್ಲಿ ವೀಕ್ಷಿಸಿದ್ದು ವಿಶೇಷ,

ನಗರದಲ್ಲಿ ಕೈಬರಹದ 6 ಮಹಾದ್ವಾರಗಳನ್ನು ನಿರ್ಮಾಣ ಮಾಡಲಾಗಿತ್ತು, ಮೇಳಕ್ಕೂ ಮೊದಲು 40 ಶಾಲೆಗಳನ್ನು ಸಂಪರ್ಕಿಸಿ ಮೇಳದ ಮಾಹಿತಿ ನೀಡಲಾಗಿತ್ತು. ದೇಶೀಯ ಬಟ್ಟೆಗಳಿಂದ ಹಲವಾರು ಅಲಂಕಾರ ಮಾಡಲಾಗಿತ್ತು, 60 ಅಡಿಯ ಅಗಲ ಮತ್ತು ಉದ್ದದ ರಂಗೋಲಿ, 1200 ಗೋ ಆರತಿ ಮತ್ತು 3000 ಕ್ಕೂ ಹೆಚ್ಚು ಗೋ ಗ್ರಾಸ ನೀಡಲಾಯಿತು. ಸ್ವದೇಶೀ ಚಿತ್ರಕಲಾ ಸ್ಪರ್ಧೆಯಲ್ಲಿ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು, 334 ಮಕ್ಕಳು ಸ್ವದೇಶಿ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 120 ಅಲಂಕೃತ ಮಡಿಕೆಗಳನ್ನು ಮಾಡಿ ಮಹಿಳೆಯರು ನೀಡಿದ್ದರು.

ಪ್ರತಿ ದಿನವೂ ಖ್ಯಾತ ಕಲಾವಿದರಿಂದ ಹಾಡು, ಭರತನಾಟ್ಯ, ಯೋಗ, ಸಂಗೀತ, ಬಾನ್ಸುರಿ ವಾದನ,ಯಕ್ಷಗಾನ , ಡೊಳ್ಳು , ವೀರಗಾಸೆ ಹೀಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳಕ್ಕೆ ಮೆರಗು ತಂದುಕೊಟ್ಟಿದ್ದವು ಮೇಳದಲ್ಲಿ ಮೇಲುಕೋಟೆ ರುಚಿಕರ ಪುಳಿಯೋಗರೆ, ಮುಳುಬಾಗಿಲಿನ ಹೆಸರಾಂತ ದೋಸೆ, ದಾವಣಗೆರೆ ಬೆಣ್ಣೆದೋಸೆ, ಸಾವಯವ ಕಬ್ಬಿನಹಾಲು, ಅಡಕೆ ಐಸ್‌ ಕ್ರೀಂ, ಬಂಗಾರಪೇಟೆ ಪಾನಿಪೂರಿ, ಹುಬ್ಬಳ್ಳಿಯ ಗಿರಮಿಟ್‌, ಸಿರಿಧಾನ್ಯಗಳ ರೊಟ್ಟಿ , ಅಕ್ಕಿ ರೊಟ್ಟಿ ಎಣಗಾಯಿ ಪಲ್ಯ, (ನವಣೆ, ಸಜ್ಜೆ, ರಾಗಿ, ಜೋಳ ,ಅಕ್ಕಿ ರೊಟ್ಟಿ) ಸೇರಿದಂತೆ ಕವಳಿ, ಕಂಚಿ, ಮಾವು, ನಿಂಬೆ, ಮೆಣಸಿನ ಹಿಂಡಿ, ಮೆಂತ್ಯ ಹಿಂಡಿ, ಅಗಸಿ, ಶೇಂಗಾ, ಗುರೆಳ್ಳು ಚಟ್ನಿ ಪುಡಿಯಂತಹ ವೈವಿಧ್ಯಮಯ ಆಹಾರಗಳೂ ಸ್ವದೇಶಿ ಆಹಾರ ಪ್ರಿಯರ ಮನಸ್ಸನ್ನು ಸಂತೃಪ್ತಿಗೊಳಿಸಿತು.

ಇನ್ನೂ ಸ್ವದೇಶಿ ಕ್ರೀಡೆಗಳಾದ ಹಗ್ಗ ಜಗ್ಗಾಟ, ಲಗೋರಿ, ಕೋಲಾಟ, ಅವ್ವ ಅಪ್ಪಚ್ಚಿ ಆಟ, ಕುದುರೆ ಆಟ, ಚೆಂಡಾಟ, ರಿಂಗ್‌ ಆಟ, ಬುಗುರಿ, ಟೈರ್‌ ಗಾಲಿ ಆಟಗಳು ಮಕ್ಕಳಿಗೆ ಭರಪೂರ ಮನರಂಜನೆ ನೀಡಿದವು.

ಶಿವಮೊಗ್ಗ ನಗರದಲ್ಲಿ ಮೊಟ್ಟಮೊದಲ ಬಾರಿಗೆ ” ಸ್ವದೇಶಿ ಜಾಗರಣ ಮಂಚ್‌ ” ಆಯೋಜಿಸಿದ್ದ ಸ್ವದೇಶಿ ಮೇಳ ಅದ್ದೂರಿಯಾಗಿ,ಯಶಸ್ವಿಯಾಗಿ ಜನಕಾರ್ಷಣೆಯೊಂದಿಗೆ ಮುಕ್ತಾಯಗೊಂಡಿದೆ.

ಮೊಟ್ಟಮೊದಲ ಬಾರಿಗೆ ಆಯೋಜಿಸಿದ್ದ ಸ್ವದೇಶಿ ಮೇಳವನ್ನು ಐದು ದಿನಗಳ ಕಾಲವೂ ಯಶಸ್ವಿಯಾಗಿ ಮುಕ್ತಾಯಗೊಳಿಸಿಕೊಟ್ಟಂತಹ ಜನತೆಗೆಗೂ, ಸಹಕರಿಸಿದ ಪ್ರತಿಯೊಬ್ಬರಿಗೂ ಸ್ವದೇಶಿ ಜಾಗರಣ ಮಂಚ್‌ ನ ವತಿಯಿಂದ ತುಂಬು ಹೃದಯದ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ

Leave a Reply

Your email address will not be published. Required fields are marked *

Optimized by Optimole
error: Content is protected !!