ಐತಿಹಾಸಿಕ ದಾಖಲೆಯತ್ತ ಸ್ವದೇಶಿ ಮೇಳ, ಹರಿದು ಬರುತ್ತಿದೆ ಜನ ಸಾಗರ
ಶಿವಮೊಗ್ಗ : ನಗರದ ಜನತೆಗೆ ದೇಶೀಯ ವಸ್ತುಗಳ ಪರಿಚಯ ಮತ್ತು ಸ್ವದೇಶಿ ಉತ್ಪಾದಕರಿಗೆ ಮಾರುಕಟ್ಟೆ ಒದಗಿಸುವ ದೃಷ್ಟಿಯಿಂದ ನಗರದ ಫ್ರೀಡಂ ಪಾರ್ಕ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ಸ್ವದೇಶಿ ಜಾಗರಣ ಮಂಚ್ ಆಯೋಜಿಸಿರುವ ಬೃಹತ್ ಸ್ವದೇಶಿ ಮೇಳಕ್ಕೆ ಜನ ಸಾಗರವೇ ಹರಿದು ಬರುತ್ತಿದ್ದು, ಐತಿಹಾಸಿಕ ದಾಖಲೆಯತ್ತ ದಾಪುಗಾಲಿಡುತ್ತಿದೆ.
ಯಾವುದೇ ಫ್ಲೆಕ್ಸ್ ಗಳ ಅಬ್ಬರ, ಪ್ರಚಾರದ ಆಡಂಬರವಿಲ್ಲದಿದ್ದರೂ ಸ್ವದೇಶೀ ತನಕ್ಕೆ ಶಿವಮೊಗ್ಗ ನಗರದ ಜನತೆ ಮನ್ನಣೆ ಕೊಟ್ಟಿದ್ದು, ಇದು ಸ್ವದೇಶಿ ಪ್ರಜ್ಞೆಗೆ ಸಾಕ್ಷಿಯಾಗಿದೆ. ಬುಧವಾರ ಸಂಜೆ ಉದ್ಘಾಟನೆಗೊಂಡ ಕೆಲವೇ ಗಂಟೆಗಳಲ್ಲಿ ಸಾಗರೋಪಾದಿಯಲ್ಲಿ ಜನರು ಹರಿದು ಬರುತ್ತಿದ್ದರೂ ಕೂಡ ಮೇಳದ ಯಾವುದೇ ಭಾಗದಲ್ಲೂ ಧೂಳಿನ ವಾತಾವರಣವಿಲ್ಲದೇ, ಸ್ವಚ್ಛತೆಯಿಂದ ಕೂಡಿದ್ದು, ಪರಿಸರ ಸ್ನೇಹಿ ವಾತಾವರಣ ನಿರ್ಮಾಣವಾಗಿದೆ.
ಮೊದಲ ದಿನ ಸುಮಾರು 16 ಸಾವಿರಕ್ಕೂ ಹೆಚ್ಚು ಜನ ಭೇಟಿ ನೀಡಿದ್ದರೆ, ಎರಡನೆಯ ದಿನ 35 ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಒಟ್ಟು 52, 384 ಜನ ಈಗಾಗಲೇ ಮೇಳವನ್ನು ಕಣ್ತುಂಬಿಕೊಳ್ಳುವ ಮೂಲಕ ದಾಖಲೆ ಬರೆದಿದ್ದಾರೆ, ಅಲ್ಲದೇ ಪ್ರತಿ ನಿತ್ಯವೂ 220 ಸ್ಟಾಲ್‌ಗಳಲ್ಲಿ ಒಟ್ಟು 3 ಕೋಟಿ ರೂಗಿಂತ ಹೆಚ್ಚು ವ್ಯಾಪಾರ ವಹಿವಾಟು ನಡೆದಿದೆ.
ಜೊತೆಗೆ ಮೇಳಕ್ಕೆ ಮಹಿಳೆಯರು, ಮಕ್ಕಳು, ಯುವಕರು, ವೃದ್ಧರು ಹೀಗೆ ಎಲ್ಲ ವಯೋಮಾನದವರೂ ಭೇಟಿ ಕೊಟ್ಟಿದ್ದು, ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ನೋಡಿ ಆನಂದಿಸಿದ್ದಾರೆ.
ಮೇಳವು ಭಾನುವಾರ ತನಕ ನಡೆಯಲಿದ್ದು, ಪ್ರತಿ ದಿನವೂ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಡೆಯಲಿವೆ. ಶನಿವಾರ ಹಾಗೂ ಭಾನುವಾರ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಹರಿದು ಬರುವ ನಿರೀಕ್ಷೆ ಇದ್ದು, ಐತಿಹಾಸಿಕ ದಾಖಲೆ ಬರೆಯುವತ್ತ ಮೇಳವು ಸಾಗಿದೆ.
ವಾಹನಗಳ ಪಾರ್ಕಿಂಗ್‌ಗೆ ಮೇಳದ ಹಿಂಭಾಗ ವ್ಯವಸ್ಥೆಯನ್ನು ಮಾಡಲಾಗಿದ್ದು, ನಾಗರಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರಲ್ಲದೇ, ಮೇಳಕ್ಕೆ ಜಿಲ್ಲೆಯ ಜನತೆ ಉತ್ತಮವಾಗಿ ಸ್ಪಂದಿಸಿರುವುದಕ್ಕೆ ಆಯೋಜಕರು ಹಾಗೂ ಸಂಘಟಕರು ಸಂತಸವನ್ನು ವ್ಯಕ್ತಪಡಿಸಿದ್ದಾರೆ.