ಮೈಕ್ರೋ ಫೈನಾನ್ಸ್ : ಶಿಕ್ಷಿತವಾಗಬೇಕಿದೆ ಗ್ರಾಮೀಣ ಸಮುದಾಯ
ಅಶ್ವಸೂರ್ಯ/ಶಿವಮೊಗ್ಗ: ರಾಜ್ಯದೆಲ್ಲೆಡೆ ಮೈಕ್ರೋಫೈನಾನ್ಸ್ ನ ಕಿರುಕುಳ ಸದ್ಯ ಬಹುದೊಡ್ಡ ಸಂಚಲನ ಉಂಟುಮಾಡುತ್ತಿದೆ. ದಿನೇದಿನೇ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದರೂ ಇದಕ್ಕೆ ಕಡಿವಾಣ ಬೀಳುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ ಯಾಕಂದರೆ ಖಾಸಗಿ ಹಣಕಾಸು ಸಂಸ್ಥೆಗಳ ನಿಯಂತ್ರಣಕ್ಕೆ ಸರಿಯಾದ ಕಾಯ್ದೆ ಅಥವಾ ಕಾನೂನು ಇಲ್ಲ ಎಂಬುದು ಆತಂಕಕಾರಿ ಕಾರಣವಾಗಿದೆ.
ಇದರಲ್ಲಿ ಪ್ರಮುಖವಾಗಿ ಗಮನಿಸಬೇಕಾದ ವಿಚಾರ ಎಂದರೆ ಗ್ರಾಮೀಣ ಮಟ್ಟದಲ್ಲಿ ಮೈಕ್ರೋ ಫೈನಾನ್ಸ್ ನಿಂದ ರೈತ ಕುಟುಂಬಕ್ಕೆ ಉಂಟಾಗುತ್ತಿರುವ ತೊಂದರೆ ಮತ್ತು ಅದರಿಂದ ಬೇಸತ್ತು ರೈತ ಆತ್ಮಹತ್ಯೆಗೆ ಶರಣಾಗುತ್ತಿರುವುದು.
ಗ್ರಾಮೀಣ ಭಾಗದಲ್ಲಿಲ್ಲ ಅರಿವು: ರೈತರು ಯಾವುದೋ ಬೆಳೆ ಬೆಳೆಯಲು ಅಥವಾ ಅವರ ಮಕ್ಕಳ ಶಿಕ್ಷಣಕ್ಕಾಗಿ ಸಣ್ಣ ಫೈನಾನ್ಸ್ಗಳಿಂದ ಮೂವತ್ತು ಸಾವಿರದಿಂದ ಒಂದು ಲಕ್ಷದವರೆಗೆ ಕಿರು ಸಾಲ ಪಡೆದುಕೊಳ್ಳುತ್ತಾರೆ ಆದರೆ ಆ ಸಾಲಪತ್ರಕ್ಕೆ ಸಹಿ ಹಾಕುವಾಗ ಅಲ್ಲಿನ ಷರತ್ತುಗಳನ್ನು ಸರಿಯಾಗಿ ಗಮನಿಸದೆಯೋ ಅಥವಾ ಸಾಲ ನೀಡುವವರ ಮೇಲಿನ ಅತಿಯಾದ ನಂಬಿಕೆಯಿಂದ ಹಾಗೆ ಸಹಿ ಮಾಡುತ್ತಾರೆ.ಅದು ಅನಂತರ ಯಾವುದೇ ರೈತರು ಕಂತು ಕಟ್ಟಲು
ಫೈನಾನ್ಸ್ ವಸೂಲಿಗಾರರ ಕಿರುಕುಳಕ್ಕೆ ದಾರಿಯಾಗುತ್ತದೆ. ಒಂದೆರಡು ದಿನ ಹೆಚ್ಚುಕಡಿಮೆ ಆದಾಗ ಸರಿದೂಗಿಸಿಕೊಳ್ಳದೆ ವಿನಾಕಾರಣ ರೈತರಿಗೆ ನಿರಂತರ ಕಿರುಕುಳ ನೀಡಲಾಗುತ್ತದೆ.
ರಾಷ್ಟ್ರೀಕೃತ ಬ್ಯಾಂಕುಗಳು ರೈತರಿಗೋ, ಉದ್ಯಮಿಗಳಿಗೋ? : ಇಂದು ರಾಷ್ಟ್ರೀಕೃತ ಬ್ಯಾಂಕುಗಳು ಕೇವಲ ಉದ್ಯಮಿಗಳಿಗೆ ಶ್ರೀಮಂತ ವರ್ಗದವರಿಗೆ ಯಾವುದೇ ದಾಖಲೆ ಇಲ್ಲದೇ ಸಾಲ ಸೌಲಭ್ಯ ನೀಡುವಷ್ಟರ ಮಟ್ಟಿಗೆ ಮುಂದುವರೆದಿದೆ ಆದರೆ ರೈತರಿಗೆ ಗ್ರಾಮೀಣ ಸಮುದಾಯಕ್ಕೆ ಯಾವುದೇ ಕಿರುಸಾಲ ಸೌಲಭ್ಯ ನೀಡದೇ ಇರುವುದಕ್ಕಾಗಿ ಖಾಸಗಿ ಫೈನಾನ್ಸ್ ನ ಮೊರೆ ಹೋಗುವುದು ಅನಿವಾರ್ಯವಾಗಿದೆ.
ಕಾನೂನು ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಗಳು: ಈ ಸಂಸ್ಥೆಗಳು ಭಾರತೀಯ ರಿಸರ್ವ್ ಬ್ಯಾಂಕಿನ ಅಧೀನಕ್ಕೆ ಒಳಪಟ್ಟು ಕಾರ್ಯನಿರ್ವಹಿಸುವುದರಿಂದ ಇವುಗಳ ಮೇಲೆ ರಿಸರ್ವ್ ಬ್ಯಾಂಕ್ ನೇರ ನಿಯಂತ್ರಣ ಹೊಂದಿದೆ. ರಿಸರ್ವ್ ಬ್ಯಾಂಕ್ ಪ್ರಕಾರ ಇವುಗಳು 2 ಲಕ್ಷಕ್ಕಿಂತ ಹೆಚ್ಚು ಸಾಲ ನೀಡುವಂತಿಲ್ಲ. ಅಲ್ಲದೆ ಸಾಲಕ್ಕೆ ರಿಸರ್ವ್ ಬ್ಯಾಂಕಿನ ನಿಯಮಕ್ಕಿಂತ ಹೆಚ್ಚಿನ ಬಡ್ಡಿ ವಿಧಿಸುವುದು. ಸಾಲ ಮರುಪಾವತಿ ವಿಳಂಬದ ಮೇಲೆ ಹೆಚ್ಚಿನ ದಂಡ ವಿಧಿಸುವ ಮೂಲಕ ದೌರ್ಜನ್ಯ ಎಸಗುತ್ತಿವೆ.
ರಾಜ್ಯದಲ್ಲಿ ಅಥವಾ ರಾಷ್ಟದಲ್ಲಿ ಯಾವುದೇ ಸಮಸ್ಯೆ ಉಂಟಾದರೂ ಸಹ ಅದು ಮೊದಲಿಗೆ ನೇರ ಪ್ರಭಾವ ಬೀರುವುದು ರೈತನ ಮೇಲೆಯೇ ಎಂದರೆ ತಪ್ಪಾಗಲಾರದು. ಬೆಳೆಹಾನಿ, ನಿಗದಿತ ಬೆಲೆ ದೊರೆಯದೇ ಇರುವುದು, ಕಾಡುಪ್ರಾಣಿಗಳ ಹಾವಳಿ ಹೀಗೆ ವರ್ಷಪೂರ್ತಿ ಸಂಕಷ್ಟದ ಸುಳಿಯಲ್ಲಿ ಜೀವಿಸುವ ರೈತನಿಗೆ ಮೈಕ್ರೋ ಫೈನಾನ್ಸ್ ಇಂದ ಇನ್ನಷ್ಟು ಕಿರುಕುಳ ಉಂಟಾಗುತ್ತಿರುವುದು ಅಂತ್ಯಂತ ಅಮಾನವೀಯವಾದುದು.
ಸರ್ಕಾರ ಕೇವಲ ಕಾಯ್ದೆ ರೂಪಿಸಿ ಕಿರುಕುಳ ತಡೆಯಲು ಸಾಧ್ಯವಿಲ್ಲ ಅದರ ಜೊತೆಗೆ ಗ್ರಾಮ ಹಂತದಲ್ಲಿ ಅರಿವು ಕಾರ್ಯಕ್ರಮ ಆಯೋಜಿಸಿ ಗ್ರಾಮೀಣ ಮತ್ತು ನಗರ ಭಾಗದಲ್ಲಿ ಅರಿವು ಮೂಡಿಸಬೇಕು. ಸಾಮಾನ್ಯ ಜನರಿಗೆ ಕಾನೂನಿನ ಅರಿವು ಮೂಡಿಸಬೇಕು. ಅನಧಿಕೃತ ಮೈಕ್ರೋ ಫೈನಾನ್ಸ್ ಮುಚ್ಚುವ ಕೆಲಸ ಶೀಘ್ರವಾಗಬೇಕು.