Headlines

ಬೆಂಗಳೂರು : ತಾಯಿ ಮಗನ ಸೈಬರ್ ವಂಚನೆ.! ದೇಶದ ಉದ್ದಗಲಕ್ಕೂ 9 ಸಾವಿರ ಬ್ಯಾಂಕ್ ಖಾತೆ 242 ಎಟಿಎಂ ಕಾರ್ಡ್.! ಎನಿದು ಅಮ್ಮ ಮಗನ ಕಥೆ.?

ಅಶೋಕನ/ಬೆಂಗಳೂರು : ಬೆಂಗಳೂರು ನಗರದಲ್ಲಿ ಸೈಬರ್ ವಂಚನೆಯಲ್ಲಿ ತೊಡಗಿದ್ದ ಅಮ್ಮ ಮಗನನ್ನು ಪೊಲೀಸರು ಬಂಧಿಸಿದ್ದಾರೆ.! ಸೈಬರ್ ವಂಚಕರ ಬೃಹತ್ ಜಾಲವನ್ನು ಬೆಂಗಳೂರು ಪೊಲೀಸರು ಬೇದಿಸಿದ್ದು, ಅಮ್ಮ ಮಗ ಸೇರಿ ದೊಡ್ಡ ಸೈಬರ್ ವಂಚಕರ ಜಾಲವನ್ನೇ ನಿರ್ಮಾಣ ಮಾಡಿದ್ದು, ಅವರ ವಹಿವಾಟುಗಳನ್ನು ನೋಡಿ ಪೊಲೀಸರೆ ದಂಗಾಗಿ ಹೋಗಿದ್ದಾರೆ.

ಸಾರ್ವಜನಿಕರ ಹೆಸರಿನಲ್ಲಿ ವಿವಿಧ ರಾಜ್ಯಗಳ 9 ಸಾವಿರಕ್ಕೂ ಹೆಚ್ಚು ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ಬರೋಬ್ಬರಿ 240 ಕೋಟಿಗೂ ಅಧಿಕ ಹಣವನ್ನು ಅಕ್ರಮ ಹಣದ ವಹಿವಾಟು ನಡೆಸಿದ್ದ ಬೃಹತ್ ಸೈಬರ್ ಜಾಲವನ್ನು ಹುಳಿಮಾವು ಠಾಣೆ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಮುಖ ಆರೋಪಿಗಳಾದ ಬೆಂಗಳೂರಿನ ಮೊಹಮ್ಮದ್ ಹುಜೈಪಾ (22), ಈತನ ತಾಯಿ ಶಬನಾ ಅಬ್ದುಲ್ ಬಾರಿ (49), ಉತ್ತರ ಪ್ರದೇಶ ಚಂದೌಲಿ ಜಿಲ್ಲೆಯ ಅಂಕಿತ್ ಕುಮಾರ್ ಸಿಂಗ್ (32), ರೋತಾಸ್ ಜಿಲ್ಲೆ ಅಜಿತ್ ಕುಮಾರ್ ಯಾದವ್ (29), ರಾಜಸ್ಥಾನ ಚುರು ಜಿಲ್ಲೆಯ ಎಂ.ಅಭಿಷೇಕ್ ಸಿಂಗ್ ರಾಥೋಡ್ (22), ಚಿತ್ತೂರ ಘರ್ ಜಿಲ್ಲೆಯ ವಿಶ್ವರಾಜ್ ಸಿಂಗ್ ಶಕ್ತವಾತ್ (28), ಜುಂಜನ್ ಜಿಲ್ಲೆಯ ಕುಶಾಲ್​ಸಿಂಗ್ ಚೌಹಾನ್ (26), ಶಿಖರ್ ಜಿಲ್ಲೆಯ ಪ್ರದೀಪ್ ಸಿಂಗ್ (30), ಭೂದೋಲಿ ಜಿಲ್ಲೆಯ ಪಿತಾಂಬರ್ ಸಿಂಗ್ (30), ಜುಂಜುನ್ ಜಿಲ್ಲೆಯ ಅಂಜಯ್ ಕುಮಾರ್ (30) ಹಾಗೂ ಜಾರ್ಖಂಡ್ ರಾಜ್ಯದ ಸತ್ಯಂಕುಮಾರ್ ಪಾಂಡೆ (27), ಯುಪಿ ಜಂದೌಲಿ ಜಿಲ್ಲೆಯ ಆಕಾಶ್ ಜೈಸ್​ವಾಲ್ (29) ಬಂಧಿತರು. ಈ ಜಾಲವನ್ನು ದುಬೈನಲ್ಲಿ ಕುಳಿತು ನಿರ್ವಹಣೆ ಮಾಡುತ್ತಿದ್ದ ಪ್ರೇಮ್ ಎಂಬ ಹೆಸರಿನ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಕಷ್ಟು ಮಾಹಿತಿ ಅಧಾರದ ಮೇಲೆ ಒಂದೂವರೆ ತಿಂಗಳ ಹಿಂದೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಹುಳಿಮಾವು ಠಾಣೆ ಪೊಲೀಸರು ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ಎಂ.ನಾರಾಯಣ್ ಸಾರಥ್ಯದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದರು. ಜೆ.ಪಿ. ನಗರದ 9ನೇ ಹಂತದ ಅಂಜನಾಪುರದಲ್ಲಿರುವ ಅಪಾರ್ಟ್ ಮೆಂಟ್​ನಲ್ಲಿ ವಾಸವಾಗಿದ್ದ ಪ್ರಮುಖ ಆರೋಪಿ ಶಬನಾ ಮತ್ತು ಅವಳ ಮಗ ಮೊಹಮ್ಮದ್ ಹುಜೈಪಾನನ್ನು ವಶಕ್ಕೆ ಪಡೆದು ತನಿಖೆ ಚುರುಕು ಗೋಳಿಸಿದ್ದರು. ಇದರಿಂದ ವಂಚನೆ ಕೃತ್ಯಕ್ಕೆ ಬಳಸಿದ್ದ 242 ಡೆಬಿಟ್ ಕಾರ್ಡ್, ಬೆಲೆಬಾಳುವ 58 ಮೊಬೈಲ್ ಫೋನ್​ಗಳು, 531 ಗ್ರಾಂ ಚಿನ್ನಾಭರಣ, 4.89 ಲಕ್ಷ ರೂ. ನಗದು. ಲಕ್ಷಾಂತರ ಬೆಲೆ ಬಾಳುವ 9 ವಾಚ್, 33 ಚೆಕ್ ಬುಕ್​ಗಳು, 21 ಪಾಸ್ ಬುಕ್, 7 ಲ್ಯಾಪ್​ಟಾಪ್, 1 ಆನ್​ಲೈನ್ ಡಿಜಿಟಲ್ ಪೇಮೆಂಟ್ ರಿಂಗ್, 1 ಕ್ರಿಪ್ಟೋ ಕರೆನ್ಸಿ ಬುಕ್, 48 ಸಿಮ್ ಕಾರ್ಡ್ ಸೇರಿ 1 ಕೋಟಿ ರೂ. ಮೌಲ್ಯದ ಸಾಮಗ್ರಿಗಳು ಪತ್ತೆಯಾಗಿವೆ.

ಸ್ವಾಮೀಜಿ ಡಾಟ್ ಕಾಮ್ ಹೆಸರಿನ ಆನ್​ಲೈನ್ ಗೇಮಿಂಗ್ ಆಪ್ ಹಾಗೂ ‘ನಿಯೋ ಸಿಸ್ಟಮ್ ಆಪ್’ ರಚಿಸಿಕೊಂಡು ಕರ್ನಾಟಕ ಸೇರಿ ದೇಶದ ವಿವಿಧ ರಾಜ್ಯಗಳಲ್ಲಿ ಜನಸಾಮಾನ್ಯರಿಗೆ ಹೂಡಿಕೆ ಹೆಸರಿನಲ್ಲಿ ಸಂದೇಶ ಕಳುಹಿಸಿ ವಂಚನೆ ಮಾಡುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ನಕಲಿ ಆಪ್ ಅಪ್​ಲೋಡ್ ಮಾಡಿ ಹೂಡಿಕೆ, ಷೇರು ಮಾರುಕಟ್ಟೆಯಲ್ಲಿ ಹಣ ದ್ವಿಗುಣದ ಆಮಿಷವೊಡ್ಡುತ್ತಿದ್ದರು. ಕಮಿಷನ್ ಹೆಸರಿನಲ್ಲಿ ದಾಖಲೆ ಪಡೆದು ಬ್ಯಾಂಕ್ ಖಾತೆಗಳನ್ನು ತೆರೆದುಕೊಳ್ಳುತ್ತಿದ್ದರು. ಗೇಮಿಂಗ್ಸ್ ಆಪ್ ಡೌನ್​ಲೋಡ್ ಮಾಡಿಸಿ ಅದರಿಂದ ಬರುವ ಒಟಿಪಿ, ಗ್ರಾಹಕರ ಹೆಸರು, ವಿಳಾಸ ಪಡೆದು ವಂಚನೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನ ಅಪಾರ್ಟ್ ಮೆಂಟ್ ‌ನಲ್ಲಿ 50 ಸಾವಿರ ರೂ. ವೆಚ್ಚದ ಬಾಡಿಗೆ ಫ್ಲ್ಯಾಟ್​ನಲ್ಲಿ ವಾಸವಾಗಿದ್ದ ಮೊಹಮ್ಮದ್ ಹುಜೈಪಾ ತಾಯಿ ಶಬಾನಾ ಐಷಾರಾಮಿ ಜೀವನ ನಡೆಸುತ್ತಿದ್ದರು. ಆರೋಪಿಗಳಿಬ್ಬರ ಮನೆಯಲ್ಲಿ 16 ಲಕ್ಷ ರೂ. ಬೆಲೆಬಾಳುವ ರೊಲೆಕ್ಸ್ ಕಂಪನಿಯ ಎರಡು ವಾಚ್​ಗಳು ಪತ್ತೆಯಾಗಿವೆ. ಬಿಕಾಂ ಓದಿಕೊಂಡಿರುವ ಆರೋಪಿ ಮೊಹಮ್ಮದ್ ಹಾಗೂ ಆತನ ವಿವಿಧ ರಾಜ್ಯದ ಸಹಚರರು ಬಿಎಸ್​ಸಿ ಅಗ್ರಿ, ಬಿಟೆಕ್, ಡಿಪ್ಲೋಮಾ, ಮಾಸ್ ಮಿಡಿಯಾ ತರಬೇತಿ ಪಡೆದವರಾಗಿದ್ದಾರೆ ಎಲ್ಲ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!