
ಬ್ರಹ್ಮಾವರ : ಹಿರಿಯ ಪತ್ರಕರ್ತ ಶೇಷಗಿರಿ ಭಟ್ ಆತ್ಮಹತ್ಯೆಗೆ ಶರಣು.!
news.ashwasurya.in
ಅಶ್ವಸೂರ್ಯ/ಬ್ರಹ್ಮಾವರ : ಉಡುಪಿ ಜಿಲ್ಲೆಯ ಹಿರಿಯ ಪತ್ರಕರ್ತರು ಮತ್ತು ಉಪನ್ಯಾಸಕರಾಗಿದ್ದ ಶೇಷಗಿರಿ ಭಟ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬ್ರಹ್ಮಾವರದ ಖಾಸಗಿ ಕಾಲೇಜಿನ ಉಪ ಪ್ರಾಂಶುಪಾಲರಾಗಿದ್ದ ಹಿರಿಯ ಪತ್ರಕರ್ತ ಶೇಷಗಿರಿ ಭಟ್(53) ಎಂಬವರು ಆರೂರು ಗ್ರಾಮದ ದೇವಸ್ಥಾನ ಬೆಟ್ಟು ಎಂಬಲ್ಲಿರುವ ತಮ್ಮ ಮನೆಯಲ್ಲಿ ಶನಿವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.
ಪ್ರಜಾವಾಣಿ ಪತ್ರಿಕೆಯ ಬ್ರಹ್ಮಾವರ ತಾಲೂಕು ವರದಿಗಾರರಾಗಿದ್ದ ಇವರು, ಬ್ರಹ್ಮಾವರ ಚಾಂತಾರು ಕ್ರಾಸ್ ಲ್ಯಾಂಡ್ ಪದವಿ ಪೂರ್ವ ಕಾಲೇಜಿನ ಹಿಂದಿ ಉಪನ್ಯಾಸಕ(ಉಪಪ್ರಾಂಶುಪಾಲ)ರಾಗಿ ಕಳೆದ 25ವರ್ಷ ಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು. ಇವರ ಪತ್ನಿ ಶಾಲಾ ಶಿಕ್ಷಕಿಯಾಗಿದ್ದು, ಮಗ ಶಿವಮೊಗ್ಗದಲ್ಲಿ ದ್ವೀತಿಯ ವರ್ಷದ ಎಂಬಿಬಿಎಸ್ ಓದುತ್ತಿದ್ದಾನೆ.

ಬೆಳಗ್ಗೆ ಪತ್ನಿಯನ್ನು ಸ್ಕೂಟರಿನಲ್ಲಿ ಬಸ್ ನಿಲ್ದಾಣಕ್ಕೆ ಬಿಟ್ಟು ಬಂದ ಇವರು, ಮನೆಯ ಮೇಲಿನ ಬೆಡ್ರೂಮ್ಗೆ ತೆರಳಿ ಫ್ಯಾನಿಗೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲಿ.? ಅರ್ಥಿಕವಾಗಿ ಸದೃಢರಾಗಿದ್ದರು ಮತ್ತು ಕುಟುಂಬದಲ್ಲು ಯಾವುದೇ ಸಮಸ್ಯೆ ಕೂಡ ಇರಲಿಲ್ಲವಂತೆ.!ಎಲ್ಲರೊಂದಿಗೂ ಆತ್ಮೀಯರಾಗಿ ಬೇರೆಯುತ್ತಿದ್ದಂತಹ ವ್ಯಕ್ತಿ ಹೀಗೆ ಆತ್ಮಹತ್ಯೆಗೆ ಶರಣಾಗಿರುವುದು ಎಲ್ಲರಲ್ಲೂ ಸಾಕಷ್ಟು ಕೂತುಹಲ ಮೂಡಿಸಿದೆ.! ಮೃತರು ತಂದೆ, ತಾಯಿ, ಪತ್ನಿ, ಪುತ್ರ ಹಾಗೂ ಸಹೋದರಿಯನ್ನು ಅಗಲಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿರುವ ಇವರು, ಬ್ರಹ್ಮಾವರ ತಾಲೂಕು ಪತ್ರ ಕರ್ತರ ಸಂಘದ ಉಪಾಧ್ಯಕ್ಷರಾಗಿದ್ದಾರೆ. ಇವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ.ಕುರ್ಯ ಮತ್ತು ಶಿವಮೊಗ್ಗ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಮತ್ತು ಸಂಘದ ಸದಸ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

