ಶಾಲೆ ಆವರಣದಲ್ಲಿ 29 ವರ್ಷದ ಶಿಕ್ಷಕಿಗೆ 30 ಬಾರಿ ಚಾಕು ಇರಿದು ಭೀಕರ ಹತ್ಯೆ.!
news.ashwasurya.in
ಅಶ್ವಸೂರ್ಯ/ಹರಿಯಾಣ : ಸಾರ್ವಜನಿಕವಾಗಿ ಕ್ಷಮೆ ಕೇಳಿಸಿದ್ದಕ್ಕೆ ಮುಖವಾಡ ಧರಿಸಿದ ಸೈಕೋ ಪ್ರೇಮಿಯೊಬ್ಬ, ಶಾಲಾ ಕೊಠಡಿಯಿಂದಲೇ ಶಿಕ್ಷಕಿಯನ್ನು ಹೊರಗೆ ಕರೆದು ಕೇವಲ 30 ಸೆಕೆಂಡುಗಳಲ್ಲಿ 30ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕ್ರೂರವಾಗಿ ಹತ್ಯೆ ಮಾಡಿರುವ ಘಟನೆ ಫರಿದಾಬಾದ್ನ ಸಿಕ್ರೋನಾ ಗ್ರಾಮದಲ್ಲಿ ನಡೆದಿದೆ.
ಸಿಕ್ರೋನಾ ಗ್ರಾಮದ ಖಾಸಗಿ ಶಾಲೆಯ 29 ವರ್ಷದ ಶಿಕ್ಷಕಿ ಸಂಧ್ಯಾ ಬುಧವಾರ ಬೆಳಿಗ್ಗೆ 9:30ರ ಸುಮಾರಿಗೆ ಕರ್ತವ್ಯದಲ್ಲಿದ್ದರು. ಈ ವೇಳೆ ಮುಸುಕು ಧರಿಸಿ ಬಂದ ಯುವಕನೊಬ್ಬ ತಾನು ಸಂಧ್ಯಾ ಜೊತೆ ಮಾತನಾಡಬೇಕು ಎಂದು ಆಡಳಿತಾಧಿಕಾರಿ ಬಳಿ ಕೋರಿದ್ದ. ಸಂಧ್ಯಾ ಶಾಲೆಯ ಗೇಟ್ ಬಳಿ ಹೊರಗೆ ಬಂದ ಕ್ಷಣವೇ, ಆತನ ಮುಖವಾಡದ ಹಿಂದಿದ್ದ ಕ್ರೌರ್ಯ ಬಯಲಾಗಿತ್ತು! ಆಕೆಯ ಕುತ್ತಿಗೆ ಹಿಡಿದು ಎಳೆದಾಡಿದ ಸೈಕೋ, ತಂದಿದ್ದ ಚಾಕುವಿನಿಂದ ಮುಖ, ಕುತ್ತಿಗೆ ಮತ್ತು ಎದೆಗೆ ಭೀಕರವಾಗಿ ಇರಿಯಲು ಪ್ರಾರಂಭಿಸಿದ್ದ.
ಕಿರುಚಾಟ ಕೇಳಿ ಓಡಿಬಂದ ಶಾಲಾ ಆಡಳಿತಾಧಿಕಾರಿ ತಡೆಯಲು ಯತ್ನಿಸಿದಾಗ, ದಾಳಿಕೋರ ಅವರ ಮೇಲೆಯೂ ತಿರುಗಿಬಿದ್ದು ಹೆದರಿಸಿದ್ದಾನೆ. ಬಳಿಕ ನೆಲದ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯ ಹೊಟ್ಟೆ ಮತ್ತು ಮುಖಕ್ಕೆ ಮತ್ತೆ ಸುಮಾರು 20 ಬಾರಿ ಚಾಕು ಇರಿದು, ನಂಬರ್ ಪ್ಲೇಟ್ ಇಲ್ಲದ ಬೈಕ್ನಲ್ಲಿ ಪರಾರಿಯಾಗಿದ್ದ. ತಕ್ಷಣವೇ ಸಂಧ್ಯಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆಕೆ ಈಗಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.

ಘಟನೆ ನಡೆದ ಎರಡೇ ಗಂಟೆಗಳಲ್ಲಿ ಕೋಟ್ ಗ್ರಾಮದ ನಿವಾಸಿ, 21 ವರ್ಷದ ಆರೋಪಿ ಅಮಿತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಕೊಲೆ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. ಕಳೆದ ಎರಡು ವರ್ಷಗಳಿಂದ ಸಂಧ್ಯಾಳನ್ನು ಅಮಿತ್ ತೀವ್ರವಾಗಿ ಹಿಂಬಾಲಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ಇತ್ತೀಚೆಗೆ ಈತನ ಕಿರುಕುಳ ತಾಳಲಾರದೆ ಸಂಧ್ಯಾ ಪೊಲೀಸರಿಗೆ ದೂರು ನೀಡಿದ್ದರು. ಆ ಸಮಯದಲ್ಲಿ ಅಮಿತ್ ಸಾರ್ವಜನಿಕವಾಗಿ ಕ್ಷಮೆಯಾಚಿಸಿ ಪಾರಾಗಿದ್ದ. ಆದರೆ, ತನ್ನಿಂದ ಬಹಿರಂಗವಾಗಿ ಕ್ಷಮೆ ಕೇಳಿಸಿದ ಸಂಧ್ಯಾಳ ಮೇಲಿನ ಸೇಡಿನಿಂದ ಈ ಭೀಕರ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧಾರವಾಗಿಟ್ಟುಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


