ಆಂಧ್ರಪ್ರದೇಶ : ಶಾಲಾ ವಿದ್ಯಾರ್ಥಿನಿ ಮೇಲೆ ಹಲ್ಲೆ! ಗುಂಡೇಟು ಬಿದ್ದ ಆರೋಪಿ ಹೇಮಂತ್ ಕಾಲು ಕತ್ತರಿಸಿ ಹಾಕಿದ ವೈದ್ಯರು!
news.ashwasurya.in
ಆರೋಪಿ ಹೇಮಂತ್ ನನ್ನು ಘಟನಾ ಸ್ಥಳಕ್ಕೆ ಕರೆದೊಯ್ಯುವ ವೇಳೆ ಆತ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಹೇಮಂತ್ನ ಕಾಲಿಗೆ ಗುಂಡೇಟು ಬಿದ್ದಿತ್ತು.
ರಾಪ್ತಾಡು ದಾಳಿಕೋರ ಹೇಮಂತ್ ಕಾಲು ಕತ್ತರಿಸಿ ತೆಗೆದ ವೈದ್ಯರು..
ಅಶ್ವಸೂರ್ಯ/ಅನಂತಪುರ : ಆಂಧ್ರಪ್ರದೇಶದ ರಾಪ್ತಾಡು ಪಟ್ಟಣದ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಮೇಲೆ ಮರ ಕತ್ತರಿಸುವ ಚೈನ್ಸಾದಿಂದ ಭೀಕರ ದಾಳಿ ನಡೆಸಿದ್ದ ಆರೋಪಿ ಹೇಮಂತ್ನ ಬಲಗಾಲನ್ನು ವೈದ್ಯರು ಮಂಗಳವಾರ ಕತ್ತರಿಸಿ ತೆಗೆದಿದ್ದಾರೆ ಎಂದು ತಿಳಿದುಬಂದಿದೆ.
ಅನಂತಪುರದ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ (ಜಿಜಿಎಚ್) ಶಸ್ತ್ರಚಿಕಿತ್ಸೆ ನಡೆಸಿ ಮೊಣಕಾಲಿನ ಮೇಲ್ಭಾಗದಿಂದ ಕಾಲು ತೆಗೆಯಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇತ್ತ, ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯ ಆರೋಗ್ಯದಲ್ಲಿ ನಿಧಾನವಾಗಿ ಚೇತರಿಕೆ ಕಂಡುಬರುತ್ತಿದೆ. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಆಕೆಗೆ ಚಿಕಿತ್ಸೆ ಮುಂದುವರಿದಿದೆ.
ಆರೋಪಿ ಹೇಮಂತ್ ನನ್ನು ಘಟನಾ ಸ್ಥಳಕ್ಕೆ ಕರೆದೊಯ್ಯುವ ವೇಳೆ ಆತ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಪೊಲೀಸರೊಂದಿಗಿನ ಎನ್ಕೌಂಟರ್ ವೇಳೆ ಹೇಮಂತ್ನ ಕಾಲಿಗೆ ಗುಂಡೇಟು ಬಿದ್ದಿತ್ತು. ಪೊಲೀಸರು ಆರೋಪಿ ಹೇಮಂತ್ ನತ್ತ ಬರೊಬ್ಬರಿ 6 ಸುತ್ತು ಗುಂಡು ಹಾರಿಸಿದ್ದರು.ನೀಚನ ದೇಹಕ್ಕೆ ತೂರಿಸಬೇಕಾದ ಗುಂಡು ಆತನ ಕಾಲಿಗೆ ಬಿದ್ದಿತ್ತು..

ಕಾಲು ಕತ್ತರಿಸಲು ಕಾರಣವೇನು?
ಗುಂಡಿನ ದಾಳಿಯಿಂದಾಗಿ ಹೇಮಂತ್ನ ಬಲಗಾಲಿನಲ್ಲಿ ರಕ್ತ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಇದರಿಂದಾಗಿ ಆತನ ಕಾಲಿನಲ್ಲಿ ಗ್ಯಾಂಗ್ರೀನ್ (ಅಂಗಾಂಶಗಳ ಸಾವು ಮತ್ತು ಸೋಂಕು) ಕಾಣಿಸಿಕೊಂಡಿತ್ತು. ಈ ಸೋಂಕು ದೇಹದ ಇತರೆ ಭಾಗಗಳಿಗೆ ಹರಡಿ ಜೀವಕ್ಕೆ ಆಪತ್ತು ತರುವುದನ್ನು ತಡೆಯಲು, ವೈದ್ಯಕೀಯ ತಂಡವು ನ್ಯಾಯಾಲಯದ ನಿರ್ದೇಶನದಂತೆ ಆತನ ಮೊಣಕಾಲಿನ ಮೇಲ್ಭಾಗದವರೆಗಿನ ಬಲಗಾಲನ್ನು ಶಸ್ತ್ರಚಿಕಿತ್ಸೆ ನಡೆಸಿ ಕತ್ತರಿಸಿ ಹಾಕಿದೆ. ಪ್ರಸ್ತುತ ಆತನ ಎಡಗಾಲಿನ ರಕ್ತನಾಳಗಳಿಗೂ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಆತ ಚಿಕಿತ್ಸೆ ಪಡೆಯುತ್ತಿದ್ದಾನೆ.

