


ಕೋಲ್ಕತಾ : ಸಂಜು ಅಬ್ಬರಕ್ಕೆ ದೂಳಿಪಟವಾದ ಇಂಡೀಸ್.ಟೀಮ್ ಇಂಡಿಯಾ ಸೆಮಿಫೈನಲ್ಸ್ಗೆ.
news.ashwasurya.in

ಅಶ್ವಸೂರ್ಯ/ಕೋಲ್ಕತ್ತಾ: ಭಾರತದ ಪ್ರತಿಷ್ಠೆಯ ಪಂದ್ಯವಾಗಿದ್ದು ಸೆಮಿಫೈನಲ್ ಹಂತವನ್ನು ತಲುಪಲು ಈ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿ ಟೀಮ್ ಇಂಡಿಯಾ ತಂಡವಿತ್ತು “ಮಾಡು ಇಲ್ಲವೇ ಮಡಿ ” ಎನ್ನುವ ಧ್ಯೇಯ ದೊಂದಿಗೆ ಅಂಕಣಕ್ಕೆ ಇಳಿದ ಭಾರತ ತಂಡ ಸಂಜು ಸ್ಯಾಮ್ಸನ್ ಅವರ ಸ್ಫೋಟಕ ಬ್ಯಾಟಿಂಗ್ ನಿಂದ ವೆಸ್ಟ್ ಇಂಡಿಸ್ ವಿರುದ್ಧ 5 ವಿಕೆಟ್ಗಳ ರೋಚಕ ಜಯ ಸಾಧಿಸಿ ಸೆಮಿ ಫೈನಲ್ ಹಂತವನ್ನು ಪ್ರವೇಶಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ವೆಸ್ಟ್ ಇಂಡೀಸ್ ನ ಉತ್ತಮ ಬ್ಯಾಟಿಂಗ್ ನಿಂದ 4 ವಿಕೆಟ್ ನಷ್ಟಕ್ಕೆ 195 ರನ್ಗಳ ಗೌರವ ಮೊತ್ತವನ್ನು ಕಲೆಹಾಕಿತು. ವೇಸ್ಟ್ ಇಂಡೀಸ್ ನ ವೇಗದ ಬೌಲಿಂಗ್ ಎದುರು ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಭಾರತ ಇನ್ನೂ 4 ಎಸೆತ ಬಾಕಿ ಇರುವಂತೆಯೇ 5 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿ ವಿಜಯದ ನಗಾರಿ ಬಾರಿಸಿತು. ಈ ಜಯದೊಂದಿಗೆ ಭಾರತ ಸೆಮಿಫೈನಲ್ ಹಂತವನ್ನು ತಲುಪಿದ್ದು ಫೆಬ್ರವರಿ 5 ರಂದು ಗುರುವಾರ ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

ಭಾರತ ಕೊನೆಯ 12 ಎಸೆತಗಳಲ್ಲಿ 12 ರನ್ಗಳ ಅಗತ್ಯವಿತ್ತು. 19ನೇ ಓವರ್ನ ಎರಡನೇ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಔಟಾದಾಗ ಟೀಂ ಇಂಡಿಯಾದ ಅಭಿಮಾನಿಗಳ ಒತ್ತಡ ಹೆಚ್ಚಾಗಿತ್ತು.ಈ ವೇಳೆ ಕ್ರೀಸಿಗೆ ಬಂದ ಶಿವಂ ದುಬೆ 4 ಎಸೆತಗಳಲ್ಲಿ 2 ಬೌಂಡರಿ ಬಾರಿಸಿ 8 ರನ್ ಹೊಡೆದು ಪಂದ್ಯಕ್ಕೆ ರೋಚಕ ತಿರುವು ನೀಡಿದರು.
ಅಂತಿಮ ಓವರ್ನಲ್ಲಿ ಭಾರತಕ್ಕೆ ಗೆಲುವಿಗೆ 7 ರನ್ಗಳ ಆಗತ್ಯವಿತ್ತು ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದ ಸಂಜು ಸ್ಯಾಮ್ಸನ್ ಒಂದುಕಡೆ ಹೆಬ್ಬಂಡೆಯಂತೆ ಕ್ರೀಸ್ನಲ್ಲಿದ್ದು ಅಂತಿಮ ಓವರ್ ನಲ್ಲಿ ಜೋಸೆಫ್ ಅವರ ಮೊದಲ ಎಸೆತವನ್ನು ಸಿಕ್ಸ್ಗೆ ಅಟ್ಟಿದರೆ ಎರಡನೇ ಎಸೆತವನ್ನು ಬೌಂಡರಿಗೆ ಹೊಡೆದು ತಂಡಕ್ಕೆ ಸುಲಭವಾಗಿ ಜಯವನ್ನು ತಂದುಕೊಟ್ಟರು.

ಭಾರತ ಆರಂಭಿಕ ಹಂತದಲ್ಲಿ 41 ರನ್ ಗಳಿಸುವಷ್ಟರಲ್ಲಿ ಭರವಸೆಯ ಆಟಗಾರರಾದ ಅಭಿಷೇಕ್ ಶರ್ಮಾ 10 ರನ್, ಇಶನ್ ಕಿಶನ್ 10 ರನ್ ಗಳಿಸಿ ಔಟಾಗಿ ಭಾರತ ತಂಡವನ್ನು ಒತ್ತಡಕ್ಕೆ ಸಿಲುಕಿಸಿದ್ದರು,ಈ ಹಂತದಲ್ಲಿ ಆರಂಭಿಕ ಆಟಗಾರನಾಗಿ ಬಂದಿದ್ದ ಸಂಜು ಸ್ಯಾಮ್ಸನ್ ಯಾವುದೇ ಒತ್ತಡಕ್ಕೆ ಮಣಿಯದೆ ಒಂದು ಭಾಗದಲ್ಲಿ ವೇಸ್ಟ್ ಇಂಡೀಸ್ ಬೌಲರ್ಗಳನ್ನು ಕೇವಲ 50 ಬಾಲುಗಳನ್ನು ಎದುರಿಸಿ ಅಜೇಯ 97 ರನ್(50 ಎಸೆತ, 12 ಬೌಂಡರಿ, 4 ಸಿಕ್ಸ್) ಹೊಡೆದು ಟೀಮ್ ಇಂಡಿಯಾ ತಂಡವನ್ನು ಸೆಮಿಫೈನಲ್ ಹಂತಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ. ಸಂಜು ಅವರ ಅತ್ಯುತ್ತಮ ಆಟಕ್ಕೆ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಎರಡು ವಿಕೆಟ್ ಪತನದ ಬಳಿಕ ಬಂದ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಸಂಜು ಸ್ಯಾಮ್ಸನ್ 35 ಎಸೆತಗಳಲ್ಲಿ 58 ರನ್ಗಳ ಜೊತೆಯಾಟವಾಡಿದರು. 18 ರನ್(16 ಎಸೆತ, 1 ಬೌಂಡರಿ, 1 ಸಿಕ್ಸ್) ಹೊಡೆದಾಗ ದೊಡ್ಡ ಹೊಡೆತ ಹೊಡೆಯಲು ಹೋಗಿ ತಂಡದ ನಾಯಕ ಸೂರ್ಯಕುಮಾರ್ ವಿಕೆಟ್ ಒಪ್ಪಿಸಿದರು.
ನಂತರ ಬಂದ ತಿಲಕ್ ವರ್ಮಾ ಮತ್ತು ಸಂಜು ಸ್ಯಾಮ್ಸನ್ 26 ಎಸೆತಗಳಲ್ಲಿ 42 ರನ್ಗಳ ಜೊತೆಯಾಟವಾಡಿದರು. ಉತ್ತಮವಾಗಿ ಆಡುತ್ತಿದ್ದ ತಿಲಕ್ ವರ್ಮಾ 27 ರನ್(15 ಎಸೆತ, 4 ಬೌಂಡರಿ, 1 ಸಿಕ್ಸ್) ಹೊಡೆದು ಔಟಾದರು. ಹಾರ್ದಿಕ್ ಪಾಂಡ್ಯ 17 ರನ್ ಹೊಡೆದು ಕ್ಯಾಚ್ ನೀಡಿ ಹೊರ ನಡೆದರು.

ವೆಸ್ಟ್ ಇಂಡೀಸ್ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟಿಗೆ 68 ರನ್ ಜೊತೆಯಾಟವಾಡಿದ್ದರು. ಒಂದು ಹಂತದಲ್ಲಿ 10 ಓವರ್ ನಲ್ಲಿ 102 ರನ್ಗಳಿಗೆ ಒಂದು ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ವಿಂಡೀಸ್ 119 ರನ್ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ವಿಕೆಟ್ ಪತನಗೊಂಡಿದ್ದರೂ ರೋವ್ಮನ್ ಪೊವೆಲ್ ಮತ್ತು ಜೇಸನ್ ಫೋಲ್ಡರ್ ಮುರಿಯದ 5ನೇ ವಿಕೆಟಿಗೆ 35 ಎಸೆತಗಳಲ್ಲಿ 76 ರನ್ ಜೊತೆಯಾಟವಾಡಿದ್ದರಿಂದ ವಿಂಡೀಸ್ ಮೊತ್ತ 190 ರನ್ಗಳ ಗಡಿಯನ್ನು ದಾಟಿತ್ತು.
ವಿಂಡೀಸ್ ಪರ ಶಾಯ್ ಹೋಪ್ 32 ರನ್(33 ಎಸೆತ, 3 ಬೌಂಡರಿ, 1 ಸಿಕ್ಸ್), ರೋಸ್ಟನ್ ಚೇಸ್ 40 ರನ್(25 ಎಸೆತ, 5 ಬೌಂಡರಿ, 1 ಸಿಕ್ಸ್), ಹೇಟ್ಮಾಯರ್ 27 ರನ್(12 ಎಸೆತ, 1 ಬೌಂಡರಿ, 2 ಸಿಕ್ಸ್) ಹೊಡೆದು ಔಟಾದರು.

ರೋವ್ಮನ್ ಪೊವೆಲ್ ಔಟಾಗದೇ 34 ರನ್(19 ಎಸೆತ, 3 ಬೌಂಡರಿ, 2 ಸಿಕ್ಸ್), ಜೇಸನ್ ಫೋಲ್ಡರ್ ಔಟಾಗದೇ 37 ರನ್(22 ಎಸೆತ, 2 ಬೌಂಡರಿ, 3 ಸಿಕ್ಸ್) ಹೊಡೆದರು.
ಟೀಂ ಇಂಡಿಯಾ ಫೀಲ್ಡಿಂಗ್ ಇಂದು ಕಳಪೆಯಾಗಿತ್ತು. ಅಭಿಷೇಕ್ ಶರ್ಮಾ 2 ಕ್ಯಾಚ್ ಬಿಟ್ಟರೆ, ತಿಲಕ್ ವರ್ಮಾ 1 ಕ್ಯಾಚ್ ಬಿಟ್ಟಿದ್ದರು. ವರುಣ್ ಚಕ್ರವರ್ತಿ ಆರಂಭದಲ್ಲಿ ರನೌಟ್ ಮಾಡುವ ಅವಕಾಶವನ್ನೂ ಕೈ ಚೆಲ್ಲಿದ್ದರು.ಒಟ್ಟಿನಲ್ಲಿ ಅಂತಿಮವಾಗಿ ಸಂಜು ಬ್ಯಾಟಿಂಗ್ ಅಬ್ಬರಕ್ಕೆ ವೇಸ್ಟ್ ಇಂಡೀಸ್ ದೂಳಿಪಟವಾಗಿ ಟೀಮ್ ಇಂಡಿಯಾ ಸೆಮಿಫೈನಲ್ ಹಂತವನ್ನು ತಲುಪಿದೆ..




