Champions Trophy 2025: ನ್ಯೂಜಿಲ್ಯಾಂಡ್ ತಂಡವನ್ನು ಬಗ್ಗುಬಡಿದ ಭಾರತಕ್ಕೆ ರೋಚಕ ಜಯ! 3ನೇ ಚಾಂಪಿಯನ್ಸ್ ಟ್ರೋಫಿ ಗೆದ್ದು ಇತಿಹಾಸ ಸೃಷ್ಟಿಸಿದ ಬ್ಲೂ ಬಾಯ್ಸ್.
ASHWASURYA/SHIVAMOGGA
ಭಾರತ ಕ್ರಿಕೆಟ್ ತಂಡ ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದೆ. ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಭಾರತ ತಂಡ ಚಾಂಪಿಯನ್ಸ್ ಟ್ರೋಫಿಯನ್ನು ಮೂರನೇ ಬಾರಿಗೆ ಗೆದ್ದು ದಾಖಲೆ ಬರೆದಿದೆ. ಭಾರತ ತಂಡದ ಗೆಲುವಿನಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಕೂಡ ಪ್ರಮುಖ ಪಾತ್ರವಹಿಸಿ ಅಂತಿಮ ಹಂತದಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು.
news.ashwasurya.in
ಅಶ್ವಸೂರ್ಯ: ಪಂದ್ಯ ಕೂಟದ ಆರಂಭದಿಂದ ಅಂತ್ಯದ ವರೆಗೆ ಭಾರತತಂಡ ಯಾವುದೇ ಪಂದ್ಯವನ್ನು ಸೋಲದೆ ತಾನು ಅಡಿದ ಎಲ್ಲಾ ಪಂದ್ಯಗಳನ್ನು ಗೆದ್ದು ವಿಶ್ವದ ಪ್ರತಿಷ್ಠಿತ ಚಾಂಪಿಯನ್ಸ್ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ಭಾರತ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ರೋಚಕ ಜಯ ಸಾಧಿಸುವ ಮೂಲಕ ಭಾರತ ತಂಡ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದು ಇತಿಹಾಸ ಸೃಷ್ಟಿಸಿದೆ. ದುಬೈನಲ್ಲಿ ನಡೆದ ಫೈನಲ್ನಲ್ಲಿ ಭಾರತ ತಂಡ 4 ವಿಕೆಟ್ಗಳಿಂದ ಗೆಲುವು ಸಾಧಿಸಿ ಹೊಸ ಅಧ್ಯಾಯ ಬರೆದಿದೆ. ಈ ಮೂಲಕ ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಭಾರತ ತಂಡ 2002, 2013, 2025 ರ ಪಂದ್ಯಾವಳಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದು.ಈ ಮೂಲಕ ಚಾಂಪಿಯನ್ಸ್ ಟ್ರೋಫಿಯನ್ನು ಮೂರು ಬಾರಿಗೆದ್ದ ಏಕೈಕ ತಂಡ ಭಾರತ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಭಾನುವಾರ (ಮಾ,09) ನೆಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಕಿವೀಸ್ ನೀಡಿದ್ದ 252 ರನ್ಗಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡದ ಆಟಗಾರರು 49 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ತಲುಪಿದರು. 12 ವರ್ಷಗಳ ಬಳಿಕ (2013ರ ನಂತರ) ಚಾಂಪಿಯನ್ಸ್ ಟ್ರೋಫಿಯನ್ನು ಮರಳಿ ಗೆದ್ದು ಕೊಂಡಿದೆ.
ಭಾರತದ ತಂಡದ ಆರಂಭಿಕ ಆಟಗಾರ,ತಂಡದ ನಾಯಕ ರೋಹಿತ್ ಶರ್ಮಾ ನಾಯಕನ ಜವಾಬ್ದಾರಿಯುತ ಆಟವಾಡಿ 76 ರನ್ ಸಿಡಿಸಿ ತಂಡದ ಗೆಲುವಿಗೆ ಭದ್ರ ಬುನಾದಿ ಹಾಕಿಕೊಟ್ಟರು,ಭರವಸೆಯ ಆಟಗಾರ ಶ್ರೇಯಸ್ ಅಯ್ಯರ್ ಕೂಡ 48 ರನ್ಗಳಿಸಿ ಭಾರತ ತಂಡದ ಗೆಲುವಿನ ರೂವಾರಿಗಳಾದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ನ್ಯೂಜಿಲೆಂಡ್ ತಂಡವು ಭಾರತದ ಸ್ಪಿನ್ ದಾಳಿಗೆ ಸಿಲುಕಿ ರನ್ ಗಳಿಸಲು ಒದ್ದಾಡಿತು. ಡೇರಿಲ್ ಮಿಚೆಲ್ (101 ಎಸೆತಗಳಲ್ಲಿ 3 ಬೌಂಡರಿ ಸಹಿತ 63) ಮತ್ತು ಮೈಕಲ್ ಬ್ರೇಸ್‌ವೆಲ್ (53, 40 ಎಸೆತ, 2 ಸಿಕ್ಸರ್, 3 ಬೌಂಡರಿ) ಅರ್ಧಶತಕಗಳ ನೆರವಿನಿಂದ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 251 ರನ್ ಗಳಿಸಲಷ್ಟೆ ಶಕ್ತವಾಯಿತು.ನ್ಯೂಜಿಲೆಂಡ್ ತಂಡದ ಈ ಇಬ್ಬರು ಆಟಗಾರರನ್ನು ಹೊರೆತುಪಡಿಸಿ ಉಳಿದ ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಂತು ಆಡುವಲ್ಲಿ ವಿಫಲರಾದರು.
ಆರಂಭದಲ್ಲಿ ರಚಿನ್ ರವೀಂದ್ರ 29 ಎಸೆತಗಳಲ್ಲಿ 37 ರನ್ ಮತ್ತು ಫಿಲಿಪ್ಸ್ 34 ರನ್ಗಳ ಕೊಡುಗೆ ನೀಡಿದರು. ವಿಲ್ ಯಂಗ್ 15, ಕೇನ್ ವಿಲಿಯಮ್ಸನ್ 11, ಟಾಮ್ ಲೇಥಮ್ 14, ನಾಯಕ ಸ್ಯಾಂಟ್ನರ್ 8 ರನ್ಗಳಿಸಿ ಬಹುಬೇಗನೆ ವಿಕೆಟ್ ಒಪ್ಪಿಸಿ ಫೇವಿಲಿಯನ್ ನೆಡೆದರು.
ಭಾರತದ ಪರ ಕುಲದೀಪ್ ಯಾದವ್ (2/40) ಮತ್ತು ವರುಣ್ ಚಕ್ರವರ್ತಿ (2/45) ಸ್ಪಿನ್ ದಾಳಿಯಲ್ಲಿ ಮಿಂಚಿದರು. ರವೀಂದ್ರ ಜಡೇಜಾ 10 ಓವರ್ ಬೌಲಿಂಗ್ ಮಾಡಿ ಕೇವಲ 30 ರನ್ ನೀಡಿ 1 ವಿಕೆಟ್ ಪಡೆದರು. ಆದರೆ, ಮೊಹಮ್ಮದ್ ಶಮಿ ಹತ್ತು ಓವರ್ ಗಳಲ್ಲಿ 74 ರನ್ ನೀಡಿ 1 ವಿಕೆಟ್ ಪಡೆದು ದುಬಾರಿಯಾದರು.
ನಂತರ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಶತಕದ ಜೊತೆಯಾಟದಿಂದ 252 ರನ್ ಗುರಿಯನ್ನು ಬೆನ್ನಟ್ಟಿದ ಭಾರತ 49 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಚಾಂಪಿಯನ್ ಆಯಿತು. ಚೇಸಿಂಗ್ ಆರಂಭಿಸಿದ ಭಾರತ ಮೊದಲ ವಿಕೆಟ್‌ಗೆ 105 ರನ್ಗಳ ಜೊತೆಯಾಟವಾಡಿ ಅದ್ಭುತ ಆರಂಭ ಪಡೆದುಕೊಂಡಿತು.ತಂಡದ ನಾಯಕ ರೋಹಿತ್ ಶರ್ಮಾ 83 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 6 ಬೌಂಡರಿಯನ್ನು ಹೊಡೆದು 76 ರನ್ ಕಲೆಹಾಕಿದರು, ಶುಭಮನ್ ಗಿಲ್ 50 ಎಸೆತಗಳಲ್ಲಿ 1 ಸಿಕ್ಸರ್ ಸಹಿತ 31 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಕೊಹ್ಲಿ ಕೇವಲ 1 ರನ್ಗಳಿಸಿ ವಿಕೆಟ್ ಒಪ್ಪಿಸಿದರು. 16 ರನ್ಗಳ ಅಂತರದಲ್ಲಿ ರೋಹಿತ್ ಕೂಡ ಔಟ್ ಆದರು.
ಭಾರತ ತಂಡದ ಗೆಲುವಿನಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಪ್ರಮುಖ ಪಾತ್ರ ವಹಿಸಿದ್ದರು. ಟೀಮ್ ಇಂಡಿಯಾ ಪರ ಕೊನೆಯವರೆಗೂ ಕ್ರೀಸ್ನಲ್ಲೇ ನಿಂತು ಆಡಿದ ಕನ್ನಡಿಗ ಕೆ.ಎಲ್ ರಾಹುಲ್ ಭಾರತ ತಂಡವನ್ನು ಗೆಲ್ಲುವಿನ ದಡ ಸೇರಿಸಿದರು. ರಾಹುಲ್ 1 ಸಿಕ್ಸರ್ 1 ಬೌಂಡರಿ ಮುಖೇನ 34 ರನ್ ಸಿಡಿಸಿದರು. ಭಾರತ 49 ಓವರ್ನಲ್ಲಿ 254 ರನ್ ಗಳಿಸಿ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದು ಇತಿಹಾಸ ಸೃಷ್ಟಿಸಿತು.