ಬೆಂಗಳೂರು : ರಾಜ್ಯದಲ್ಲಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರಿಗೆ ಶಿಕ್ಷಣ ಇಲಾಖೆಯಿಂದ ಬಿಗ್ ರಿಲೀಫ್.? ಶನಿವಾರದ ಶಾಲಾ ಸಮಯ ಬದಲಾವಣೆ.
ಹೌದು, ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ರಾಜ್ಯದ ಶಾಲಾ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗೆ ದೊಡ್ಡ ರಿಲೀಫ್ ನೀಡಿದ್ದು, ಶನಿವಾರದ ಶಾಲಾ ಅವಧಿಯನ್ನು ಏಕರೂಪವಾಗಿ ಬದಲಾಯಿಸಿದೆ. ಹೊಸ ಆದೇಶದ ಪ್ರಕಾರ, ಇನ್ನು ಮುಂದೆ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು ಶನಿವಾರದ ದಿನದಂದು ಬೆಳಗ್ಗೆ 8:30 ರಿಂದ ಮಧ್ಯಾಹ್ನ 12:30 ರವರೆಗೆ ಮಾತ್ರ ಕಾರ್ಯನಿರ್ವಹಿಸಲಿವೆ…

news.ashwasurya.in
ಅಶ್ವಸೂರ್ಯ/ಬೆಂಗಳೂರು : ರಾಜ್ಯದ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಶಿಕ್ಷಣ ಇಲಾಖೆಯು ಸಿಹಿಸುದ್ದಿ ನೀಡಿದೆ. ಇನ್ನುಮುಂದೆ ಶನಿವಾರದ ತರಗತಿಗಳ ಅವಧಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಇಡೀ ರಾಜ್ಯಕ್ಕೆ ಇದು ಅನ್ವಯ ಆಗುವಂತೆ ಏಕರೂಪದ ಹೊಸ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ನಿರ್ಧಾರದಿಂದಾಗಿ ಜಿಲ್ಲೆಯಿಂದ ಜಿಲ್ಲೆಗೆ ಇದ್ದ ಶಾಲಾ ಸಮಯದ ಗೊಂದಲಗಳಿಗೆ ಶಾಶ್ವತ ತೆರೆ ಬಿದ್ದಂತಾಗಿದೆ.
ಶಿಕ್ಷಣ ಇಲಾಖೆಯ ಹೊಸ ಆದೇಶದ ಪ್ರಕಾರ, ಇನ್ನುಮುಂದೆ ಶನಿವಾರದ ದಿನದಂದು ರಾಜ್ಯದ ಎಲ್ಲಾ ಶಾಲೆಗಳು ಬೆಳಗ್ಗೆ 8:30ಕ್ಕೆ ಆರಂಭವಾಗಿ ಮಧ್ಯಾಹ್ನ 12.30ಕ್ಕೆ ಮುಕ್ತಾಯಗೊಳ್ಳಲಿವೆ. ಈ ನಿಯಮವು ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಖಾಸಗಿ ಶಾಲೆಗಳಿಗೂ ಇದು ಕಡ್ಡಾಯವಾಗಿ ಅನ್ವಯವಾಗಲಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಗೊಂದಲಗಳಿಗೆ ತೆರೆ ಎಳೆದ ಶಿಕ್ಷಣ ಇಲಾಖೆ :
ಇಲ್ಲಿಯವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶನಿವಾರ ಬೇರೆ ಬೇರೆ ಶಾಲಾ ಅವಧಿ ಜಾರಿಯಲ್ಲಿತ್ತು. ಕೆಲವು ಜಿಲ್ಲೆಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ತರಗತಿಗಳು ನಡೆಯುತ್ತಿದ್ದವು. ಇನ್ನು ಕೆಲವು ಭಾಗಗಳಲ್ಲಿ ಸಾರಿಗೆ ಸೌಕರ್ಯದ ಕೊರತೆ ಅಥವಾ ಇತರೆ ಕಾರಣಗಳಿಂದಾಗಿ ಬೆಳಗ್ಗೆ 7:30ಕ್ಕೇ ಶಾಲೆ ಆರಂಭವಾಗಿ 11:30ಕ್ಕೆ ಮುಕ್ತಾಯ ಆಗುತ್ತಿತ್ತು.
ಈ ಬೇರೆ ಬೇರೆ ಅವಧಿಗಳಿಂದಾಗಿ ಶಿಕ್ಷಕರು, ಪೋಷಕರು ಹಾಗೂ ಇಲಾಖೆಯ ಉನ್ನತ ಅಧಿಕಾರಿಗಳ ಮಟ್ಟದಲ್ಲಿ ಉಂಟಾಗುತ್ತಿದ್ದ ಗೊಂದಲಗಳನ್ನು ನಿವಾರಿಸಲು ಈಗ ಇಲಾಖೆಯು ರಾಜ್ಯಾದಂತ ಒಂದೇ ಸಮಯದ ಸೂತ್ರವನ್ನು ಜಾರಿಗೆ ತಂದಿದೆ.
ಬೆಳಗ್ಗೆ 7.30 ಅಥವಾ 8 ಗಂಟೆಗೆ ಶಾಲೆಗೆ ತಲುಪಬೇಕಾಗಿದ್ದ ಸಂದರ್ಭದಲ್ಲಿ ಮಕ್ಕಳು ಶನಿವಾರದ ದಿನವೂ ತೀರ ಮುಂಜಾನೆಯೇ ಏಳಬೇಕಾದ ಅನಿವಾರ್ಯತೆ ಇತ್ತು. ದೂರದ ಊರುಗಳಿಂದ ಬರುವ ಮಕ್ಕಳಿಗೆ ಇದು ಮತ್ತಷ್ಟು ಕಷ್ಟಕರವಾಗಿತ್ತು. ಈಗ ಶಾಲೆ ಆರಂಭದ ಸಮಯವನ್ನು ಬೆಳಗ್ಗೆ 8.30ಕ್ಕೆ ನಿಗದಿಪಡಿಸಿರುವುದರಿಂದ, ಮಕ್ಕಳು ಅವಸರವಿಲ್ಲದೆ ಶಾಲೆಗೆ ಸಿದ್ಧರಾಗಿ ಬರಬಹುದು. ಇದು ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆಯೂ ಸಕಾರಾತ್ಮಕ ಪ್ರಭಾವ ಬೀರಲಿದೆ.

ವಿದ್ಯಾರ್ಥಿ, ಶಿಕ್ಷಕರಿಗೂ ಅನುಕೂಲ :
ಈ ಬದಲಾವಣೆಯು ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಶಿಕ್ಷಕ ವರ್ಗಕ್ಕೂ ಸಮಾಧಾನ ತಂದಿದೆ. ಸರ್ಕಾರವು ಇತ್ತೀಚೆಗೆ ಶಾಲೆಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಆನ್ಲೈನ್ ಹಾಜರಾತಿಯನ್ನು ಕಡ್ಡಾಯಗೊಳಿಸಿದೆ. ಇಡೀ ರಾಜ್ಯದಲ್ಲಿ ಬೇರೆ ಬೇರೆ ಸಮಯ ಇದ್ದಾಗ ಸರ್ವರ್ ಸಮಸ್ಯೆ ಅಥವಾ ತಾಂತ್ರಿಕ ಕಾರಣಗಳಿಂದ ನಿಗದಿತ ಸಮಯದೊಳಗೆ ಹಾಜರಾತಿ ದಾಖಲಿಸುವುದು ಶಿಕ್ಷಕರಿಗೆ ದೊಡ್ಡ ಸವಾಲಾಗಿತ್ತು. ಈಗ ಎಲ್ಲಾ ಕಡೆ ಒಂದೇ ಸಮಯ ಇರುವುದರಿಂದ ಪ್ರಕ್ರಿಯೆಯನ್ನು ಸುಗಮವಾಗಿ ನಿರ್ವಹಿಸಲು ಮತ್ತು ಇಲಾಖೆಯು ರಾಜ್ಯ ಮಟ್ಟದಲ್ಲಿ ನಿಗಾ ಇಡಲು ಸುಲಭವಾಗಲಿದೆ. ಒಟ್ಟಿನಲ್ಲಿ ಹೇಳುವುದಾದರೆ ಶಿಕ್ಷಣ ಇಲಾಖೆಯ ಈ ಮಹತ್ವದ ಕ್ರಮದ ಬಗ್ಗೆ ಪೋಷಕರು ಮತ್ತು ಶಿಕ್ಷಣ ತಜ್ಞರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ
ಶನಿವಾರದ ಶಾಲಾ ತರಗತಿಗಳ ವೇಳಾಪಟ್ಟಿಯನ್ನು ಏಕೆ ಪರಿಷ್ಕರಿಸಲಾಗಿದೆ?
ಶಾಲಾ ಸಮಯದ ಗೊಂದಲಗಳನ್ನು ನಿವಾರಿಸಲು ಮತ್ತು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿನ ತರಗತಿಗಳಿಗೆ ಏಕರೂಪತೆಯನ್ನು ತರಲು ಶಿಕ್ಷಣ ಇಲಾಖೆ ವೇಳಾಪಟ್ಟಿಯನ್ನು ಅಧಿಕೃತವಾಗಿ ಪರಿಷ್ಕರಿಸಿದೆ.


