Headlines

ಬೆಂಗಳೂರು : ಪ್ರೇಯಸಿಯನ್ನು ಹತ್ಯೆಮಾಡಿದ ಪ್ರಿಯಕರನ ಬಂಧನ.! : ಮದುವೆ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ.!

news.ashwasurya.in

ಅಶ್ವಸೂರ್ಯ/ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪ್ರಿಯಕರನೇ ತನ್ನ ಪ್ರೇಯಸಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ನಗರದ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಪೈಪ್‌ಲೈನ್ ರಸ್ತೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.
ಮೃತ ಯುವತಿಯನ್ನು ಅಂಜಲಿ (23) ಎಂದು ಗುರುತಿಸಲಾಗಿದ್ದು, ಆರೋಪಿ ರಾಜೀವ್ ಎಂದು ತಿಳಿದುಬಂದಿದೆ. ರಾತ್ರಿ ಸುಮಾರು 9.30ರ ವೇಳೆಗೆ ಈ ಘಟನೆ ನಡೆದಿದೆ.
ಅಂಜಲಿ ಮತ್ತು ರಾಜೀವ್ ಕಳೆದ ಮೂರು-ನಾಲ್ಕು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಇಬ್ಬರ ಕುಟುಂಬಗಳಿಗೂ ಈ ವಿಚಾರ ತಿಳಿದಿತ್ತು. ಆದರೆ ರಾಜೀವ್‌ಗೆ ಕ್ರಿಮಿನಲ್ ಹಿನ್ನೆಲೆ ಇದ್ದ ಕಾರಣ ಅಂಜಲಿ ಕುಟುಂಬಸ್ಥರು ಮದುವೆಗೆ ಒಪ್ಪಿಗೆ ನೀಡಿರಲಿಲ್ಲ.
ಇತ್ತೀಚೆಗೆ ಪೋಷಕರ ಒತ್ತಾಯಕ್ಕೆ ಮಣಿದ ಅಂಜಲಿ, ರಾಜೀವ್‌ನಿಂದ ದೂರವಾಗಲು ಪ್ರಯತ್ನಿಸುತ್ತಿದ್ದಳು. ಈ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ರಾಜೀವ್ ಅಂಜಲಿಯನ್ನು ಊಟಕ್ಕೆ ಕರೆಸಿಕೊಂಡಿದ್ದು, ಮತ್ತೊಮ್ಮೆ ಮದುವೆ ವಿಚಾರ ಪ್ರಸ್ತಾಪಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ.

ಗಲಾಟೆ ತಾರಕಕ್ಕೇರಿದ ವೇಳೆ ಕೋಪಗೊಂಡ ರಾಜೀವ್, ಅಂಜಲಿಯ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಅಂಜಲಿಯನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆಲವೇ ನಿಮಿಷಗಳಲ್ಲಿ ಆರೋಪಿ ರಾಜೀವ್‌ನನ್ನು ಬಂಧಿಸಿದ್ದಾರೆ.

ಮೃತ ಅಂಜಲಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!