ಚಾಮರಾಜನಗರ ಮೂವರ ಎನ್‌ಕೌಂಟರ್ ಪ್ರಕರಣ :ಉನ್ನತಮಟ್ಟದ ತನಿಖೆಗೆ ತಮಿಳುನಾಡು ಸಿಎಂ ವಿಜಯ್ ಒತ್ತಾಯ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಧಾಮದ ಶಾಗ್ಯ ಅರಣ್ಯ ಪ್ರದೇಶದಲ್ಲಿ ಆಗಸ್ಟ್ 15, 2026 ರಂದು ನಡೆದ ಎನ್ಕೌಂಟರ್ನಲ್ಲಿ ಮೂವರು ವ್ಯಕ್ತಿಗಳು ಮೃತಪಟ್ಟಿದ್ದು, ಈ ಘಟನೆಯು ತೀವ್ರ ಸಾರ್ವಜನಿಕ ಆಕ್ರೋಶ ಮತ್ತು ವಿವಾದಕ್ಕೆ ಕಾರಣವಾಗಿದೆ. ಮೃತರನ್ನು ಅಂತೋಣಿ ಸ್ವಾಮಿ (50), ಜಾನ್ ರೋನ್ ಪೀಟರ್ (42), ಮತ್ತು ಕುಮಾರ್ (33) ಎಂದು ಗುರುತಿಸಲಾಗಿದೆ…

news.ashwasurya.in
ಅಶ್ವಸೂರ್ಯ/ಚಾಮರಾಜನಗರ : ಚಾಮರಾಜನಗರದ ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮೃತಪಟ್ಟಿರುವುದು ಇಡೀ ದೇಶದಲ್ಲೇ ದೊಡ್ಡಮಟ್ಟದ ಸುದ್ದಿಯ ಜೋತೆಗೆ ಚರ್ಚೆಯಾಗಿದೆ. ಈ ಘಟನೆಗೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಕೂಡ ಪ್ರತಿಕ್ರಿಯಿಸಿದ್ದು, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ್ದಾರೆ. ಈ ಬೆಳವಣಿಗೆಯು ಪ್ರಕರಣಕ್ಕೆ ರಾಜಕೀಯ ಆಯಾಮವನ್ನು ನೀಡಿದ್ದು, ಕರ್ನಾಟಕ ಮತ್ತು ತಮಿಳುನಾಡು ನಡುವೆ ಗಮನ ಸೆಳೆದಿದೆ.
ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿ ನಡೆದ ಮೂವರು ವ್ಯಕ್ತಿಗಳ ಸಾವಿನ ಪ್ರಕರಣ ಇದೀಗ ರಾಜ್ಯ ಗಡಿ ದಾಟಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಹನೂರು ತಾಲೂಕಿನ ಅರಣ್ಯ ಪ್ರದೇಶದಲ್ಲಿ ಆಗಸ್ಟ್ 15ರಂದು ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮೃತಪಟ್ಟಿದ್ದು, ಈ ಪ್ರಕರಣಕ್ಕೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಕೂಡ ಪ್ರತಿಕ್ರಿಯಿಸಿದ್ದಾರೆ. ಘಟನೆ ಕುರಿತು ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ನಿಷ್ಪಕ್ಷಪಾತ ಮತ್ತು ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ್ದಾರೆ. ಇದೇ ವೇಳೆ ಪ್ರಕರಣದ ಕುರಿತು ಕರ್ನಾಟಕ ಅರಣ್ಯ ಇಲಾಖೆ ನೀಡಿರುವ ವಿವರಣೆ ಸ್ವೀಕಾರಾರ್ಹವಲ್ಲ ಎಂದೂ ಅವರು ಹೇಳಿದ್ದಾರೆ.
ಪ್ರಕರಣವೇನು.?

ವರದಿಗಳ ಪ್ರಕಾರ, ಕಾವೇರಿ ವನ್ಯಜೀವಿ ಅಭಯಾರಣ್ಯದ ವ್ಯಾಪ್ತಿಯ ಹನೂರು ಭಾಗದಲ್ಲಿ ಅರಣ್ಯ ಸಿಬ್ಬಂದಿ ಮತ್ತು ಅಕ್ರಮ ಬೇಟೆ ನಡೆಸುತ್ತಿದ್ದರೆಂದು ಆರೋಪಿಸಲಾದ ವ್ಯಕ್ತಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಘಟನೆಯಲ್ಲಿ ಮೂವರು ಮೃತಪಟ್ಟಿದ್ದಾರೆ. ಮೃತರ ಕುಟುಂಬಸ್ಥರು ಹಾಗೂ ಸ್ಥಳೀಯರು ಘಟನೆ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದು, ನ್ಯಾಯಕ್ಕಾಗಿ ಪ್ರತಿಭಟನೆ ಕೂಡ ನಡೆಸಿದ್ದಾರೆ.
ಮೃತರನ್ನು ಆಂಥೋನಿ ಸ್ಯಾಮಿ, ಜಾನ್ ರೋಸ್ ಪೀಟರ್ ಮತ್ತು ಕುಮಾರ್ ಎಂದು ಗುರುತಿಸಲಾಗಿದೆ. ಈ ಮೂವರು ತಮಿಳು ಸಮುದಾಯಕ್ಕೆ ಸೇರಿದವರು ಎಂದು ತಮಿಳುನಾಡು ಮುಖ್ಯಮಂತ್ರಿ ವಿಜಯ್ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ. ಅವರ ಸಾವನ್ನು ನೋವಿನ ಹಾಗೂ ಹೃದಯವಿದ್ರಾವಕ ಘಟನೆ ಎಂದು ಬಣ್ಣಿಸಿರುವ ಅವರು, ಮೃತರ ಕುಟುಂಬಗಳಿಗೆ ಅಗತ್ಯವಿರುವ ಎಲ್ಲ ನೆರವನ್ನು ನೀಡಬೇಕು ಎಂದು ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಘಟನೆ ಬಗ್ಗೆ ವಿಜಯ್ ಅವರ ಹೇಳಿಕೆ ಹೊರಬಂದಿರುವುದು ಪ್ರಕರಣಕ್ಕೆ ಮತ್ತಷ್ಟು ಮಹತ್ವ ತಂದಿದೆ. ಅವರು ಕೇವಲ ಸಂತಾಪ ಸೂಚಿಸುವುದಕ್ಕೆ ಸೀಮಿತವಾಗದೆ, ಘಟನೆಯ ಕುರಿತು ಪ್ರಾಮಾಣಿಕ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ. ಜೊತೆಗೆ ಉನ್ನತ ಮಟ್ಟದ ತನಿಖಾ ತಂಡವನ್ನು ರಚಿಸಿ, ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸಿಡಿದೆದ್ದ ಗ್ರಾಮಸ್ಥರು:

ಇದಕ್ಕೂ ಮುನ್ನ, ಮೃತರ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅರಣ್ಯ ಸಿಬ್ಬಂದಿ ಗುಂಡು ಹಾರಿಸಿದ ರೀತಿಯ ಬಗ್ಗೆ ಅವರು ಪ್ರಶ್ನೆಗಳನ್ನು ಎತ್ತಿದ್ದಾರೆ. ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಬೇಕು ಮತ್ತು ಗುಂಡು ಹಾರಿಸಿದ ಅರಣ್ಯ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಯೂ ಕೇಳಿಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ದೂರು ದಾಖಲಿಸಿಕೊಂಡಿದ್ದರೆ.
ವರದಿಯ ಪ್ರಕಾರ, ಮೃತ ವ್ಯಕ್ತಿಯ ಪತ್ನಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಅರಣ್ಯ ಅಧಿಕಾರಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 103(1) ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ. ಇತ್ತ ಅರಣ್ಯ ಇಲಾಖೆ ಪರವಾಗಿ, ಘಟನೆ ಗುಂಡಿನ ಚಕಮಕಿಯ ಸಂದರ್ಭದಲ್ಲಿ ಸಂಭವಿಸಿದೆ ಎಂಬ ವಿವರಣೆ ನೀಡಲಾಗಿದೆ. ಆದರೆ ಮೃತರ ಕುಟುಂಬಸ್ಥರು ಮತ್ತು ಸ್ಥಳೀಯರು ಈ ವಿವರಣೆಯನ್ನು ಪ್ರಶ್ನಿಸುತ್ತಿದ್ದಾರೆ. ಹೀಗಾಗಿ ಎನ್‌ಕೌಂಟರ್ ನಡೆದ ಪರಿಸ್ಥಿತಿ, ಗುಂಡಿನ ದಾಳಿ ಹೇಗೆ ನಡೆಯಿತು, ಅರಣ್ಯ ಸಿಬ್ಬಂದಿಯ ಕ್ರಮ ಕಾನೂನುಬದ್ಧವಾಗಿತ್ತೇ ಎಂಬ ಪ್ರಶ್ನೆಗಳು ಇದೀಗ ಪ್ರಮುಖವಾಗಿವೆ.
ಚಾಮರಾಜನಗರದ ಕಾವೇರಿ ವನ್ಯಜೀವಿ ಅಭಯಾರಣ್ಯವು ಕರ್ನಾಟಕದ ಪ್ರಮುಖ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಒಂದಾಗಿದೆ. ಇಲ್ಲಿ ಅರಣ್ಯ ಸಂರಕ್ಷಣೆ, ವನ್ಯಜೀವಿ ರಕ್ಷಣೆ ಮತ್ತು ಅಕ್ರಮ ಬೇಟೆ ತಡೆಯಲು ಅರಣ್ಯ ಇಲಾಖೆ ಗಸ್ತು ಮತ್ತು ಆಂಟಿ-ಪೋಚಿಂಗ್ ನೆಡೆಯುತ್ತದೆ.
ಅರಣ್ಯ ಇಲಾಖೆ ಈ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಿರಂತರವಾಗಿ ನಡೆಸುತ್ತದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಡುವೆ ತಮಿಳುನಾಡು ಮುಖ್ಯಮಂತ್ರಿಯ ಪ್ರವೇಶದಿಂದ ಪ್ರಕರಣಕ್ಕೆ ಹೊಸ ರಾಜಕೀಯ ಮತ್ತು ಆಡಳಿತಾತ್ಮಕ ಆಯಾಮವೂ ಸಿಕ್ಕಿದೆ. ಕರ್ನಾಟಕ–ತಮಿಳುನಾಡು ಗಡಿ ಪ್ರದೇಶಕ್ಕೆ ಸಂಬಂಧಿಸಿದ ಘಟನೆ ಆಗಿರುವುದರಿಂದ ಎರಡೂ ರಾಜ್ಯಗಳ ಗಮನ ಈಗ ಪ್ರಕರಣದತ್ತ ನೆಟ್ಟಿದೆ. ಒಟ್ಟಿನಲ್ಲಿ, ಮೂವರ ಸಾವಿನ ಕುರಿತು ಸತ್ಯಾಂಶ ಏನು ಎಂಬುದು ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ. ಅರಣ್ಯ ಇಲಾಖೆಯ ಹೇಳಿಕೆ, ಕುಟುಂಬಸ್ಥರ ಆರೋಪ ಮತ್ತು ಪೊಲೀಸರ ತನಿಖೆಯ ನಡುವೆ ಸತ್ಯ ಬಯಲಾಗಬೇಕಿದೆ. ತಮಿಳುನಾಡು ಸಿಎಂ ವಿಜಯ್ ಅವರ ಉನ್ನತ ಮಟ್ಟದ ತನಿಖೆಯ ಬೇಡಿಕೆ ಪ್ರಕರಣಕ್ಕೆ ಯಾವ ರೀತಿಯ ತಿರುವು ನೀಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.


