
ಹೈದರಾಬಾದ್ : ಮಧ್ಯರಾತ್ರಿ ಒಬ್ಬಂಟಿ ಮಹಿಳೆಯಂತೆ ಬಸ್ ಕಾಯುತ್ತಾ ನಿಂತ ಪೊಲೀಸ್ ಕಮಿಷನರ್ ಸುಮತಿ ಐಪಿಎಸ್.! ರಾತ್ರಿ 12 ಗಂಟೆಯಿಂದ ಮಧ್ಯರಾತ್ರಿ 3 ವರೆಗೆ ನೆಡೆದ್ದು ಎನು.?
news.ashwasurya.in
ಅಶ್ವಸೂರ್ಯ/ಹೈದರಾಬಾದ್: ನಾವುಗಳು ಸಿನಿಮಾಗಳಲ್ಲಿ ನೋಡಿದ್ದೇವೆ ಮತ್ತು ಕರ್ನಾಟಕದಲ್ಲಿ ಖಡಕ್ ಐಪಿಎಸ್ ಅಧಿಕಾರಿಗಳಾದ ಸಾಂಗ್ಲಿಯಾನ ಮತ್ತು ಕೆಂಪಯ್ಯ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಮಾರುವೇಷದಲ್ಲಿ ಅಕ್ರಮ ದಂಧೆಕೋರರಿಗೆ ಮತ್ತು ಪುಂಡರುಗೆ ಸರಿಯಾದ ಬುದ್ಧಿ ಕಲಿಸಿದ್ದನ್ನು ಕೇಳಿದ್ದೇವೆ ಈಗ ಇವರ ಶೈಲಿಯಲ್ಲೇ ನಡೆದ ನೈಜ ಕಾರ್ಯಾಚರಣೆಯೊಂದು ಹೈದರಾಬಾದ್ನಲ್ಲಿ ನೆಡೆದಿದೆ, ಮಲ್ಕಾಜ್ಗಿರಿ ಪೊಲೀಸ್ ಆಯುಕ್ತೆ ಸುಮತಿ ಐಪಿಎಸ್ ಅವರು ಗೂಂಡಾಗಳಿಗೆ ಮರೆಯಲಾಗದ ಪಾಠ ಕಲಿಸಿದ್ದಾರೆ.

ಮಧ್ಯರಾತ್ರಿ ಯಾವುದೇ ಭದ್ರತೆಯಿಲ್ಲದೆ, ಒಬ್ಬ ಸಾಮಾನ್ಯ ಮಹಿಳೆಯಂತೆ ದಿಲ್ಸುಖ್ನಗರ ಬಸ್ ನಿಲ್ದಾಣದಲ್ಲಿ ನಿಂತು, ಕಿರುಕುಳ ನೀಡಲು ಬಂದ 40ಕ್ಕೂ ಹೆಚ್ಚು ಕಾಮುಕರನ್ನು ಜೈಲಿಗಟ್ಟಿದ್ದಾರೆ.
ಮಲ್ಕಾಜ್ಗಿರಿ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಸುಮತಿ ಅವರು ಶಾಕ್ ಟ್ರೀಟ್ಮೆಂಟ್ ನೀಡಲು ನಿರ್ಧರಿಸಿದ್ದರು. ರಾತ್ರಿ 12 ಗಂಟೆಯಿಂದ ಬೆಳಗಿನ ಜಾವ 3 ಗಂಟೆಯವರೆಗೆ ಅವರು ಒಬ್ಬಂಟಿಯಾಗಿ ರಸ್ತೆಯಲ್ಲಿ ನಿಂತು ಪರಿಸ್ಥಿತಿಯನ್ನು ಅವಲೋಕಿಸಿದರು. ಅಲ್ಲಿಯವರೆಗೆ ಯಾವುದೇ ಪೊಲೀಸ್ ಗಸ್ತು ವಾಹನಗಳು ಕಾಣಿಸಿಕೊಳ್ಳದಿರುವುದು ನಮ್ಮ ವ್ಯವಸ್ಥೆಯ ವೈಫಲ್ಯವನ್ನೂ ಎತ್ತಿ ತೋರಿಸಿತು.

ಮದ್ಯ ಮತ್ತು ಗಾಂಜಾ ಅಮಲಿನಲ್ಲಿದ್ದ ಹೆಚ್ಚಿನ ಗೂಂಡಾಗಳು (ಅದರಲ್ಲೂ ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳು) ಸುಮತಿಯವರನ್ನು ಸುತ್ತುವರೆದು ಅಶ್ಲೀಲ ಪ್ರಶ್ನೆಗಳನ್ನು ಕೇಳುತ್ತಾ ಕಿರುಕುಳ ನೀಡಲು ಆರಂಭಿಸಿದರು. ಬೈಕ್ಗಳನ್ನು ಅಡ್ಡ ನಿಲ್ಲಿಸಿ ಅಸಭ್ಯವಾಗಿ ವರ್ತಿಸಿದರು. ಆದರೆ ಸುಮತಿ ಅವರು ಧೈರ್ಯಗುಂದದೆ ಎಲ್ಲವನ್ನೂ ಗಮನಿಸುತ್ತಿದ್ದರು. ಸುಮಾರು 3:30ಕ್ಕೆ ಬೀಟ್ ಕಾನ್ಸ್ಟೆಬಲ್ ಬಂದು ಎಸ್ಐ ಅವರು ಸೆಲ್ಯೂಟ್ ಹೊಡೆದಾಗಲೇ ಗೂಂಡಾಗಳಿಗೆ ತಾವು ಕೆಣಕಿದ್ದು ಸಾಕ್ಷಾತ್ ಪೊಲೀಸ್ ಆಯುಕ್ತರನ್ನು ಎಂಬ ಸತ್ಯ ಅರಿವಾಗಿದ್ದು!

ಹಿಡಿದ 40 ಮಂದಿಗೂ ಸರಿಯಾಗಿ ಬಿಸಿ ಮುಟ್ಟಿಸಿದ ಸುಮತಿ ಅವರು, “ರಸ್ತೆಯಲ್ಲಿ ಹುಡುಗಿಯರನ್ನು ನೋಡಿದಾಗ ಅಸಭ್ಯವಾಗಿ ವರ್ತಿಸಬೇಡಿ, ಸಹಾಯ ಮಾಡಲು ಕಲಿಯಿರಿ” ಎಂದು ಬುದ್ಧಿವಾದ ಹೇಳಿದರು. “ಓದು ಮತ್ತು ವೃತ್ತಿಜೀವನದ ಮೇಲೆ ಗಮನಹರಿಸಿ, ಗಾಂಜಾ-ಮದ್ಯದ ವ್ಯಸನ ಬಿಡದಿದ್ದರೆ ನಿಮ್ಮ ಬಾಲ ಕತ್ತರಿಸುವುದಾಗಿ” ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸುಮತಿ ಅವರಿಗೆ ಇಂತಹ ಸಾಹಸಗಳು ಹೊಸತಲ್ಲ. 2001ರಲ್ಲಿ ಡಿಎಸ್ಪಿಯಾಗಿದ್ದಾಗ ಕಾಜಿಪೇಟೆ ರೈಲು ನಿಲ್ದಾಣದಲ್ಲೂ ಇದೇ ರೀತಿಯ ಕಾರ್ಯಾಚರಣೆ ನಡೆಸಿ ಸುದ್ದಿಯಾಗಿದ್ದರು. ಈಗ ಮತ್ತೆ ಅದೇ ಶೈಲಿಯಲ್ಲಿ ಅಖಾಡಕ್ಕಿಳಿದು ಹೈದರಾಬಾದ್ ನಗರದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಕಳಕಳಿ ವ್ಯಕ್ತಪಡಿಸಿದ್ದಾರೆ.ಇತ್ತೀಚಿನ ದಿನಗಳಲ್ಲಿ ಇಂತಹ ಅಧಿಕಾರಿಗಳ ಆವಶ್ಯಕತೆ ಪ್ರತಿ ರಾಜ್ಯಕ್ಕೂ ಬೇಕಿದೆ ಎನ್ನುವುದಂತು ಸತ್ಯ.


