
ಹರಿಹರ :ಹರಿಹರದ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಬಂಧನಕ್ಕೆ ವಾರೆಂಟ್ ಜಾರಿ.!

news.ashwasurya.in
ಅಶ್ವಸೂರ್ಯ/ಹರಿಹರ : ಹರಿಹರ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಬಂಧನಕ್ಕೆ ವಾರೆಂಟ್ ಜಾರಿ
ದಾವಣಗೆರೆ: ಪೌರ ಕಾರ್ಮಿಕರ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಗೈರಾದ ಹರಿಹರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಬಂಧನ ವಾರೆಂಟ್ ಜಾರಿ ಮಾಡಿದೆ.
ಬಿ.ಪಿ. ಹರೀಶ್ ಅಥವಾ ಅವರ ಪರ ವಕೀಲರಾಗಲಿ ನ್ಯಾಯಾಲಯದ ಹಾಜರಾಗದ ಕಾರಣ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಶಾಸಕರ ವಿರುದ್ಧ ಸೋಮವಾರ ಬಂಧನ ವಾರೆಂಟ್ ಜಾರಿಗೊಳಿಸಿದ್ದಾರೆ. ಮುಂದಿನ ವಿಚಾರಣೆಯನ್ನು ಗುರುವಾರಕ್ಕೆ ನಿಗದಿಪಡಿಸಿದ್ದಾರೆ.
ಪ್ರಕರಣದ ಹಿನ್ನೆಲೆ: 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಬಿ.ಪಿ.ಹರೀಶ್ ರನ್ನು ಅಭಿನಂದಿಸಲು 2023ರ ಮೇ 16ರಂದು ಹರಿಹರ ನಗರಸಭೆಯ ಪೌರಕಾರ್ಮಿಕರು ಹಾಗೂ ಮಾದಿಗ ಸಮಾಜದ ಮುಖಂಡರು ತೆರಳಿದ್ದರು. ಈ ವೇಳೆ ಚುನಾವಣೆಯಲ್ಲಿ ತನಗೆ ಬೆಂಬಲ ನೀಡಿಲ್ಲ ಎಂದು ಶಾಸಕರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂದು ಆರೋಪಿಸಲಾಗಿತ್ತು. ಬಳಿಕ ಇದು ರಾಜೀ ಮಾತುಕತೆಯಲ್ಲಿ ಮುಗಿದಿತ್ತು. ಆದರೆ, ಮರುದಿನ ಅಭಿನಂದನೆ ಕಾರ್ಯಕ್ರಮದ ವೇದಿಕೆಯಲ್ಲಿ ಶಾಸಕ ಹರೀಶ್ ತಮ್ಮ ಹೇಳಿಕೆಯನ್ನು ಸಮರ್ಥಿಸಿ ಕೊಂಡಿದ್ದಾರೆಂದು ಆರೋಪಿಸಿ ಬಿಎಸ್ಪಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಹನುಮಂತಪ್ಪ ಹರಿಹರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತನಿಖೆ ನಡೆಸಿದ್ದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಶಾಸಕ ಹರೀಶ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಹೈಕೋರ್ಟ್ ಈ ಪ್ರಕರಣವನ್ನು ದಾವಣಗೆರೆಯ ವಿಶೇಷ ಜಿಲ್ಲಾ ನ್ಯಾಯಾಲಯದಿಂದ ಬೆಂಗಳೂರಿ ನಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿ ಆದೇಶಿಸಿತ್ತು.


