ಮೈಸೂರು : ಪತಿಯನ್ನು ಕಳೆದುಕೊಂಡ ಮರುದಿನವೇ ಶಾಲೆಗೆ ಹಾಜರಾದ ಶಿಕ್ಷಕಿ.! ನನ್ನ ದುಃಖ ಕ್ಕಿಂತ ನನ್ನ ವಿದ್ಯಾರ್ಥಿಗಳ ಭವಿಷ್ಯ ಮುಖ್ಯ ಎಂದ ಗಣಿತ ಶಿಕ್ಷಕಿ ಜೋತಿ.!
ಮೈಸೂರಿನಲ್ಲಿ ನಡೆದ ಈ ಘಟನೆ ಶಿಕ್ಷಕ ವೃತ್ತಿಯ ಬದ್ಧತೆಗೆ ಅತ್ಯುತ್ತಮ ಉದಾಹರಣೆಯಾಗಿದೆ. ಗಣಿತ ಶಿಕ್ಷಕಿ ಜ್ಯೋತಿ ಅವರು ಪತಿಯನ್ನು ಕಳೆದುಕೊಂಡ ದುಃಖದಲ್ಲಿದ್ದರೂ, ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮರುದಿನವೇ ಶಾಲೆಗೆ ಹಾಜರಾಗಿರುವುದು ನಿಜಕ್ಕೂ ಪ್ರಶಂಸನೀಯ.
ಶಿಕ್ಷಕಿ ಜ್ಯೋತಿ ಮೈಸೂರಿನ ಸರ್ಕಾರಿ ಶಾಲೆಯೊಂದರಲ್ಲಿ ಗಣಿತ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪತಿಯ ಅಕಾಲಿಕ ನಿಧನದ ದುಃಖದಲ್ಲೂ, ಗಣಿತ ವಿಷಯದ ಮಹತ್ವ ಮತ್ತು ವಿದ್ಯಾರ್ಥಿಗಳ ಪರೀಕ್ಷಾ ತಯಾರಿಯನ್ನು ಪರಿಗಣಿಸಿ ಜ್ಯೋತಿ ಅವರು ಕರ್ತವ್ಯಕ್ಕೆ ಹಾಜರಾಗಿದ್ದರು.
“ನನ್ನ ದುಃಖಕ್ಕಿಂತ ನನ್ನ ವಿದ್ಯಾರ್ಥಿಗಳ ಭವಿಷ್ಯ ಮುಖ್ಯ” ಎಂಬ ಅವರ ಮಾತು ಶಿಕ್ಷಕ ವೃತ್ತಿಯ ಉದಾತ್ತತೆಯನ್ನು ಎತ್ತಿ ತೋರಿಸುತ್ತದೆ.
ಅವರ ಈ ಕಠಿಣ ನಿರ್ಧಾರ ಮತ್ತು ವೃತ್ತಿಪರತೆ ಎಲ್ಲರಿಗೂ ಮಾದರಿಯಾಗಿದೆ…..
news.ashwasurya.in
ಅಶ್ವಸೂರ್ಯ/ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನ ಶಿಕ್ಷಕಿ ಜ್ಯೋತಿ ಅವರು ತಮ್ಮ ಪತಿಯನ್ನು ಕಳೆದುಕೊಂಡ ದುಃಖದ ನಡುವೆಯೂ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಗಣಿತ ಪರೀಕ್ಷಾ ಸಿದ್ಧತೆಗಾಗಿ ಶಾಲೆಗೆ ಹಾಜರಾಗಿದ್ದಾರೆ. ತಮ್ಮ ಮನದಲ್ಲಿರುವ ಅತೀವ ದುಃಖದ ನಡುವೆ ತಮ್ಮ ವಿದ್ಯಾರ್ಥಿಗಳ ಭವಿಷ್ಯಕ್ಕೆ ಶಾಲೆಗೆ ಹಾಜರಾಗಿ ಆದ್ಯತೆ ನೀಡಿದ ಅವರ ಈ ಕರ್ತವ್ಯನಿಷ್ಠೆಯು ರಾಷ್ಟ್ರವ್ಯಾಪ್ತಿ ಪ್ರಶಂಸೆಗೆ ಪಾತ್ರವಾಗಿದೆ.
ಶಿಕ್ಷಕರ ವೃತ್ತಿ ಎಂದರೆ ಕೇವಲ ಉದ್ಯೋಗವಲ್ಲ, ಅದೊಂದು ಪವಿತ್ರ ಜವಾಬ್ದಾರಿ ತಮ್ಮ ಮಕ್ಕಳ ಭವಿಷ್ಯಕ್ಕೆ ನಾವು ಶಿಕ್ಷಕರಾಗಿ ನಮ್ಮ ಶಕ್ತಿ ಮೀರಿ ಬೋಧಿಸಿ ತಯಾರಿಮಾಡಿ ವಿದ್ಯಾರ್ಥಿಗಳನ್ನು ಪರೀಕ್ಷಾ ಕೊಠಡಿಗೆ ಕಳಿಸಬೇಕು ಅವರನ್ನು ಎಂಬುದನ್ನು ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಜಿ.ಬಿ. ಸರಗೂರು ಸರ್ಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಜ್ಯೋತಿ ಅವರದು.ಒಬ್ಬ ಶಿಕ್ಷಕಿಯಾಗಿ ತಮ್ಮ ಜವಬ್ದಾರಿ ಏನೆಂಬುದನ್ನು ಇಡೀ ಜಗತ್ತಿಗೆ ಸಾರಿದ್ದಾರೆ. ಪತಿಯ ಸಾವಿನ ಅತೀವ ನೋವಿನ ನಡುವೆಯೂ ಅವರನ್ನು ಕಳೆದುಕೊಂಡ ಒಂದೇ ದಿನಕ್ಕೆ ಶಾಲೆಗೆ ಹಾಜರಾಗಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಗಣಿತದ ಪಾಠ ಮಾಡುವ ಮೂಲಕ ಅಪಾರ ಕರ್ತವ್ಯನಿಷ್ಠೆ ಮೆರೆದಿದ್ದಾರೆ.
ಮೈಸೂರಿನ ದಟ್ಟಗಳ್ಳಿ ನಿವಾಸಿಯಾಗಿರುವ ಜ್ಯೋತಿ ಅವರ ಪತಿ, ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಕಿರಣ್ ಕುಮಾರ್ (47) ಅವರು ಮಾರ್ಚ್ 25ರ ಬುಧವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು. ಪತಿಯ ಅಗಲಿಕೆಯಿಂದ ಕುಟುಂಬವೇ ಶೋಕಸಾಗರದಲ್ಲಿ ಮುಳುಗಿದ್ದರೂ, ಜ್ಯೋತಿ ಅವರು ತಮ್ಮ ನೋವಿಗಿಂತ ತಮ್ಮ ವಿದ್ಯಾರ್ಥಿಗಳ ಭವಿಷ್ಯವೇ ಮುಖ್ಯ ಎಂದು ಗಂಡನ ನೋವನ್ನು ನುಂಗಿಕೊಂಡು ಮನಸ್ಸನ್ನು ಗಟ್ಟಿ ಮಾಡಿಕೊಂಡಿದ್ದರು.

ತನ್ನ ವಿದ್ಯಾರ್ಥಿಗಳಿಗಾಗಿ ದೃಢ ನಿರ್ಧಾರ ಮಾಡಿದ ಶಿಕ್ಷಕಿ ಜೋತಿ ಅವರು
ಮಾರ್ಚ್ 28ರಂದು ಎಸ್ಎಸ್ಎಲ್ಸಿಯ ಗಣಿತ ಪರೀಕ್ಷೆ ನಡೆಯಲಿದ್ದು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗಣಿತ ವಿಷಯವು ಕೊಂಚ ಕಠಿಣವೆನಿಸುವುದರಿಂದ, ಪರೀಕ್ಷೆಯ ಈ ನಿರ್ಣಾಯಕ ಸಮಯದಲ್ಲಿ ಮಕ್ಕಳಿಗೆ ಮಾರ್ಗದರ್ಶನದ ಅಗತ್ಯವಿದೆ ಎಂದು ಜ್ಯೋತಿ ಅವರು ಪತಿಯ ಮರಣದ ಮರುದಿನವೇ (ಗುರುವಾರ) ಶಾಲೆಗೆ ಹಾಜರಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸಿದ್ದಾರೆ.! ಗಣಿತ ಶಿಕ್ಷಕಿಯೂ ಆಗಿರುವ ಅವರು, ಪರೀಕ್ಷಾ ಪೂರ್ವ ಸಿದ್ಧತೆ ಮತ್ತು ಕಠಿಣ ಸಮಸ್ಯೆಗಳನ್ನು ಬಿಡಿಸುವ ಕುರಿತು ಮಕ್ಕಳಿಗೆ ಧೈರ್ಯ ತುಂಬಿದ್ದಾರೆ.
ವಿಷಯ ತಿಳಿದು ಸಾಂತ್ವನ ಹೇಳಿದ ಬಿಇಒ.
ಈ ವಿಷಯ ತಮ್ಮ ಗಮನಕ್ಕೆ ಬರುತ್ತಿದ್ದ ಹಾಗೆ ತಕ್ಷಣ ಎಚ್.ಡಿ.ಕೋಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ (BEO) ಸಿ.ಎನ್. ರಾಜು ಅವರು ಶಾಲೆಗೆ ಭೇಟಿ ನೀಡಿ ಜ್ಯೋತಿ ಅವರಿಗೆ ಸಾಂತ್ವನ ಹೇಳಿದ್ದಾರೆ. “ನಿಮ್ಮ ಪತಿ ನಿನ್ನೆಯಷ್ಟೇ ಅಗಲಿದ್ದಾರೆ, ನೀವು ಅತೀವ ದುಃಖದಲ್ಲಿದ್ದೀರಿ. ನಿಮ್ಮ ಬದಲಿಗೆ ಎರಡು ದಿನಗಳ ಮಟ್ಟಿಗೆ ಬೇರೆ ಶಿಕ್ಷಕರನ್ನು ನಿಯೋಜಿಸುತ್ತೇವೆ, ನೀವು ಮನೆಗೆ ತೆರಳಿ ವಿಶ್ರಾಂತಿ ಪಡೆಯಿರಿ” ಎಂದು ಸಲಹೆ ನೀಡಿದರು.
ಆದರೆ ಇದನ್ನು ವಿನಯದಿಂದಲೇ ನಿರಾಕರಿಸಿದ ಜ್ಯೋತಿ ಅವರು, “ಗಣಿತ ವಿಷಯವನ್ನು ಸಂಪೂರ್ಣವಾಗಿ ನಾನೇ ಬೋಧಿಸಿದ್ದೇನೆ. ನನ್ನ ಎಲ್ಲ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಬೇಕು ಎಂಬುದು ನನ್ನ ಆಸೆ. ನಾಳೆಯೂ ಬಂದು ಮಕ್ಕಳ ಪರೀಕ್ಷಾ ಸಿದ್ಧತೆಗೆ ಬೆಂಬಲವಾಗಿರುತ್ತೇನೆ” ಎಂದು ಹೇಳುವ ಮೂಲಕ ಎಲ್ಲರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದರು.
ಪತಿಯ ಸಾವಿನ ನಡುವೆಯೂ ತಮ್ಮ ವಿಧ್ಯಾರ್ಥಿಗಳ ಭವಿಷ್ಯಕ್ಕಾಗಿ ಮನದ ನೋವನ್ನೆಲ್ಲ ಮನದಲ್ಲೆ ಹುದುಗಿಸಿ ಕೊಂಡು ತನ್ನ ವಿಧ್ಯಾರ್ಥಿಗಳ ಭವಿಷ್ಯ ರೂಪಿಸಲು ಮುಂದಾದ ಶಿಕ್ಷಕಿ ಜೋತಿ ಅವರಿಗೆ ವಿಷಯ ತಿಳಿದ ಪ್ರತಿಯೊಬ್ಬರು ತಲೆಬಾಗಿ ನಮಸ್ಕರಿಸಿದ್ದಾರೆ…. ವೈಯಕ್ತಿಕ ಸಂಕಷ್ಟದ ನಡುವೆಯೂ ವೃತ್ತಿ ಬದ್ಧತೆ ಮೆರೆದ ಜ್ಯೋತಿ ಅವರ ಕಾರ್ಯಕ್ಕೆ ಪೋಷಕರು, ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು ಹಾಗೂ ಸಹೋದ್ಯೋಗಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಿಇಒ ರಾಜು ಅವರು ಮಾತನಾಡಿ, “ಜ್ಯೋತಿ ಅವರು ಮಾನವೀಯತೆ ಮತ್ತು ವೃತ್ತಿನಿಷ್ಠೆಗೆ ಅಪರೂಪದ ಉದಾಹರಣೆಯಾಗಿದ್ದಾರೆ. ಅವರ ಈ ಸೇವಾ ಮನೋಭಾವ ಇಡೀ ಸಮಾಜಕ್ಕೆ ಪ್ರೇರಣೆ” ಎಂದು ಪ್ರಶಂಸಿಸಿದ್ದಾರೆ.


