ಪರಪ್ಪನ ಅಗ್ರಹಾರ ಜೈಲ್ : ಸಿಸಿಬಿ ರೇಡ್, ಪ್ರಜ್ವಲ್ ಬ್ಯಾರಕ್ನಲ್ಲಿ ಆಂಡ್ರಾಯ್ಡ್ ಮೊಬೈಲ್ ಪತ್ತೆ.!
news.ashwasurya.in
ಅಶ್ವಸೂರ್ಯ/ಬೆಂಗಳೂರು : ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಿಸಿಬಿ ಪೊಲೀಸರು ನಡೆಸಿದ ದಿಢೀರ್ ಶೋಧ ಕಾರ್ಯಾಚರಣೆಯಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಇರಿಸಲಾಗಿರುವ ಬ್ಯಾರಕ್ನಲ್ಲಿ ಆಂಡ್ರಾಯ್ಡ್ ಮೊಬೈಲ್ ಫೋನ್ ಪತ್ತೆಯಾಗಿರುವುದಾಗಿ ವರದಿಯಾಗಿದೆ.
ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಜಯ್ ಹಿಲೋರಿ ಹಾಗೂ ಡಿಸಿಪಿಗಳಾದ ಶ್ರೀಹರಿಬಾಬು ಮತ್ತು ರಾಜಾ ಇಮಾಮ್ ಕಾಸಿಂ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಬೆಳಗ್ಗೆ 11 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ನಡೆದ ಶೋಧ ಕಾರ್ಯದಲ್ಲಿ ಜೈಲಿನ ವಿವಿಧ ಬ್ಯಾರಕ್ಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗಿದೆ.
ಈ ವೇಳೆ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್ನಲ್ಲಿ ಬಟ್ಟೆಗಳ ನಡುವೆ ಇರಿಸಲಾಗಿದ್ದ ರೆಡ್ಮಿ ಆಂಡ್ರಾಯ್ಡ್ ಮೊಬೈಲ್ ಫೋನ್ ಪತ್ತೆಯಾಗಿದೆ, ಪೊಲೀಸರು ಅವುಗಳನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದೇ ವೇಳೆ ಡೈರಿಯೂ ಪತ್ತೆಯಾಗಿದೆ ಎಂದು ವರದಿಯಾಗಿದೆ.

ದರ್ಶನ್,ಪವಿತ್ರ ಸೇರಿದಂತೆ ಪ್ರಮುಖ ಕೈದಿಗಳ ಬ್ಯಾರಕ್ಗಳಲ್ಲೂ ಶೋಧ :
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಸೇರಿದಂತೆ ಪ್ರಮುಖ ರೌಡಿಗಳು ಹಾಗೂ ವಿಐಪಿ ಕೈದಿಗಳನ್ನು ಇರಿಸಿರುವ ಬ್ಯಾರಕ್ಗಳಲ್ಲೂ ಸಿಸಿಬಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಈ ಕಾರ್ಯಾಚರಣೆಯ ಉದ್ದೇಶ ಜೈಲಿನಲ್ಲಿ ನಿಷೇಧಿತ ವಸ್ತುಗಳ ಬಳಕೆ ಹಾಗೂ ಅಕ್ರಮ ಚಟುವಟಿಕೆಗಳ ಕುರಿತು ಪರಿಶೀಲನೆ ನಡೆಸುವುದಾಗಿತ್ತು ಎಂದು ತಿಳಿದುಬಂದಿದೆ.
ಪ್ರಜ್ವಲ್ ರೇವಣ್ಣ ಅವರೊಂದಿಗೆ ಅದೇ ಬ್ಯಾರಕ್ನಲ್ಲಿ ಪ್ರತಾಪ್ ರೈ ಎಂಬ ಮತ್ತೊಬ್ಬ ಸಜಾಬಂಧಿ ಕೈದಿ ವಾಸವಿದ್ದ ಎನ್ನಲಾಗಿದೆ. ಮೊಬೈಲ್ ಸೇರಿದಂತೆ ನಿಷೇಧಿತ ವಸ್ತುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಪ್ರಜ್ವಲ್ ರೇವಣ್ಣ ಅವರನ್ನು ಪ್ರಕರಣದಲ್ಲಿ ಎ1 ಆರೋಪಿಯಾಗಿ ಹಾಗೂ ಪ್ರತಾಪ್ ರೈ ಅವರನ್ನು ಮತ್ತೊಬ್ಬ ಆರೋಪಿಯಾಗಿ ಸೇರಿಸಲಾಗಿದೆ ಎಂದು ವರದಿಯಾಗಿದೆ. ಮೊಬೈಲ್ ಫೋನ್ ಬ್ಯಾರಕ್ಗೆ ಹೇಗೆ ಬಂತು, ಅದನ್ನು ಯಾರು ಪೂರೈಸಿದರು ಮತ್ತು ಎಷ್ಟು ದಿನಗಳಿಂದ ಬಳಕೆ ಮಾಡಲಾಗುತ್ತಿತ್ತು ಎಂಬುದರ ಬಗ್ಗೆ ಪೊಲೀಸರು ತನಿಖೆ ಮಾಡುವ ಸಾಧ್ಯತೆ ಇದೆ.
ಅತ್ಯಂತ ಬಿಗಿ ಭದ್ರತೆ ಹೊಂದಿರುವ ವಿಐಪಿ ಬ್ಯಾರಕ್ನಲ್ಲಿ ಮೊಬೈಲ್ ಫೋನ್ ಪತ್ತೆಯಾಗಿರುವುದು ಪರಪ್ಪನ ಅಗ್ರಹಾರ ಜೈಲಿನ ಭದ್ರತಾ ವ್ಯವಸ್ಥೆ ಹಾಗೂ ಸಿಬ್ಬಂದಿಯ ಕರ್ತವ್ಯ ನಿರ್ವಹಣೆ ಕುರಿತು ಮತ್ತೊಮ್ಮೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಜೈಲಿನಲ್ಲಿ ಅಕ್ರಮವಾಗಿ ಮೊಬೈಲ್ ಸೇರಿದಂತೆ ನಿಷೇಧಿತ ವಸ್ತುಗಳ ಬಳಕೆಗೆ ಸಂಬಂಧಿಸಿದಂತೆ ಈ ಹಿಂದೆ ಹಲವು ಆರೋಪಗಳು ಕೇಳಿಬಂದಿದ್ದವು. ಜೈಲು ಮುಖ್ಯಸ್ಥರಾಗಿ ಡಿಜಿಪಿ ಅಲೋಕ್ ಕುಮಾರ್ ನೇಮಕಗೊಂಡ ಬಳಿಕ ಭದ್ರತೆ ಬಿಗಿ ಗೊಳಿಸಲಾಗಿದ್ದು, ಈವರೆಗೆ 120ಕ್ಕೂ ಹೆಚ್ಚು ಮೊಬೈಲ್ಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್ನಲ್ಲಿ ಮೊಬೈಲ್ ಹಾಗೂ ಇತರ ವಸ್ತುಗಳು ಪತ್ತೆಯಾಗಿರುವ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿ ಗಣಿಸಿದ್ದು, ಇದರ ಹಿಂದೆ ಯಾರ ಕೈವಾಡವಿದೆ ಎಂಬುದರ ಕುರಿತು ತನಿಖೆ ಮುಂದುವರಿಲಿದ್ದಾರೆ.
ಈ ಸಂಬಂಧ ಸಿಸಿಬಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್ಐರ್ಆ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.ಕರ್ತವ್ಯಲೋಪದ ಆರೋಪದ ಹಿನ್ನೆಲೆಯಲ್ಲಿ ದಕ್ಷಿಣ ವಿಭಾಗದ ಡಿಐಜಿ ನೀಡಿದ ವರದಿ ಆಧರಿಸಿ ಸಹಾಯಕ ಅಧೀಕ್ಷಕ ಇರಣ್ಣ ರಂಗಾಪುರ ಅವರನ್ನು ಅಮಾನತುಗೊಳಿಸಲಾಗಿದೆ ಅಲ್ಲದೆ ಬೆಂಗಳೂರು ಕೇಂದ್ರ ಕಾರಾಗೃಹದ ಅಧೀಕ್ಷಕರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.


