
Episode -1
ಶಿವಮೊಗ್ಗ : ತೀರ್ಥಹಳ್ಳಿ ಮಡಿಲಲ್ಲಿ ಮರಳು ಲೂಟಿ ಕೋರರು.! ಜನ ಪ್ರತಿನಿಧಿಗಳು , ಅಧಿಕಾರಿಗಳ ಪಾಲೆಷ್ಟು.? ಅಕ್ರಮ ಮರಳು ಧಂದೆಕೋರರ ಆರ್ಭಟಕ್ಕೆ ಬೆತ್ತಲಾದಳೆ ತುಂಗೆ.!!?

ಅಕ್ರಮ ಮರಳು ಗಣಿಗಾರಿಕೆ ಎನ್ನುವುದು ತೀರ್ಥಹಳ್ಳಿ ತಾಲ್ಲೂಕನ್ನೆ ನುಂಗಿ ನೇಣಿಯುತ್ತಿದೆ.!ಇದು ಸಣ್ಣ ಅಪರಾಧವೇನಲ್ಲ. ಇದು ಸುತ್ತಲಿನ
ಪರಿಸರ ಹಾಗೂ ಆರ್ಥಿಕತೆಗೆ ಸಂಬಂಧಿಸಿದಂತೆ ದೊಡ್ಡ ಅಪರಾಧವಾಗಿದೆ. ಈ ಅಕ್ರಮ ಮರಳು ದಂಧೆಯಿಂದ ಶಿವಮೊಗ್ಗ ಜಿಲ್ಲೆಯ ಜೀವನದಿಗಳಾದ ತುಂಗಾ ಮತ್ತು ಭದ್ರಾ ಹಾಗೂ ಶರವಾತಿ ನದಿಗಳ ಇಕ್ಕೆಲಗಳೂ ಬೆತ್ತಲಾಗಿ ಹೋಗಿದೆ.! ಇನ್ನೂ ತೀರ್ಥಹಳ್ಳಿ ತಾಲ್ಲೂಕಿನ ಹಳ್ಳ ಕೊಳ್ಳಗಳ ಕಥೆ ಬೇರೆಯದೆ ಆಗಿದೆ. ಅಕ್ರಮ ಮರಳು ದಂಧೆಕೋರರ ಕಪಿಮುಷ್ಟಿಗೆ ಸಿಲುಕಿ ನದಿಗಳಿಗೆ ಗಾಸಿಯಾಗುತ್ತಿದೆ,
ಅಂತರ್ಜಲ ಮಟ್ಟ ಕುಸಿಯುತ್ತಿದೆ, ದೂಳಿನಿಂದ ಬೆಳೆಗಳಿಗೆ ಹಾನಿಯಾಗುತ್ತಿದೆ, ಸೇತುವೆಗಳು ರಸ್ತೆಗಳು ದುರ್ಬಲಗೊಳ್ಳುತ್ತಿವೆ.ರಾತ್ರಿ ಹಗಲೆನ್ನದೆ ರಸ್ತೆಗಳಲ್ಲಿ ಯಮ ಸ್ಫೀಡಿನಲ್ಲಿ ಚಲಿಸುವ ಮರಳು ಸಾಗಿಸುವ ಟಿಪ್ಪರ್ ಲಾರಿಗಳು ಅಮಾಯಕ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿವೆ. ಇದೆಲ್ಲದರ ಜೋತೆಗೆ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೋಟಿ ಗಟ್ಟಲೆ ಹಣ ನಷ್ಟವಾಗುತ್ತಿದೆ.! ಅದೇ ಕಾಲದಲ್ಲಿ ಮರಳು ದಂಧೆ ಮಾಫಿಯಾದವರ ಭಯದಿಂದ ಸಾಮಾನ್ಯ ನಾಗರಿಗರು ಗ್ರಾಮಗಳ ಮುಗ್ಧ ಜೀವಗಳು ಭಯದಲ್ಲಿ ಬದುಕುವಂತಾಗಿದೆ.
ಅಕ್ರಮ ಮರಳು ಗಣಿಗಾರಿಕೆಯ ವಿರುದ್ಧ ಧ್ವನಿ ಎತ್ತುವವರ ವಿರುದ್ಧ ಪ್ರತಿಕಾರಕ್ಕೆ ಮುಂದಾಗುವಂತ ಮರಳು ದಂಧೆಕೋರರು ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಇದ್ದಾರೆ……..
news.ashwasurya.in


ಅಶ್ವಸೂರ್ಯ/ತೀರ್ಥಹಳ್ಳಿ : ಶಾಸಕ ಆರಗ ಜ್ಞಾನೇಂದ್ರರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮತ್ತು ಸಂಸದರಿಗೆ ಮತ ಹಾಕಿ ಚುನಾಯಿಸಿದ ಜನರ ಮೇಲೆ ಅಲ್ಪಸ್ವಲ್ಪ ಕರುಣೆ ಇದ್ದಿದ್ದರೆ ತೀರ್ಥಹಳ್ಳಿ ತಾಲ್ಲೂಕು ಈ ಪರಿ ಅಕ್ರಮ ಮರಳು ದಂಧೆಯಲ್ಲಿ ಮುಳುಗಿ ಹೋಗುತ್ತಿರಲಿಲ್ಲ. ತಾಲ್ಲೂಕಿನ ರಸ್ತೆಗಳು ಡಾಂಬರು ಕಾಣದೆ ಹಾಳಾದರೂ ಜನ ತಲೆ ಕೆಡಿಸಿ ಕೊಂಡಿರಲಿಲ್ಲ. ಆದರೆ ದಿನ ನಿತ್ಯ ಹಗಲು ರಾತ್ರಿ ಎನ್ನದೆ ನಡೆಯುತ್ತಿರುವ ಅಕ್ರಮ ಮರಳು ಲೂಟಿ, ಕ್ಷೇತ್ರದ ಜನರನ್ನು ಕಂಗಾಲು ಮಾಡಿದೆ. ಇತ್ತೀಚೆಗಂತೂ ಮರಳು ಲೂಟಿಯ ಆರ್ಭಟ ಮಿತಿ ಮೀರಿದ್ದು, ತೀರ್ಥಹಳ್ಳಿ ಜನರ ಕಾಯುವ ತುಂಗೆಯ ತಟದಲ್ಲಿ ಪ್ರತಿಷ್ಠಾಪಿತನಾದ ರಾಮೇಶ್ವರನೆ ದಂಗು ಬಡಿದು ಕೂರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಯಾವುದೇ ಆಡಳಿತ ಸರ್ಕಾರವನ್ನು ಭ್ರಷ್ಟ ಸರ್ಕಾರ ಮಾಡಲು ಮತ್ತು ಮರಳು ಲೂಟಿ ಕೋರರನ್ನು
ಪೋಷಣೆ ಮಾಡಲು ನಿಂತ ಭಂಡ ಅಧಿಕಾರಿಗಳಿಗಂತೂ ಮರಳು ಲೂಟಿ ತಡೆಯುವ ಧೈರ್ಯವಿಲ್ಲ.

ಅಟ್ ಲೀಸ್ಟ್ ಕ್ಷೇತ್ರದ ಖಡಕ್ ರಾಜಕಾರಣಿ ಶಾಸಕರು ಎನಿಸಿಕೊಂಡ ಆರಗ ಜ್ಞಾನೇಂದ್ರ ಅವರಾದರು ಮರಳು ಲೂಟಿ ತಡೆಯುವತ್ತ ಗಮನಹರಿಸ ಬಾರದೆ..? ಎನ್ನುವ ಪ್ರಶ್ನೆ ಕ್ಷೇತ್ರದ ಮಂದಿಯ ಬಾಯಲ್ಲಿ ಬಹು ಚರ್ಚಿತವಾಗಿದೆ.?
ಬೆಳಗಿನ ಬೆಳಕು ಕಾಣುವ ಮುನ್ನವೇ ಟಿಪ್ಪರ್ ಲಾರಿಗಳು, ಅಕ್ರಮ ಮರಳು ಶೇಖರಿಸಿಟ್ಟ ಜಾಗವನ್ನು ತಲುಪುತ್ತವೆ.
ಸಂಜೆಯ ಹೊತ್ತಿಗೆ ಮರಳನ್ನು ಬಗೆಬಗೆದು ಪ್ರತಿನಿತ್ಯ ಒಂದೊಂದು ಅಕ್ರಮ ಅಡ್ಡೆಯಿಂದಲು ನೂರಾರು ಲೋಡು ಮರಳು ಪಟ್ಟಣವನ್ನು ತಲುಪಿ ಅಯಾ ಸ್ಥಳಗಳಲ್ಲಿ ಬಿಕರಿಯಾಗಿತ್ತದೆ.!
ಶಾಸಕರಾದ ಆರಗ ಜ್ಞಾನೇಂದ್ರ, ಗಣಿ ಇಲಾಖೆ ಅಧಿಕಾರಿಗಳು, ಪೊಲೀಸರು ಹೀಗೆ ಎಲ್ಲರಿಗೂ ಮರಳು ಲೂಟಿ ತಡೆಯುವಂತೆ ಸಾಕಷ್ಟು ಬಾರಿ ವರದಿಮಾಡಿದರು ಎನು ಪ್ರಯೋಜನವಿಲ್ಲ.ಇನ್ನೂ ಪ್ರತಿಭಟನೆ, ಹೋರಾಟ, ಮನವಿ, ದೂರುಗಳೆಲ್ಲವನ್ನು ಅಂಡಿನ ಕೆಳಗೆ ಹಾಕಿಕೊಳ್ಳುವ ಭ್ರಷ್ಟ ಅಧಿಕಾರಿಗಳು ಅಕ್ರಮ ಮರಳು ದಂಧೆಕೋರರ ರಕ್ಷಣೆಗೆ ನಿಂತು ಬಿಟ್ಟಿದ್ದಾರೆ.

ಇವತ್ತಿಗೂ ತಾಲ್ಲೂಕಿಗೆ ಪೀಡೆಯಂತೆ ಕಾಡುತ್ತಿರುವ ಸಮಸ್ಯೆ ಅಕ್ರಮ ಮರಳು ಲೂಟಿ, ಸರ್ಕಾರದ ನಿಯಮಗಳೆಲ್ಲ ಮರಳುಗಳ್ಳರ ಪಾಲಿಗೆ ಕಾಲಿಗೆ ಹಾಕುವ ಎಕ್ಕಡದಂತಾಗಿದೆ. ಗಣಿ ಇಲಾಖೆಯ ಅಧಿಕಾರಿಗಳು ‘ಅಜೀರ್ಣವಾಗುವಷ್ಟು ಕಮಾಯಿ ಮಾಡುವತ್ತಲೇ ಇದ್ದಾರೆ.!
ವರ್ಷಗಳಿಂದ ತೀರ್ಥಹಳ್ಳಿ ತಾಲ್ಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಮರಳು ಭಕ್ಷಕರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಆದೇಶಗಳೆಲ್ಲ ಕಾಲು ಕಸದಂತಾಗಿವೆ. ಇಲ್ಲಿ ನಡೆಯುವ ಮರಳು ಲೂಟಿ ಎಂಥವರನ್ನೂ
ದಂಗುಬಡಿಸುತ್ತದೆ. ಇದೇನು ಕದ್ದು ಮುಚ್ಚಿ ಮಾಡುತ್ತಿಲ್ಲ. ರಾಜಾ ರೋಷವಾಗಿಯೇ ಲೂಟಿ ನಡೆಯುತ್ತಿದೆ. ಈ ಅಕ್ರಮವನ್ನು ತಡೆಯ ಬೇಕಾದ ಅಧಿಕಾರಿಗಳೇ ಮರಳುಗಳ್ಳರ ಬೆನ್ನಿಗೆ ನಿಂತುಬಿಟ್ಟಿದ್ದಾರೆ. ತಾಲ್ಲೂಕಿನ ರೈತರು ಪ್ರಜ್ಞಾವಂತರು ದಿನ ನಿತ್ಯವೂ ಮರಳು ಲೂಟಿ ವಿರೋಧಿಸುತ್ತಿದ್ದರು ಅವರ ಮಾತುಗಳಿಗೆ ಕವಡೆ ಕಾಸಿನ ಕಿಮ್ಮತ್ ಇಲ್ಲದಂತಾಗಿದೆ.

ತೀರ್ಥಹಳ್ಳಿ ತಾಲ್ಲೂಕಿನ ಅಕ್ರಮ ಮರಳು ಗಣಿಗಾರಿಕೆಯ ಬಗ್ಗೆ ಎಲ್ಲವೂ ಗೊತ್ತಿದ್ದರೂ ತುಟಿ ಬಿಚ್ಚುತ್ತಿಲ್ಲ ಸಂಭಂದಪಟ್ಟ ಮಂತ್ರಿಗಳು ಮತ್ತು ಅಧಿಕಾರಿಗಳ ವರ್ಗ.!ಇಲ್ಲಿಯ ಅಕ್ರಮ ಮರಳು ಲೂಟಿಯನ್ನು ತಡೆಯುವಂತೆ ರೈತರು, ಹೋರಾಟಗಾರರು ಮನವಿ ಮಾಡಿದ್ದರು. ಮೈ ತುಂಬಾ ಭ್ರಷ್ಟಾಚಾರದ ಪರ್ವತವನ್ನೆ ತುಂಬಿಕೊಂಡಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಂದ
ಅಕ್ರಮ ಮರಳು ದಂಧೆಕೋರರನ್ನು ಮಟ್ಟಹಾಕುವತ್ತ ಗಮನ ಹರಿಸುವ ಬದಲಿಗೆ ಮತ್ತಷ್ಟು ಲೂಟಿಯಾಗುವಂತೆ ನೋಡಿಕೊಂಡಂದ್ದೆ ಹೆಚ್ಚು.! ಅದರ ಪರಿಣಾಮ ಇವತ್ತು ತೀರ್ಥಹಳ್ಳಿ ತಾಲ್ಲೂಕು ತಾಯಿಲ್ಲದ ತವರಿನಂತಾಗಿದೆ.ಲಕ್ಷಾಂತರ ರೂಪಾಯಿ ಮರಳು ಲೂಟಿಯಾಗುತ್ತಿದೆ. ಯಾವ ಹಂತಕ್ಕೆ ಈ ಮರಳು ಲೂಟಿ ಮಾಫಿಯಾ ಬಲಿಷ್ಠವಾಗಿದೆಯೆಂದರೆ ಅಕ್ರಮ ತಡೆಯಲು ಮುಂದಾದವರ ಮೇಲೇ ಹಲ್ಲೆಗಳು ನಡೆಯುತ್ತವೆ.

ತೀರ್ಥಹಳ್ಳಿ ತಾಲ್ಲೂಕಿನ ಮರಳು ಲೂಟಿಯ ಬಗ್ಗೆ ಸವಿಸ್ತಾರ ವರದಿ ಮಾಡಿದಾಗಲೇಲ್ಲ ಆಗ ನೆಪ ಮಾತ್ರಕ್ಕೆ ಒಂದು ದಿನ ರೇಡು ಬಿಳುವ ಗಣಿ ಇಲಾಖೆ ಅಧಿಕಾರಿಗಳು ಅಂದಿನಿಂದ ತಮಗೆ ಬರುತ್ತಿದ್ದ ಮಾಮೂಲನ್ನು ದುಪ್ಪಟ್ಟು ಮಾಡಿಕೊಂಡು ಮರಳುಗಳ್ಳರ ಬೆನ್ನು ಸವರಿ ಕಳಿಸುತ್ತಾರೆ ಎನ್ನುವ ಮಾತು ತೀರ್ಥಹಳ್ಳಿ ತಾಲ್ಲೂಕಿನಾದ್ಯಂತ ಪ್ರತಿಧ್ವನಿಸುತ್ತಿದೆ.! ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಮರಳು ಲೂಟಿ ಎನ್ನುವುದು ಯಾವುದೋ ಒಂದು ಸ್ಥಳಕ್ಕೆ ಸೀಮಿತವಾಗಿಲ್ಲ ತಾಲ್ಲೂಕಿನ ಪಟ್ಟಣ,ಗ್ರಾಮಪಂಚಾಯಿತಿ,ಕುಗ್ರಾಮದ ವರೆಗೂ ವ್ಯಾಪಿಸಿದೆ. ತೀರ್ಥಹಳ್ಳಿ ಪಟ್ಟಣದಲ್ಲೆ ಮರಳು ಗೆಬರುವ ದಂಧೆ ನಿರಾಂತಕವಾಗಿ ನಡೆಯುತ್ತಿದ್ದು ಸ್ಥಳೀಯ ಪೊಲೀಸರಿಗೆ ಜನ ಮಾಹಿತಿ ಕೊಟ್ಟರೂ ಪ್ರಯೋಜನವಾಗಿಲ್ಲ. ಇಲ್ಲಿ ಕಾನೂನು ಸುವ್ಯವಸ್ಥೆ ಯಾವ ಪರಿ ಎಕ್ಕುಟ್ಟು ಹೋಗಿದೆಯೆಂದರೆ ಮರಳು ಲೂಟಿ ಮಾಡುವವರ ಜೊತೆಯ ಕೆಲವು ಪೊಲೀಸರು ಭಾಯಿ-ಭಾಯಿ ಥರ ಸಂಬಂಧ ಬೆಳೆಸಿದ್ದಾರೆ. ಹಾಗಿರುವಾಗ ಮರಳು ಲೂಟಿ ನಿಯಂತ್ರಿಸುವವರಾದರು ಯಾರು..? ಎಂಬ ಅನುಮಾನ ಸಹಜವಾಗಿಯೆ ಮೂಡುತ್ತದೆ. ತಾಲ್ಲೂಕಿನ ಸುತ್ತಮುತ್ತ ಕೆಲವು ಕಡೆ ಯಾವುದೇ ರೀತಿಯ ಗಣಿಗಾರಿಕೆ ನಡೆಸಬಾರದು ಎಂಬ ಸರ್ಕಾರದ ಕಟ್ಟೆಚ್ಚರವಿದೆ.

ಹೀಗಿದ್ದರೂ ಮರಳು ಲೂಟಿ ನಡೆಯುತ್ತಿದೆ. ಮರಳು ಲೂಟಿ ಯಿಂದ ತಾಲ್ಲೂಕಿನ ಸುಂದರವಾಗಿದ್ದ ರಸ್ತೆಗಳು ಕುಲಗೆಟ್ಟು ಹೋಗಿವೆ.ರಸ್ತೆಯ ಮೇಲೆ ದಿನಕ್ಕೆ ಮರಳು ತುಂಬಿದ ನೂರಾರು ಲಾರಿಗಳು ಓಡಾಡಿದರೆ ರಸ್ತೆಗಳು ಕುಲಗೆಡದೆ ಇರಲು ಸಾಧ್ಯವೆ..?
ಕೆಳೂರು,ಮಳಲೂರು ಕಮ್ಮರಡಿ,ಮಾಳೂರು, ತೂದೂರು. ಬೆಜ್ಜವಳ್ಳಿ,ಮಂಡಗದ್ದೆ,ನಾಲೂರು,ಬಸವಾನಿ,ಆರಗ,ಕಟ್ಟೆಹಕ್ಲು,ಕುಡುಮಲ್ಲಿಗೆ.ಕುರುವಳ್ಳಿ, ತೀರ್ಥಹಳ್ಳಿ ಪಟ್ಟಣದ ಅಜು-ಬಾಜು ಮತ್ತು ತುಂಗೆಯ ತಟದ ಹತ್ತಾರು ಗ್ರಾಮದಲ್ಲಿ ಅಕ್ರಮ ಮರಳು ದಂಧೆ ನಿರಂತರವಾಗಿ ಎಗ್ಗಿಲ್ಲದೆ ನೆಡೆಯುತ್ತಿದೆ.ಈ ದಂಧೆಯಲ್ಲಿ ಯಾರು ಯಾರಿದ್ದಾರೆ.? ಗಣಿ ಇಲಾಖೆಯ ಪಾಲೇಷ್ಟು.? ಪೋಲಿಸ್ ಇಲಾಖೆಯ ಕಥೆ ಏನು.! ಇನ್ನೂ ಪತ್ರಕರ್ತರ ಈ ದಂಧೆಯ ಬೆನ್ನಿಗೆ ಇದ್ದಾರ.!? ಎಲ್ಲವನ್ನೂ ಭಾಗ ಎರಡರಲ್ಲಿ ನಿರೀಕ್ಷಿಸಿ ಅದರಲ್ಲೂ ಈ ಅಕ್ರಮ ಮರಳು ದಂಧೆಯ ಖದೀಮರು ಯಾರು.? ಇವರ ಬೆನ್ನಿಗೆ ನಿಂತ ರಾಜಕಾರಣಿಗಳು ಯಾರು.? ಎನ್ನುವುದನ್ನು ನಿಮ್ಮ ಮುಂದಿಡಲಿದ್ದೇನೆ.
ಈ ಅಕ್ರಮ ಮರಳು ಲೂಟಿಯನ್ನು ನಿಲ್ಲಿಸುವಂತೆ ನಾಗರಿಕರು, ರೈತರು ಆಗಾಗ ಕೂಗು ಹಾಕುತ್ತಲೇ ಬಂದಿದ್ದಾರೆ. ಅವರ ಕೂಗು ಕೇವಲ ಮನವಿಗಷ್ಟೇ ಸೀಮಿತವಾಗಿದೆ. ಮರಳು ಲೂಟಿ ನಡೆಯುವ ಎಲ್ಲಾ ಗ್ರಾಮಗಳಲ್ಲೂ ಬಿಹಾರದಿಂದ ಬಂದ ಕೂಲಿ ಕಾರ್ಮಿಕರದ್ದೇ ಆರ್ಭಟ. ಸುಮಾರು ಒಂದೂವರೆ ಸಾವಿರ ಕಾರ್ಮಿಕರು ತಾಲ್ಲೂಕಿನ ಹಳ್ಳಿ ಹಳ್ಳಿಗಳಲ್ಲಿ ಬೇರು ಬಿಟ್ಟಿದ್ದಾರೆ. ಇಲ್ಲಿನ ನೈಸರ್ಗಿಕ ಸಂಪತ್ತಾದ ಮರಳನ್ನು ಲೂಟಿ ಮಾಡಿ ಲಾರಿಗಳಿಗೆ ತುಂಬುವುದಕ್ಕೆಂದೆ ಬಿಹಾರಿಗಳನ್ನು ನೆಮಿಸಿಕೊಂಡಿರುವ ಮರಳುಗಳ್ಳರು, ಅವರಿಗೆ ಮರಳು ಗೆಬರುವ ಟ್ರೈನಿಂಗ್ ಕೊಟ್ಟಿದ್ದಾರೆ.ಇನ್ನೂ ನೂರಾರು ಜೆಸಿಬಿಗಳು ಹಳ್ಳಕೊಳ್ಳಗಳ ಮರಳನ್ನು ರಾತ್ರಿಹಗಲೆನ್ನದೆ ಬಾಚಿ ಬಾಚಿ ಟಿಪ್ಪರ್ಗಳಿಗೆ ಲೋಡ್ ಮಾಡುತ್ತಿವೆ.ಇನ್ನೂ ಶಿವಮೊಗ್ಗ ಜಿಲ್ಲೆಯಾದ್ಯಂತ ಅಜ್ಞಾತ ಸ್ಥಳಗಳಲ್ಲಿ ಸಾವಿರಾರು ಲೋಡ್ ಅಕ್ರಮ ಮರಳು ಶೇಖರಣೆಯಾಗಿದೆ. ನದಿಯ ದಡದಲ್ಲೂ ನೂರಾರು ಲೋಡ್ ಮರಳನ್ನು ಸಂಗ್ರಹಿಸಿ ಲಾರಿಗಳಿಗೆ ತುಂಬುತ್ತಾರೆ. ಈ ಅಕ್ರಮ ಮರಳು ದಂಧೆಯಿಂದ ತಿಂಗಳಿಗೆ ಕೋಟಿ ಕೋಟಿ ಹಣ ಸರ್ಕಾರಕ್ಕೆ ಲಾಸ್ ಆಗುತ್ತಿದ್ದು.ತೀರ್ಥಹಳ್ಳಿ ತಾಲ್ಲೂಕಿನ ಸರ್ಕಾರಿ ಸ್ವಾಧೀನದ ಮರಳು ಕೊರೆಗಳು ಯಜಮಾನನಿಲ್ಲದೆ ಲೂಟಿಯಾಗುತ್ತಿದೆ.
ನಿರೀಕ್ಷಿಸಿ ಭಾಗ – 02,

