ಅಪ್ಪ ಸ್ವಾರಿ.50 ಬಾರಿ ಸರ್ಕಾರಿ ಕೆಲಸಕ್ಕೆ ಪ್ರಯತ್ನ ಪಟ್ಟರು ಸಿಗಲಿಲ್ಲ.!ಬಿ.ಟೆಕ್ ಗೋಲ್ಡ್ ಮೆಡಲಿಸ್ಟ್ ಆತ್ಮಹತ್ಯೆಗೆ ಶರಣು.!
news.ashwasurya.in
ಮೃತನ ಹಿರಿಯ ಸಹೋದರನ ಮದುವೆ ನಿಶ್ಚಯಿಸಲು ಕುಟುಂಬಸ್ಥರು ತೆರಳಿದ್ದಾಗ ಮನೆಯಲ್ಲಿ ಆತ್ಮಹತ್ಯೆಗೆ ಶರಣಾದ ಯುವಕ..
ಅಶ್ವಸೂರ್ಯ/ಲಕ್ನೋ : ಉತ್ತರ ಪ್ರದೇಶದ ಕಾನ್ಪುರದಲ್ಲಿ ಬಿ.ಟೆಕ್ ಗೋಲ್ಡ್ ಮೆಡಲಿಸ್ಟ್ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ. ಹಲವು ಪ್ರಯತ್ನಗಳ ನಂತರವೂ ಸರ್ಕಾರಿ ಕೆಲಸ ಸಿಗಲಿಲ್ಲವೆಂದು ನೊಂದ ಯುವಕ ಡೆತ್‌ನೋಟ್ ಬರೆದಿಟ್ಟು ತಂದೆಗೆ ಕ್ಷಮೆಯಾಚಿಸಿ ಸಾವಿನೆಡೆಗೆ ಹೆಜ್ಜೆಹಾಕಿದ್ದಾನೆ.
ಮೃತನನ್ನು ಆನಂದ್ ಕುಮಾರ್ (23) ಎಂದು ಗುರುತಿಸಲಾಗಿದೆ. 2024ರಲ್ಲಿ ಕಾನ್ಪುರದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಟೆಕ್ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಉತ್ತರ ಪ್ರದೇಶಕ್ಕೆ ಮೂರನೇ ರ‍್ಯಾಂಕ್ ಪಡೆದಿದ್ದನಂತೆ. ಅಲ್ಲದೇ ಕಾಲೇಜಿನ ಸಮಾರಂಭದಲ್ಲಿ ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರಿಂದ ಚಿನ್ನದ ಪದಕ ಪಡೆದಿದ್ದ ಎಂದು ತಿಳಿದುಬಂದಿದೆ.

ಯುವಕ ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ. ಮೃತನ ಹಿರಿಯ ಸಹೋದರನ ಮದುವೆ ನಿಶ್ಚಯಿಸಲು ಕುಟುಂಬಸ್ಥರೆಲ್ಲರು ತಮ್ಮ ಸ್ವಂತ ಊರು ಬಿಹಾರಕ್ಕೆ ತೆರಳಿದ್ದರು. ಈ ವೇಳೆ ಕೆಲಸದಾಕೆ ಬಂದು ಮನೆ ಬಾಗಿಲು ತಟ್ಟಿದರೂ ಆನಂದ್ ತೆರೆಯದಿದ್ದಾಗ, ಅವರು ನೆರೆಹೊರೆಯವರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಪೊಲೀಸರು ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಜೊತೆಗೆ ಆತ್ಮಹತ್ಯೆ ಮಾಡಿಕೊಂಡ ಕೊಠಡಿಯಲ್ಲಿ ಐದು ಸಾಲುಗಳಲ್ಲಿ ಬರೆದಿರುವ ಡೆತ್‌ನೋಟ್ ಪತ್ತೆಯಾಗಿದೆ.
📝 ಡೆತ್‌ನೋಟ್ ಪತ್ತೆ :
ಅಪ್ಪ ಸ್ವಾರಿ..ನಾನು ಸರ್ಕಾರಿ ಕೆಲಸಕ್ಕಾಗಿ ಸುಮಾರು 50 ಬಾರಿ ಪ್ರಯತ್ನಿಸಿದೆ, ಆದರೆ ನನಗೆ ಯಶಸ್ಸು ಸಿಗಲಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಇಂಗ್ಲಿಷ್‌ನಲ್ಲಿ ಬರೆದಿದ್ದಾನೆ.
ಈ ಕುರಿತು ಮೃತ ಆನಂದ್ ತಂದೆ ರಾಜಕುಮಾರ್ ಮಾತನಾಡಿ, ಮಗ ಪದವಿ ಮುಗಿಸಿದ ನಂತರ ಒಂದು ವರ್ಷದ ಅಪ್ರೆಂಟಿಸ್‌ಶಿಪ್ ಪೂರ್ಣಗೊಳಿಸಿದ್ದ. ಬಳಿಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ. ಅವನು ರೈಲ್ವೆ, ಎಸ್‌ಎಸ್‌ಸಿ, ಬ್ಯಾಂಕುಗಳು ಮತ್ತು ಶಿಕ್ಷಣ ಇಲಾಖೆ ನಡೆಸಿದ ನೇಮಕಾತಿ ಪರೀಕ್ಷೆಗಳಿಗೆ ಪರೀಕ್ಷೆ ಬರೆದಿದ್ದ. ಆದರೆ ಎಲ್ಲಿಯೂ ಯಶಸ್ಸು ಸಿಗಲಿಲ್ಲ. ಇದರಿಂದಾಗಿ ಕಳೆದ ಕೆಲವು ತಿಂಗಳುಗಳಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಎಂದು ತಿಳಿಸಿದ್ದಾರೆ.


