ಶಿವಮೊಗ್ಗ :7ನೇ ತರಗತಿ ದಾಖಲಾತಿಗೆ 10,000 ಲಂಚ ಸ್ವೀಕಾರ.! ಧನದಾಹಿ ಪ್ರಾಂಶುಪಾಲ ಲೋಕಾಯುಕ್ತರ ಖೆಡ್ಡಕ್ಕೆ.!
news.ashwasurya.in
ಬಾಲಕಿಯೊಬ್ಬಳನ್ನು ವಸತಿ ಶಾಲೆಯ 7ನೇ ತರಗತಿಗೆ ಸೇರಿಸಿಕೊಳ್ಳಲು ಪೋಷಕರಿಂದ ಪ್ರಾಂಶುಪಾಲ 20 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ ಮೊದಲ ಕಂತಿನ ರೂಪದಲ್ಲಿ 10 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳಿಗೆ ಪ್ರಾಂಶುಪಾಲ ಸಿಕ್ಕಿಬಿದ್ದಿದ್ದಾರೆ.
7ನೇ ತರಗತಿ ದಾಖಲಾತಿಗೆ ಲಂಚ ಸ್ವೀಕರಿಸಿದ ಪ್ರಾಂಶುಪಾಲ ಲೋಕಾಯುಕ್ತ ಬಲೆಗೆ…
ಅಶ್ವಸೂರ್ಯ/ಶಿವಮೊಗ್ಗ : ವಸತಿ ಶಾಲೆಯಲ್ಲಿ 7ನೇ ತರಗತಿಗೆ ವಿದ್ಯಾರ್ಥಿನಿಯೊಬ್ಬಳ ದಾಖಲಾತಿಗಾಗಿ ಪೋಷಕರಿಂದ ಲಂಚದ ಹಣ ಪಡೆಯುತ್ತಿದ್ದ ಪ್ರಾಂಶುಪಾಲ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಸೋಮವಾರ ನಡೆದಿದೆ. ಭದ್ರಾವತಿ ತಾಲೂಕಿನ ಹುಣಸೆಕಟ್ಟೆಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ನಾಮದೇವ ಎಂಬುವವರು ಭ್ರಷ್ಟಾಚಾರ ನಿಗ್ರಹ ದಳದ ಜಾಲಕ್ಕೆ ಸಿಕ್ಕಿಬಿದ್ದಿದ್ದಾನೆ.
ಬಾಲಕಿಯೊಬ್ಬಳನ್ನು ಶಾಲೆಯ 7ನೇ ತರಗತಿಗೆ ಸೇರಿಸಿಕೊಳ್ಳಲು ಪ್ರಾಂಶುಪಾಲ ನಾಮದೇವ ಅವರು ಪೋಷಕರಿಂದ 20 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಶಾಲೆಗೆ ಡ್ರಮ್ ಸೆಟ್ ಖರೀದಿಸಬೇಕಿದೆ ಎಂಬ ನೆಪವೊಡ್ಡಿ ಈ ಹಣವನ್ನು ಕೇಳಲಾಗಿತ್ತು ಎನ್ನಲಾಗಿದೆ. ಪ್ರಾಂಶುಪಾಲರ ಈ ನಡವಳಿಕೆಯಿಂದ ಬೇಸತ್ತ ವಿದ್ಯಾರ್ಥಿನಿಯ ಪೋಷಕರು ಈ ಕುರಿತು ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು.

ದೂರಿನ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಲೋಕಾಯುಕ್ತ ಅಧಿಕಾರಿಗಳು, 10 ಸಾವಿರ ರೂಪಾಯಿ ಲಂಚದ ಹಣ ಸ್ವೀಕರಿಸುತ್ತಿದ್ದ ಸಂದರ್ಭದಲ್ಲೇ ದಾಳಿ ನಡೆಸಿ ಆರೋಪಿ ನಾಮದೇವ ಅವರನ್ನು ವಶಕ್ಕೆ ಪಡೆದಿದ್ದಾರೆ.
ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ. ಚಂದ್ರಶೇಖರ್ ಹಾಗೂ ಇನ್ಸ್ಪೆಕ್ಟರ್ ರುದ್ರೇಶ್ ಅವರ ನೇತೃತ್ವದ ವಿಶೇಷ ತಂಡ ಈ ಯಶಸ್ವಿ ಕಾರ್ಯಾಚರಣೆಯನ್ನು ನಡೆಸಿದೆ. ಸದ್ಯ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.


