Headlines

ಬೆಂಗಳೂರು : ಕೌಂಟರ್‌ನಿಂದ ಮೊಬೈಲ್‌ಗೆ ಸಾರಿಗೆ ಸೇವೆಗೆ ಡಿಜಿಟಲ್ ಸ್ಪರ್ಶ.! ಕೆಎಸ್‌ಆರ್‌ಟಿಸಿ ಸೇವೆ ಪ್ರಯಾಣಿಕರ ಕೈಬೆರಳ ತುದಿಗೆ.

ಸಾರಿಗೆ ಸೇವೆ ಪಡೆಯಲು ಇನ್ನು ಮುಂದೆ ಕೌಂಟರ್‌ಗೆ ತೆರಳಿ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಕ್ರಮೇಣ ಕಡಿಮೆಯಾಗುತ್ತಿದೆ. ಮೊಬೈಲ್‌ನಲ್ಲೇ ಟಿಕೆಟ್ ಬುಕ್ ಮಾಡುವುದು, ಪಾವತಿ ಮಾಡುವುದು, ಇ-ಟಿಕೆಟ್ ಪಡೆಯುವುದು, ಅಗತ್ಯವಿದ್ದರೆ ಟಿಕೆಟ್ ರದ್ದುಪಡಿಸುವುದು – ಇವೆಲ್ಲವೂ ಡಿಜಿಟಲ್ ಮೂಲಕವೇ ಸಾಧ್ಯವಾಗುತ್ತಿದೆ.
“ಸಾರಿಗೆ ಸೇವೆ ಜನರ ಬಳಿಗೆ ಹೋಗುವುದಲ್ಲ… ಈಗ ಸಾರಿಗೆ ಸೇವೆಯೇ ಜನರ ಮೊಬೈಲ್‌ಗೆ ಬರುತ್ತಿದೆ.” ಎಂಬ ಹೊಸ ಪರಿಕಲ್ಪನೆಯೊಂದಿಗೆ ಕರ್ನಾಟಕವು ಸಾರ್ವಜನಿಕ ಸಾರಿಗೆಯನ್ನು ಮತ್ತಷ್ಟು ಸರಳ ಮತ್ತು ಪ್ರಯಾಣಿಕ ಸ್ನೇಹಿಯಾಗಿಸುವತ್ತ ಹೆಜ್ಜೆ ಇಡುತ್ತಿದೆ.
ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ವಾಟ್ಸ್‌ಆ್ಯಪ್ ಆಧಾರಿತ ಮುಂಗಡ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯನ್ನು ಪರಿಚಯಿಸುತ್ತಿದೆ. ಜನರು ಪ್ರತಿದಿನ ಬಳಸುವ ವಾಟ್ಸ್‌ಆ್ಯಪ್ ವೇದಿಕೆಯಲ್ಲೇ ಬಸ್ ಟಿಕೆಟ್ ಕಾಯ್ದಿರಿಸುವ ಅವಕಾಶ ದೊರೆಯುವುದರಿಂದ, ಸಾರ್ವಜನಿಕ ಸಾರಿಗೆ ಸೇವೆ ಮತ್ತಷ್ಟು ಸುಲಭವಾಗಿ ಜನರ ಕೈಗೆ ತಲುಪಲಿದೆ.

ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಸಮಗ್ರಗೊಳಿಸುವ ಉದ್ದೇಶದಿಂದ ‘ಒಂದು ಕರ್ನಾಟಕ ಮೊಬಿಲಿಟಿ ಆಪ್’ ಅಭಿವೃದ್ಧಿಪಡಿಸಲಾಗಿದೆ. ಈ ವೇದಿಕೆಯಲ್ಲಿ ರಾಜ್ಯದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯೂಕೆಆರ್‌ಟಿಸಿ), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ) ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಈ ನಾಲ್ಕು ಪ್ರಮುಖ ಸಾರಿಗೆ ಸಂಸ್ಥೆಗಳನ್ನು ಒಗ್ಗೂಡಿಸುವ ವ್ಯವಸ್ಥೆ ರೂಪಿಸಲಾಗಿದೆ.
2026ರ ಸೆಪ್ಟೆಂಬರ್ 10ರಂದು ವಿಧಾನಸೌಧದಲ್ಲಿ ನಡೆದ ಸರ್ಕಾರದ 100 ದಿನಗಳ ಕಾರ್ಯಕ್ರಮದ ಅಂಗವಾಗಿ ನವೀಕೃತ ‘ಒಂದು ಕರ್ನಾಟಕ ಮೊಬಿಲಿಟಿ ಆಪ್’ ಹಾಗೂ ವಾಟ್ಸ್‌ಆ್ಯಪ್ ಮೂಲಕ ಟಿಕೆಟ್ ಬುಕ್ಕಿಂಗ್ ಸೌಲಭ್ಯವನ್ನು ಲೋಕಾರ್ಪಣೆಗೊಳಿಸಲಾಯಿತು.

ಟಿಕೆಟ್ ಬುಕ್ಕಿಂಗ್ ಸಂದರ್ಭದಲ್ಲಿ UPI, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಹಾಗೂ ವಾಲೆಟ್ ಸೇರಿದಂತೆ ವಿವಿಧ ಡಿಜಿಟಲ್ ಪಾವತಿ ವಿಧಾನಗಳನ್ನು ಬಳಸಬಹುದು.
ಪಾವತಿ ಯಶಸ್ವಿಯಾದ ನಂತರ ಬುಕ್ಕಿಂಗ್ ದೃಢೀಕರಣ ಮತ್ತು ಇ-ಟಿಕೆಟ್‌ ಅನ್ನು ವಾಟ್ಸ್‌ಆ್ಯಪ್ ಹಾಗೂ ಇ-ಮೇಲ್ ಮೂಲಕ ಪ್ರಯಾಣಿಕರಿಗೆ ಕಳುಹಿಸಲಾಗುತ್ತದೆ. ಹೀಗಾಗಿ ಕಾಗದದ ಟಿಕೆಟ್‌ನ್ನು ಪ್ರತ್ಯೇಕವಾಗಿ ತೆಗೆದುಕೊಂಡು ಹೋಗುವ ಅಗತ್ಯವೂ ಇರುವುದಿಲ್ಲ.

ವಾಟ್ಸ್‌ಆ್ಯಪ್ ಮೂಲಕ ಮಾಡಲಾದ ಎಲ್ಲಾ ಬುಕ್ಕಿಂಗ್‌ಗಳನ್ನು ಪ್ರತ್ಯೇಕವಾಗಿ “WhatsApp Booking” ಎಂದು ಗುರುತಿಸಲಾಗುತ್ತದೆ.
ಈ ಬುಕ್ಕಿಂಗ್‌ಗಳ ಮಾಹಿತಿಯನ್ನು Mode-wise Booking Report, Trip Sheet ಹಾಗೂ Track Ticket ವರದಿಗಳಲ್ಲಿಯೂ ಪ್ರತ್ಯೇಕವಾಗಿ ಪ್ರದರ್ಶಿಸುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಟಿಕೆಟ್ ಬುಕ್ಕಿಂಗ್ ಮತ್ತು ಬಸ್ ಕಾರ್ಯಾಚರಣೆಗೆ ಸಂಬಂಧಿಸಿದ ಮಾಹಿತಿಯನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಅನುಕೂಲವಾಗಲಿದೆ.

ಸಾರ್ವಜನಿಕ ಸಾರಿಗೆಯ ಡಿಜಿಟಲೀಕರಣವು ಟಿಕೆಟ್ ಬುಕ್ಕಿಂಗ್‌ನಲ್ಲೇ ನಿಲ್ಲುವುದಿಲ್ಲ. ಮುಂದಿನ ಹಂತದಲ್ಲಿ ಡಿಜಿಟಲ್ ಮಾಸಿಕ ಬಸ್ ಪಾಸ್ ವ್ಯವಸ್ಥೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ.
ಆನ್‌ಲೈನ್‌ನಲ್ಲಿಯೇ ಬಸ್ ಪಾಸ್ ಬುಕ್ಕಿಂಗ್, ವಿತರಣೆ ಮತ್ತು ನಿರ್ವಹಣೆ ಮಾಡುವ ವ್ಯವಸ್ಥೆ ರೂಪುಗೊಳ್ಳಲಿದ್ದು, QR ಕೋಡ್ ಆಧಾರಿತ ಡಿಜಿಟಲ್ ಪರಿಶೀಲನೆಗೂ ಅವಕಾಶ ಕಲ್ಪಿಸುವ ಉದ್ದೇಶವಿದೆ.

ವಿಶೇಷ ಲೇಖನ:
-ಭಾಗ್ಯ ಎಂ.
ಮುಖ್ಯ ವರದಿಗಾರರು
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ
ಬೆಂಗಳೂರು.

Leave a Reply

Your email address will not be published. Required fields are marked *

Optimized by Optimole
error: Content is protected !!