ವಿಶ್ವದ ಅಗ್ರಮಾನ್ಯ ಬೌಲರ್ಗಳನ್ನು ಭಯವಿಲ್ಲದೆ ದಂಡಿಸುವುದು ಸಾಮಾನ್ಯ ವಿಷಯವಲ್ಲ: “ವಂಡರ್ ಕಿಡ್” ವೈಭವ್ ಸೂರ್ಯವಂಶಿಗೆ ರಶೀದ್ ಮೆಚ್ಚುಗೆ.
ಭಾರತೀಯ ಕ್ರಿಕೆಟ್ನ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರು ಆಕ್ರಮಣಕಾರಿ ಆಟದಿಂದಲೇ ದಿಗ್ಗಜರ ಗಮನ ಸೆಳೆದಿದ್ದಾರೆ. ಇದೀಗ ಅಪ್ಘಾನಿಸ್ತಾನ ತಂಡದ ಅನುಭವಿ ಸ್ಪಿನ್ನರ್ ರಶೀದ್ ಖಾನ್ ಅವರು, ‘ವಂಡರ್ ಕಿಡ್’ ವೈಭವ್ ಸೂರ್ಯವಂಶಿಯನ್ನು ಮುಕ್ತಕಂಠದಿಂದ ಹೊಗಳಿದ್ದಾರೆ…
news.ashwasurya.in
ಅಶ್ವಸೂರ್ಯ/ಅಫ್ಘಾನಿಸ್ತಾನ : ಅಫ್ಘಾನಿಸ್ತಾನ ತಂಡದ ಅನುಭವಿ ಸ್ಪಿನ್ನರ್ ರಶೀದ್ ಖಾನ್ ಅವರು ಭಾರತದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರ ಅದ್ಭುತ ಪ್ರತಿಭೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. 15 ವರ್ಷದ ಯುವ ಆಟಗಾರ ವೈಭವ್ ಅವರನ್ನು ‘ದೇವರು ಕೊಟ್ಟ ಅಪರೂಪದ ಪ್ರತಿಭೆ’ ಎಂದು ಬಣ್ಣಿಸಿರುವ ರಶೀದ್, ಇಷ್ಟು ಸಣ್ಣ ವಯಸ್ಸಿನಲ್ಲಿ ಅವರು ಪ್ರದರ್ಶಿಸುತ್ತಿರುವ ಕ್ರಿಕೆಟ್ ಕೌಶಲ್ಯ ಹಾಗೂ ಆಟದ ಶೈಲಿಯನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ವೈಭವ್ ಹೊಗಳಿದ ಅಫ್ಘಾನ್ ಸ್ಟಾರ್ ಕ್ರಿಕೆಟರ್
ಭಾರತ ಹಾಗೂ ಅಫ್ಘಾನಿಸ್ತಾನ ಟಿ20 ಸರಣಿಯ ನಡುವೆ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ರಶೀದ್ ಖಾನ್ ಅವರು, ಭಾರತದ ಯುವ ಆಟಗಾರರ ಪ್ರದರ್ಶನವನ್ನು ಹತ್ತಿರದಿಂದ ಗಮನಿಸಿರುವುದಾಗಿ ತಿಳಿಸಿದರು. ವಿಶೇಷವಾಗಿ ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ವೈಖರಿಯನ್ನು ಶ್ಲಾಘಿಸಿದ ಅವರು, ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಅನುಭವಿ ಬೌಲರ್ಗಳು ಹಾಗೂ ಬಲಿಷ್ಠ ತಂಡಗಳ ವಿರುದ್ಧ ಯಾವುದೇ ಭಯವಿಲ್ಲದೆ ಸಿಕ್ಸರ್ಗಳನ್ನು ಬಾರಿಸುವ ಸಾಮರ್ಥ್ಯ ಪ್ರತಿಯೊಬ್ಬ ಆಟಗಾರನಿಗೂ ಇರುವುದಿಲ್ಲ ಎಂದು ಹೇಳಿದ್ದಾರೆ.
‘ಚಿಕ್ಕ ವಯಸ್ಸಿನಲ್ಲೇ ಅದ್ಭುತ ಪವರ್ ಹಿಟ್ಟಿಂಗ್’
ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಕೌಶಲ್ಯದ ಬಗ್ಗೆ ಮಾತನಾಡಿದ ರಶೀದ್ ಖಾನ್, ‘ಅವರಲ್ಲಿರುವ ಪವರ್ ಹಿಟ್ಟಿಂಗ್ ಸಾಮರ್ಥ್ಯ ಅತ್ಯಂತ ವಿಶೇಷವಾದದ್ದು. ಇಷ್ಟು ಚಿಕ್ಕ ವಯಸ್ಸಿನಲ್ಲಿ ವಿಶ್ವಪ್ರಸಿದ್ಧ ಬೌಲರ್ಗಳ ವಿರುದ್ಧ ಯಾವುದೇ ಭಯವಿಲ್ಲದೆ ಸಿಕ್ಸರ್ ಬಾರಿಸುವುದು ಎಂದರೆ ಸಾಮಾನ್ಯ ವಿಷಯವಲ್ಲ. ಸದಾ ರನ್ ಗಳಿಸುವ ಸ್ಪಷ್ಟ ಉದ್ದೇಶ ಅವರಲ್ಲಿದ್ದು, ಇಂತಹ ಆಟಗಾರರನ್ನು ನಿಯಂತ್ರಿಸುವುದು ಬೌಲರ್ಗಳಿಗೆ ಸವಾಲಿನ ಕೆಲಸ,’ ಎಂದು ಹೇಳಿದ್ದಾರೆ.

ಅಭಿಷೇಕ್ ಶರ್ಮಾ ಬಗ್ಗೆ ರಶೀದ್ ಹೇಳಿದ್ದೇನು?
ಅಷ್ಟೇ ಅಲ್ಲದೆ, ‘ನನಗೆ 15 ವರ್ಷ ವಯಸ್ಸಿದ್ದಾಗ ನಾನು ಖಂಡಿತವಾಗಿಯೂ ಇಷ್ಟು ಪ್ರತಿಭಾವಂತ ಅಥವಾ ಇಷ್ಟೊಂದು ಕೌಶಲ್ಯ ಹೊಂದಿದ್ದ ಆಟಗಾರನಾಗಿರಲಿಲ್ಲ,’ ಎಂದು ರಶೀದ್ ಖಾನ್ ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ. ಇದೇ ವೇಳೆ ಭಾರತದ ಮತ್ತೊಬ್ಬ ಯುವ ಕ್ರಿಕೆಟಿಗ ಅಭಿಷೇಕ್ ಶರ್ಮಾ ಅವರ ಬಗ್ಗೆಯೂ ಮೆಚ್ಚುಗೆಯ ಮಾತನಾಡಿದರು.
ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದಾಗ ಅವರೊಂದಿಗೆ ಕಳೆದ ದಿನಗಳನ್ನು ನೆನಪಿಸಿಕೊಂಡ ಅವರು, ಅಭಿಷೇಕ್ ಕೇವಲ ಅಪಾಯಕಾರಿ ಬ್ಯಾಟರ್ ಮಾತ್ರವಲ್ಲದೆ ಅತ್ಯುತ್ತಮ ಬೌಲಿಂಗ್ ಆಯ್ಕೆಯಾಗಿದ್ದು, ಭವಿಷ್ಯದಲ್ಲಿ ಟೀಮ್ ಇಂಡಿಯಾಗೆ ದೊಡ್ಡ ಆಸ್ತಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.

ಪ್ರಸ್ತುತ ಭಾರತೀಯ ಕ್ರಿಕೆಟ್ ತಂಡದಲ್ಲಿ ಅನೇಕ ಯುವ ಆಟಗಾರರು ಸಾಲಾಗಿ ಅವಕಾಶ ಪಡೆಯುತ್ತಿದ್ದು, ಪ್ರತಿಯೊಬ್ಬರೂ ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಯಾವುದೇ ಒತ್ತಡವಿಲ್ಲದೆ ನಿರ್ಭಯವಾಗಿ ಆಡುವ ಭಾರತೀಯ ತಂಡದ ಶೈಲಿಯೇ ಅವರನ್ನು ಇತರ ತಂಡಗಳಿಗಿಂತ ಭಿನ್ನವಾಗಿಸುತ್ತಿದೆ ಎಂದು ಅಫಘಾನಿಸ್ತಾನ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ವಂಡರ್ ಕಿಡ್ ವೈಭವ್ ಸೂರ್ಯವಂಶಿ ಅವರನ್ನು ರಶೀದ್ ಅವರು ಮುಕ್ತಕಂಠದಿಂದ ಶ್ಲಾಘಿಸಿರುವುದು ಇದೀಗ ಎಲ್ಲೆಡೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.


