ಬಂಟ್ವಾಳ ಮರ್ಡರ್ ಪ್ರಕರಣ : ಬಂಟ್ವಾಳದಲ್ಲಿ
ಹೆಚ್ಚುವರಿ ಪೊಲೀಸ್ ಅಧೀಕ್ಷಕರಿಗೆ ಉಳಿ ಗ್ರಾಮಸ್ಥರಿಂದ ಮನವಿ.

news.ashwasurya.in
ಅಶ್ವಸೂರ್ಯ/ಬಂಟ್ವಾಳ : ಉಳಿ ಗ್ರಾಮದ ನಿವಾಸಿ ಲಾವಣ್ಯ ಅವರನ್ನು ಜುಲೈ 16ರಂದು ಸಂಜೆ ಬಿ.ಸಿ.ರೋಡ್ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಭೀಕರವಾಗಿ ಹತ್ಯೆ ಮಾಡಿದ ತಪ್ಪಿತಸ್ಥನಿಗೆ ನ್ಯಾಯಾಲಯ ಕಾನೂನಿನ ಪ್ರಕಾರ ಗಲ್ಲು ಶಿಕ್ಷೆ ವಿಧಿಸಲು ಅಗತ್ಯವಿರುವ ಎಲ್ಲ ಕಾನೂನು ಕ್ರಮಗಳನ್ನು ಪೊಲೀಸ್ ಇಲಾಖೆ ಕೈಗೊಳ್ಳುವಂತೆ ಉಳಿ ಗ್ರಾಮಸ್ಥರು ಪೊಲೀಸರಿಗೆ ಮನವಿ ಮಾಡಿದ್ದಾರೆ.

ಭಾನುವಾರ ಕಕ್ಯಪದವಿನಿಂದ ಬಂಟ್ವಾಳ ಡಿವೈಎಸ್ಪಿ ಕಚೇರಿಗೆ ಆಗಮಿಸಿದ ಗ್ರಾಮದ ಜನರು, ದಕ್ಷಿಣ ಕನ್ನಡ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರೆಡ್ಡಿ ಅವರನ್ನು ಭೇಟಿಯಾದರು.
ನಮ್ಮ ಗ್ರಾಮದ ಅಮಾಯಕ ಹೆಣ್ಣು ಮಗಳು ಲಾವಣ್ಯ ಕಕ್ಯಪದವು ಅವರ ಹತ್ಯೆ ನಡೆದಿರುವುದು ಇಡೀ ಸಮಾಜವನ್ನು ತೀವ್ರ ದುಃಖ , ಆಘಾತ ಮತ್ತು ಆತಂಕಕ್ಕೆ ಒಳಪಡಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚೇತನ್ ಎಂಬ ಆರೋಪಿಯನ್ನು ಬಂಧಿಸಿರುವ ಪೊಲೀಸ್ ಇಲಾಖೆಯ ಕಾರ್ಯವನ್ನು ನಾವು ಸ್ವಾಗತಿಸುತ್ತೇವೆ. ಪ್ರಕರಣದ ತನಿಖೆಯನ್ನು ಸಂಪೂರ್ಣ ನಿಷ್ಪಕ್ಷಪಾತವಾಗಿ ಹಾಗೂ ಶೀಘ್ರವಾಗಿ ಪೂರ್ಣಗೊಳಿಸಿ, ಎಲ್ಲ ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ನ್ಯಾಯಾಲಯಕ್ಕೆ ಬಲವಾದ ದೋಷಾರೋಪಣಾ ಪತ್ರ ಸಲ್ಲಿಸುವಂತೆ ವಿನಂತಿಸಿದ ಗ್ರಾಮಸ್ಥರು, ತಪ್ಪಿತಸ್ಥನಿಗೆ ಗಲ್ಲು ಶಿಕ್ಷೆ ವಿಧಿಸಿದರೆ, ಲಾವಣ್ಯ ಕುಟುಂಬಕ್ಕೆ ನ್ಯಾಯ ದೊರಕುವುದರ ಜೊತೆಗೆ ಸಮಾಜದಲ್ಲಿ ಇಂಥ ಭೀಕರ ಅಪರಾಧಗಳಿಗೆ ತಡೆ ಉಂಟಾಗುತ್ತದೆ ಎಂದು ಊರವರು ತಿಳಿಸಿದರು.
ಈ ಸಂದರ್ಭ ಮನವಿ ಸ್ವೀಕರಿಸಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರೆಡ್ಡಿ ಅವರು, ಪೊಲೀಸ್ ಇಲಾಖೆ ಸಂತ್ರಸ್ತರ ಕುಟುಂಬದ ಜೊತೆಗಿದ್ದು, ಆರೋಪಿಗೆ ಕಠಿಣ ಶಿಕ್ಷೆ ದೊರಕುವಂತೆ ಎಲ್ಲಾ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.ನೆರೆದಿದ್ದ ನೂರಾರು ಗ್ರಾಮಸ್ಥರ ಮುಖದಲ್ಲಿ ನಿರವಮೌನ ಅವರಿಸಿತ್ತು.ಮುದ್ದಾದ ಗ್ರಾಮದ ಹೆಣ್ಣು ಮಗಳ ಹತ್ಯೆಯನ್ನು ಇನ್ನೂ ಅರಗಿಸಿ ಕೊಳ್ಳಲಾಗದೆ ಗ್ರಾಮಸ್ಥರು ದಿನ ಕಳೆಯುತ್ತಿದ್ದಾರೆ.

