
ನವದೆಹಲಿ : ನಾಳೆ ಡಿ.ಕೆ. ಶಿವಕುಮಾರ್ ಸಿಎಂ ಆಗಿ ಪ್ರಮಾಣ ವಚನ: ಹೈಕಮಾಂಡ್ನಿಂದ 11 ಸಚಿವರ ಪಟ್ಟಿಗೆ ಅಂತಿಮ ಮುದ್ರೆ! ಇಲ್ಲಿದೆ ಪಟ್ಟಿ.!
news.ashwasurya.in
ಅಶ್ವಸೂರ್ಯ/ನವದೆಹಲಿ : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಅವರೊಂದಿಗೆ 11ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಹೈಕಮಾಂಡ್ ಅನುಮೋದಿಸಿದ ಈ ಪಟ್ಟಿಯಲ್ಲಿ ಹಿರಿಯರು, ಯುವಕರು, ಜಾತಿ ಮತ್ತು ಪ್ರಾದೇಶಿಕ ಸಮತೋಲನವನ್ನು ಕಾಯ್ದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ನಾಳೆ (ಜೂನ್ 3) ಸಂಜೆ 4:05ಕ್ಕೆ ಬೆಂಗಳೂರಿನ ಲೋಕಭವನದಲ್ಲಿ ನಡೆಯಲಿರುವ ಅದ್ಧೂರಿ ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷದ ಜನಪ್ರಿಯ ನಾಯಕ ಡಿ ಕೆ ಶಿವಕುಮಾರ್ ಕರ್ನಾಟಕ ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕೇವಲ ಮುಖ್ಯಮಂತ್ರಿ ಮಾತ್ರವಲ್ಲದೆ, ಅವರೊಂದಿಗೆ ಸಚಿವ ಸಂಪುಟ ಸೇರಲಿರುವ 11 ಶಾಸಕರ ಪಟ್ಟಿಗೂ ಕಾಂಗ್ರೆಸ್ ಹೈಕಮಾಂಡ್ ಹಸಿರು ನಿಶಾನೆ ನೀಡಿ ಅಂತಿಮ ಮುದ್ರೆ ಒತ್ತಿದೆ.! ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಜಂಟಿಯಾಗಿ ಸಿದ್ಧಪಡಿಸಿ ನೀಡಿದ್ದ ಸಂಭವನೀಯ ಸಚಿವರ ಪಟ್ಟಿಯನ್ನು ಪರಿಶೀಲಿಸಿದ ಹೈಕಮಾಂಡ್, ಅಂತಿಮವಾಗಿ ‘1+11’ ಸೂತ್ರಕ್ಕೆ ಅಂತಿಮವಾಗಿ ಮೊಹರು ಒತ್ತಿ ಕಳುಹಿಸಿ ಕೊಟ್ಟಿದ್ದಾರೆ.

ಸಚಿವ ಸಂಪುಟ ಸೇರಲಿರುವ 11 ಶಾಸಕರು ಸಂಭವನೀಯ ಪಟ್ಟಿ ಇಲ್ಲಿದೆ. ಹೈಕಮಾಂಡ್ ಅಂತಿಮಗೊಳಿಸಿರುವ ಪಟ್ಟಿಯಲ್ಲಿ ಹಿರಿಯರು ಮತ್ತು ಯುವ ನಾಯಕರಲ್ಲಿ ಸಮತೋಲನ ಕಂಡುಬಂದಿದೆ.
ಸಂಭಾವ್ಯ ಸಚಿವರ ಪಟ್ಟಿ ಹೀಗಿದೆ:
ಜಿ. ಪರಮೇಶ್ವರ್: ಹಿರಿಯ ನಾಯಕ ಮತ್ತು ಅನುಭವದ ಆಧಾರದಲ್ಲಿ ಸಂಪುಟ ಸೇರ್ಪಡೆ.

ಸತೀಶ್ ಜಾರಕಿಹೊಳಿ: ಬೆಳಗಾವಿ ಭಾಗದ ಪ್ರಭಾವಿ ನಾಯಕ.

ಎಂ.ಬಿ. ಪಾಟೀಲ್: ಲಿಂಗಾಯತ ಸಮುದಾಯದ ಪ್ರಮುಖ,ಸಚಿವ ಸಂಪುಟಕ್ಕೆ.

ಈಶ್ವರ್ ಖಂಡ್ರೆ: ಪಕ್ಷದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು.

ರಾಮಲಿಂಗ ರೆಡ್ಡಿ: ಬೆಂಗಳೂರು ನಗರದ ಹಿರಿಯ ನಾಯಕ.

ಕೆ.ಜೆ. ಜಾರ್ಜ್: ಅನುಭವಿ ನಾಯಕ ಮತ್ತು ಹೈಕಮಾಂಡ್ ಆಪ್ತರು.

ಪ್ರಿಯಾಂಕ್ ಖರ್ಗೆ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಹಾಗೂ ಯುವ ನಾಯಕ.

ಯತೀಂದ್ರ ಸಿದ್ದರಾಮಯ್ಯ: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ, ಹೊಸ ಮುಖ ಯುವ ನಾಯಕ.

ಶಿವರಾಜ ತಂಗಡಗಿ: ಹಿಂದುಳಿದ ವರ್ಗದ ಪ್ರಬಲ ನಾಯಕ.

ರೂಪಾ ಶಶಿಧರ್: ಮಹಿಳಾ ಪ್ರತಿನಿಧಿಯಾಗಿ ಸಂಪುಟದಲ್ಲಿ ಸ್ಥಾನ.

ಯು.ಟಿ. ಖಾದರ್: ಕರಾವಳಿ ಭಾಗದ ಪ್ರಮುಖ ಅಲ್ಪಸಂಖ್ಯಾತ ನಾಯಕ.

ಜಾತಿ ಮತ್ತು ಪ್ರಾದೇಶಿಕ ಸಮತೋಲನ:
ಈ ಬಾರಿ ಸಚಿವರ ಆಯ್ಕೆಯಲ್ಲಿ ಹೈಕಮಾಂಡ್ ಬಹಳ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ. ಹಳೆಯ ಮೈಸೂರು ಭಾಗ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಮತ್ತು ಬೆಂಗಳೂರು ನಗರಕ್ಕೆ ಸಮಾನ ಆದ್ಯತೆ ನೀಡಲಾಗಿದೆ. ಜೊತೆಗೆ ದಲಿತ, ಲಿಂಗಾಯತ, ಅಲ್ಪಸಂಖ್ಯಾತ ಮತ್ತು ಮಹಿಳಾ ಕೋಟಾವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ನಾಳೆ ಮಧ್ಯಾಹ್ನದಿಂದಲೇ ಲೋಕಭವನದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಈಗಾಗಲೇ ಸರ್ಕಾರಿ ಸಿಬ್ಬಂದಿಗೆ ರಜೆ ಘೋಷಿಸಲಾಗಿದ್ದು, ಪ್ರಮಾಣ ವಚನ ಸಮಾರಂಭಕ್ಕೆ ಲಕ್ಷಾಂತರ ಕಾರ್ಯಕರ್ತರು ಬರುವ ನಿರೀಕ್ಷೆಯಿದೆ. ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಈ ನೂತನ ಸರ್ಕಾರ ರಾಜ್ಯದ ಅಭಿವೃದ್ಧಿಯಲ್ಲಿ ಹೊಸ ಮನ್ವಂತರ ಬರೆಯಲಿದೆಯೇ ಎಂದು ಕಾದು ನೋಡಬೇಕಿದೆ.ಎಲ್ಲದಕ್ಕೂ ಕಾಲವೆ ಉತ್ತರಿಸಲಿದೆ…
*************************************
ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಆಯ್ಕೆಯಾಗಿರುವ ಶ್ರೀ ಡಿ.ಕೆ. ಶಿವಕುಮಾರ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ ಕಾಂಗ್ರೆಸ್ ಪಕ್ಷದ ಜನಪ್ರಿಯ ಮುಖಂಡರಾದ ಎಂ ಶ್ರೀಕಾಂತ್.




