
ಬೆಂಗಳೂರು : ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಕನಕಪುರದ ಬಂಡೆ ಡಿಕೆ ಶಿವಕುಮಾರ್.


news.ashwasurya.in
ಅಶ್ವಸೂರ್ಯ/ಬೆಂಗಳೂರು : ಡಿ.ಕೆ. ಶಿವಕುಮಾರ್ (D.K. Shivakumar) ಅವರು ಕರ್ನಾಟಕ ರಾಜಕಾರಣದ ಅತ್ಯಂತ ಪ್ರಭಾವಶಾಲಿ ನಾಯಕ ಹಾಗೂ ಪ್ರಸ್ತುತ ಕರ್ನಾಟಕದ ಮುಖ್ಯಮಂತ್ರಿ. ಕನಕಪುರದ ಸಾಮಾನ್ಯ ಕೃಷಿ ಕುಟುಂಬದಿಂದ ಆರಂಭವಾದ ಇವರ ಪಯಣ, ಇಂದು ರಾಜ್ಯದ ಅತ್ಯುನ್ನತ ಹುದ್ದೆಯವರೆಗೆ ತಲುಪಿದೆ. ಕಠಿಣ ಪರಿಶ್ರಮ, ಹಠ, ಮತ್ತು ಸಂಘಟನಾ ಚಾತುರ್ಯದಿಂದಾಗಿ ಇವರನ್ನು ರಾಜಕೀಯದಲ್ಲಿ ‘ಕನಕಪುರ ಬಂಡೆ’ ಮತ್ತು ಕಾಂಗ್ರೆಸ್ ಪಕ್ಷದ ‘ಟ್ರಬಲ್ ಶೂಟರ್’ ಎಂದೇ ಕರೆಯಲಾಗುತ್ತದೆ.ಡಿ.ಕೆ. ಶಿವಕುಮಾರ್ ಅವರು ನಡೆದು ಬಂದ ಸುದೀರ್ಘ ಹಾಗೂ ರೋಚಕ ರಾಜಕೀಯ ಹಾದಿಯ ಸಂಕ್ಷಿಪ್ತ ಪರಿಚಯ ಇಲ್ಲಿದೆ.

ಆರಂಭಿಕ ಜೀವನ ಮತ್ತು ಹಿನ್ನೆಲೆ
ಜನನ: 15 ಮೇ 1962 ರಂದು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿ ಗ್ರಾಮದಲ್ಲಿ ಜನಿಸಿದರು.ಪೋಷಕರು ಕೆಂಪೇಗೌಡ ಮತ್ತು ಗೌರಮ್ಮ ದಂಪತಿಯ ಹಿರಿಯ ಮಗ. ಇವರ ಸಹೋದರ ಡಿ.ಕೆ. ಸುರೇಶ್ ಕೂಡ ಮಾಜಿ ಸಂಸದರಾಗಿದ್ದು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.ಡಿಕೆ ಶಿಕ್ಷಣವನ್ನು ಬೆಂಗಳೂರಿನ ಜಗದ್ಗುರು ರೇಣುಕಾಚಾರ್ಯ ಕಾಲೇಜಿನಲ್ಲಿ ಬಿ.ಎ. ಪದವಿ ಮತ್ತು ಮೈಸೂರಿನ ಮುಕ್ತ ವಿಶ್ವವಿದ್ಯಾಲಯದಲ್ಲಿ (KSOU) ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ (ಎಂ.ಎ) ಪದವಿ ಪಡೆದಿದ್ದಾರೆ.

ವಿದ್ಯಾರ್ಥಿ ದೆಸೆಯಿಂದಲೆ ರಾಜಕೀಯ ಪ್ರವೇಶ NSUI ನಾಯಕತ್ವ ಕಾಲೇಜು ದಿನಗಳಲ್ಲೇ ಕಾಂಗ್ರೆಸ್ ವಿದ್ಯಾರ್ಥಿ ಘಟಕವಾದ NSUI ಮೂಲಕ ರಾಜಕೀಯ ಪ್ರವೇಶಿಸಿದರು.ಮೊದಲ ಚುನಾವಣಾ ಹೋರಾಟ (1985): ಕೇವಲ 23ನೇ ವಯಸ್ಸಿನಲ್ಲಿ ಸಾತನೂರು ಕ್ಷೇತ್ರದಲ್ಲಿ ಜನತಾದಳದ ಪ್ರಭಾವಿ ನಾಯಕ ಹೆಚ್.ಡಿ. ದೇವೇಗೌಡರ ವಿರುದ್ಧ ಸ್ಪರ್ಧಿಸಿ ಅತ್ಯಲ್ಪ ಮತಗಳಿಂದ ಸೋತರೂ, ರಾಜ್ಯದ ಗಮನ ಸೆಳೆದರು. 1987ರಲ್ಲಿ ಸಾತನೂರು ಕ್ಷೇತ್ರದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಮೊದಲ ಚುನಾವಣಾ ಗೆಲುವು ದಾಖಲಿಸಿದ್ದರು.
ಶಾಸಕನಾಗಿ 1989ರ ಮೊದಲ ಗೆಲುವು ಹೆಜ್ಜೆ ಇಟ್ಟಿದ್ದರು, 1989ರಲ್ಲಿ ಸಾತನೂರು ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಎಸ್. ಬಂಗಾರಪ್ಪನವರ ಸರ್ಕಾರದಲ್ಲಿ ಅತಿ ಕಿರಿಯ ವಯಸ್ಸಿನಲ್ಲೇ (29ನೇ ವಯಸ್ಸಿಗೆ) ಬಂದಿಖಾನೆ ಸಚಿವರಾಗಿ ಕಾರ್ಯ ನಿರ್ವಹಿಸಿದರು.

ನಂತರ ಎಸ್.ಎಂ. ಕೃಷ್ಣ ಸಂಪುಟದಲ್ಲಿ ಸಹಕಾರ ಮತ್ತು ನಗರಾಭಿವೃದ್ಧಿ ಸಚಿವರಾಗಿ ಪ್ರಮುಖ ಜವಾಬ್ದಾರಿ ನಿಭಾಯಿಸಿದರು.ನಿರಂತರ ಗೆಲುವಿನ ದಾಖಲೆ ಡಿಕೆ ಹೆಸರಿನಲ್ಲಿದೆ, 1989 ರಿಂದ ಸಾತನೂರು ಹಾಗೂ 2008 ರಿಂದ ಕನಕಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಇವರು, ಸತತ 8 ಚುನಾವಣೆಗಳಲ್ಲಿ ಸೋಲನ್ನೇ ಕಾಣದೆ ಅಜೇಯರಾಗಿ ಉಳಿದಿದ್ದಾರೆ.

ರಾಷ್ಟ್ರೀಯ ಮಟ್ಟದಲ್ಲಿ ‘ಟ್ರಬಲ್ ಶೂಟರ್’ಎಂದೆ ಖ್ಯಾತಿ ಪಡೆದಿದ್ದಾರೆ.! ಕಾಂಗ್ರೆಸ್ ಹೈಕಮಾಂಡ್ ಸಂಕಷ್ಟದಲ್ಲಿದ್ದಾಗಲೆಲ್ಲಾ ಆಪತ್ಬಾಂಧವರಾಗಿ ನಿಂತು ಕಾಂಗ್ರೆಸ್ ಪಕ್ಷಕ್ಕಾಗಿ ಹೆಗಲು ಕೊಟ್ಟಿದ್ದಾರೆ. 2002ರಲ್ಲಿ ಮಹಾರಾಷ್ಟ್ರ ಬಿಕ್ಕಟ್ಟು ಆರಂಭವಾಗಿತ್ತು ಆಗ ಡಿಕೆ ಶಿವಕುಮಾರ್ ಅವರು ವಿಲಾಸರಾವ್ ದೇಶಮುಖ್ ಸರ್ಕಾರವನ್ನು ಉಳಿಸಲು ಮಹಾರಾಷ್ಟ್ರದ ಶಾಸಕರನ್ನು ಬೆಂಗಳೂರಿಗೆ ಕರೆತಂದು ರೆಸಾರ್ಟ್ನಲ್ಲಿ ಸುರಕ್ಷಿತವಾಗಿರಿಸಿದ್ದರು.
2017ರಲ್ಲಿ ಅಹ್ಮದ್ ಪಟೇಲ್ ಚುನಾವಣೆಯಲ್ಲಿ ಗೆಲ್ಲಿಸಲು ಗುಜರಾತ್ನ 42 ಕಾಂಗ್ರೆಸ್ ಶಾಸಕರನ್ನು ತಡೆದು ನಿಲ್ಲಿಸಿ, ಅಹ್ಮದ್ ಪಟೇಲ್ ಅವರ ರಾಜ್ಯಸಭಾ ಗೆಲುವಿಗೆ ಪ್ರಮುಖ ಕಾರಣ ಕರ್ತರಾಗಿದ್ದರು.

2018ರ ಮೈತ್ರಿ ಸರ್ಕಾರ: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ಮತ್ತು ಶಾಸಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು.
ಕಾನೂನು ಹೋರಾಟ ಮತ್ತು ಜೈಲುವಾಸ.! ರಾಜಕೀಯ ಏಳಿಗೆಯ ನಡುವೆಯೇ ಇವರು ಐಟಿ, ಇಡಿ ಮತ್ತು ಸಿಬಿಐ ತನಿಖೆಗಳನ್ನು ಎದುರಿಸಬೇಕಾಯಿತು.ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ 2019 ರಲ್ಲಿ ದೆಹಲಿಯ ತಿಹಾರ್ ಜೈಲಿನಲ್ಲಿ ಕೆಲ ದಿನಗಳ ಕಾಲ ಬಂಧನದಲ್ಲಿದ್ದರು.

ಜೈಲಿನಿಂದ ಬಿಡುಗಡೆಯಾಗಿ ಬಂದಾಗ ಬೆಂಗಳೂರಿನಲ್ಲಿ ಇವರಿಗೆ ಅಭೂತಪೂರ್ವ ಸ್ವಾಗತ ಸಿಕ್ಕಿತ್ತು, ಇದು ಅವರ ರಾಜಕೀಯ ಸಂಕಲ್ಪವನ್ನು ಮತ್ತಷ್ಟು ಗಟ್ಟಿಗೊಳಿಸಿತು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು 2023ರ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ದಿಗ್ವಿಜಯ ಸಾಧಿಸಿತ್ತು.
2020ರಲ್ಲಿ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.ಪಕ್ಷದ ಪುನಶ್ಚೇತನಕ್ಕಾಗಿ ಹಗಲಿರುಳು ದುಡಿದರು. ಇಡೀ ರಾಜ್ಯಾದ್ಯಂತ ಪ್ರವಾಸ ಮಾಡಿ, ‘ಮೇಕೆದಾಟು ಪಾದಯಾತ್ರೆ’ ಮತ್ತು ‘ಪ್ರಜಾಧ್ವನಿ ಯಾತ್ರೆ’ಗಳ ಮೂಲಕ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿದರು.

ಇವರ ಸಂಘಟನಾ ಚಾತುರ್ಯದಿಂದಾಗಿ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 135 ಸ್ಥಾನಗಳನ್ನು ಗೆದ್ದು ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತು.ಇಂದು ಉಪ ಮುಖ್ಯಮಂತ್ರಿ ಸ್ಥಾನದಿಂದ ಮುಖ್ಯಮಂತ್ರಿ ಗಾದಿಯವರೆಗೆ ಹೆಜ್ಜೆ ಹಾಕಿದ್ದಾರೆ ಡಿಕೆ ಶಿವಕುಮಾರ್ ಅವರು. ಮೇ 20, 2023 ರಂದು ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಏಕೈಕ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಜೊತೆಗೆ ಜಲಸಂಪನ್ಮೂಲ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಿದರು.

ಡಿಕೆ ಶಿವಕುಮಾರ್ ಅವರು ಸುಧೀರ್ಘ ರಾಜಕಾರಣದಲ್ಲಿ ಏಳುಬಿಳುಗಳ ನಡುವೆ ದೃಢವಾದ ಹೆಜ್ಜೆಹಾಕಿ ಛಲಬಿಡದೆ ಇಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಕಾಂಗ್ರೆಸ್ ಪಕ್ಷದ ಆಂತರಿಕ ಅಧಿಕಾರ ಹಂಚಿಕೆ ಒಪ್ಪಂದದಂತೆ, ಸಿದ್ದರಾಮಯ್ಯ ಅವರು ಸ್ಥಾನ ತೆರವುಗೊಳಿಸಿದ ನಂತರ, ಜೂನ್ 3, 2026 ರಂದು ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.ಕನಕಪುರದ ಮಣ್ಣಿನ ಮಗನಾಗಿ, ಕೃಷಿ ಹಿನ್ನೆಲೆಯಿಂದ ಬಂದು, ರಾಜಕೀಯದ ಸಕಲ ಏಳುಬೀಳುಗಳನ್ನು ಸವೆಸಿ, ಸಂಯಮ ಮತ್ತು ಛಲದಿಂದ ರಾಜ್ಯದ ಅತ್ಯುನ್ನತ ಮುಖ್ಯಮಂತ್ರಿ ಸ್ಥಾನಕ್ಕೇರಿರುವುದು ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಪಯಣದ ಮಹತ್ತರ ಸಾಧನೆಯಾಗಿದೆ.

