ಶೃಂಗೇರಿ: ನೂತನ ಶಾಸಕರಾಗಿ ಡಿ.ಎನ್. ಜೀವರಾಜ್ ಆಯ್ಕೆ.! ಪ್ರಮಾಣಪತ್ರ ಹಸ್ತಾಂತರ.
news.ashwasurya.in
ಅಶ್ವಸೂರ್ಯ/ಶೃಂಗೇರಿ : ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಡಿ.ಎನ್. ಜೀವರಾಜ್ ಅವರಿಗೆ ಚುನಾವಣಾಧಿಕಾರಿ ಗೌತಮ್ ಕುಮಾರ್ ಶೆಟ್ಟಿ ಅವರು ಸೋಮವಾರ ಅಧಿಕೃತವಾಗಿ ಶಾಸಕ ಸ್ಥಾನ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು.
ಶನಿವಾರ ನಡೆದ ಅಂಚೆ ಮತಗಳ ಮರುಎಣಿಕೆ ಪ್ರಕ್ರಿಯೆಯಲ್ಲಿ ಅಂತಿಮವಾಗಿ ಡಿ.ಎನ್. ಜೀವರಾಜ್ ಅವರು ಟಿ.ಡಿ. ರಾಜೇಗೌಡಗಿಂತ 52 ಮತಗಳ ಅಂತರದಿಂದ ಬಹುಮತ ಪಡೆದಿದ್ದರು. ಆದರೆ, ಅಂದು ಅಧಿಕೃತ ಘೋಷಣೆ ಮಾಡಲಾಗಿರಲಿಲ್ಲ. ಹೈಕೋರ್ಟ್ಗೆ ಮರುಎಣಿಕೆಯ ವರದಿ ಸಲ್ಲಿಸುವುದಾಗಿ ಚುನಾವಣಾಧಿಕಾರಿಗಳು ತಿಳಿಸಿದ್ದರು.
ರವಿವಾರ ತಡರಾತ್ರಿ ಚುನಾವಣಾಧಿಕಾರಿಗಳು ಡಿ.ಎನ್. ಜೀವರಾಜ್ ಅವರಿಗೆ ಅಧಿಕೃತ ಘೋಷಣಾ ಪತ್ರವನ್ನು ಇಮೇಲ್ ಮೂಲಕ ಕಳುಹಿಸಿದ್ದರು. ಸೋಮವಾರ ಬೆಳಿಗ್ಗೆ ಚುನಾವಣಾಧಿಕಾರಿಗಳು ಅವರಿಗೆ ಶಾಸಕರಾಗಿ ಆಯ್ಕೆಯಾಗಿರುವ ಪ್ರಮಾಣಪತ್ರವನ್ನು ನೀಡಿದರು.

ಐದರಿಂದ ನಾಲ್ಕಕ್ಕೆ ಇಳಿದ ಶಾಸಕರ ಸಂಖ್ಯೆ:
2023ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ಬಿಜೆಪಿಯನ್ನು ಕ್ಲೀನ್ಸ್ವೀಪ್ ಮಾಡಿ ಐದು ಕ್ಷೇತ್ರಗಳಲ್ಲೂ ಜಯ ಸಾಧಿಸಿತ್ತು. ಚಿಕ್ಕಮಗಳೂರು ಕ್ಷೇತ್ರದಿಂದ ಎಚ್.ಡಿ. ತಮ್ಮಯ್ಯ, ಮೂಡಿಗೆರೆ ಕ್ಷೇತ್ರದಿಂದ ನಯನ ಮೋಟಮ್ಮ, ಶೃಂಗೇರಿ ಕ್ಷೇತ್ರದಿಂದ ಟಿ.ಡಿ. ರಾಜೇಗೌಡ, ಕಡೂರು ಕ್ಷೇತ್ರದಿಂದ ಕೆ.ಎಸ್. ಆನಂದ್ ಹಾಗೂ ತರೀಕೆರೆ ಕ್ಷೇತ್ರದಿಂದ ಜಿ.ಎಚ್. ಶ್ರೀನಿವಾಸ್ ಅವರು ಆಯ್ಕೆಯಾಗಿದ್ದರು.
ಐದು ಕ್ಷೇತ್ರಗಳಲ್ಲಿ ಸಂಪೂರ್ಣ ಸೋಲು ಅನುಭವಿಸಿದ್ದ ಬಿಜೆಪಿ ಮುಖಭಂಗಕ್ಕೆ ಒಳಗಾಗಿತ್ತು. ಆದರೆ, ಡಿ.ಎನ್. ಜೀವರಾಜ್ ಅವರ ಮೂರು ವರ್ಷದ ಕಾನೂನು ಹೋರಾಟದ ಫಲವಾಗಿ ಶೃಂಗೇರಿ ಕ್ಷೇತ್ರದ ಶಾಸಕ ಸ್ಥಾನವನ್ನು ಕಾಂಗ್ರೆಸ್ ಪಕ್ಷ ಕಳೆದುಕೊಂಡಿದ್ದು, ಐದು ಕ್ಷೇತ್ರಗಳಲ್ಲಿ ನಾಲ್ಕು ಕ್ಷೇತ್ರಗಳಿಗೆ ಕಾಂಗ್ರೆಸ್ ಪಕ್ಷ ಕುಸಿದಿದೆ.


