
ಶಿವಮೊಗ್ಗ : ಜಿಲ್ಲಾಧಿಕಾರಿಗಳ ಸೂಚನೆಯಂತೆ ತೀರ್ಥಹಳ್ಳಿ ಕೊಪ್ಪರಿಗೆಗುಡ್ಡ ಪ್ರದೇಶಕ್ಕೆ ಅಧಿಕಾರಿಗಳ ತಂಡ ಭೇಟಿ.! ದೊಡ್ಡ ಭೂ ಹಗರಣಕ್ಕೆ ಬ್ರೇಕ್ ಬಿಳೋತ್ತಾ.!
news.ashwasurya.in
ಅಶ್ವಸೂರ್ಯ/ತೀರ್ಥಹಳ್ಳಿ : ಶಿವಮೊಗ್ಗ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತೀರ್ಥಹಳ್ಳಿ ತಾಲ್ಲೂಕಿನ ಕೊಪ್ಪರಿಗೆಗುಡ್ಡ ಪ್ರದೇಶಕ್ಕೆ ಕಳೆದ ಸೋಮವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳನ್ನು ಗಮನಿಸಿದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಗುಡ್ಡಪ್ರದೇಶಕ್ಕೆ ತಕ್ಷಣ ಭೇಟಿ ನೀಡಿ ಪರಿಶೀಲಿಸಿ ಸಮಗ್ರ ವರದಿ ಸಲ್ಲಿಸುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿಗೆ ಸೂಚನೆ ನೀಡಿದ್ದರು.ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಇಲಾಖೆ ಕಿರಿಯ ಭೂವಿಜ್ಞಾನಿ ಪ್ರಿಯಾ, ತಾಂತ್ರಿಕ ವಿಭಾಗದ ಅಧಿಕಾರಿ ಮನು, ಕಸಬಾ ಹೋಬಳಿ ಆರ್ಐ ಸುಧಿರ್, ಗ್ರಾಮ ಆಡಳಿತಾಧಿಕಾರಿ ಲೋಕೇಶ್ ಭೇಟಿ ನೀಡಿ, ಪೂರ್ಣ ಮಾಹಿತಿ ಸಂಗ್ರಹಿಸಿದ್ದಾರೆ.

ಸರಕಾರಿ, ಖಾಸಗಿ ಪ್ರದೇಶದ ಕುರಿತು ದಾಖಲೆ ನಕ್ಷೆ ಸಮೇತ ವರದಿ ಸಲ್ಲಿಸುವಂತೆ ಕಂದಾಯ ಇಲಾಖೆಯನ್ನು ಈ ಸಂಧರ್ಭದಲ್ಲಿ ಗಣಿ ಮತ್ತು
ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕೋರಿದರು. ನಿಯಮ ಮೀರಿ ಗುಡ್ಡವನ್ನು ಅಗೆದು ಮಣ್ಣು ಸಂಗ್ರಹಿಸಿ ಸಮತಟ್ಟು ಮಾಡಿರುವುದು, ಇದಕ್ಕೆ ಸರಕಾರಿ ಪ್ರದೇಶವನ್ನು ಬಳಸಿಕೊಂಡಿರುವುದು, ಖಾಸಗಿ ಪ್ರದೇಶದ ಬಳಕೆ ಸಂಬಂಧ ಕಾನೂನು ಬಾಹಿರ ಚಟುವಟಿಕೆಯನ್ನು ಆರಂಭದಲ್ಲಿ ಪರಿಶೀಲನೆ ತಂಡದ ಅಧಿ ಕಾರಿಗಳು ಗುರುತಿಸಿದ್ದಾರೆ. ಪೂರ್ಣ ಮಾಹಿತಿ ಸಂಗ್ರಹಿಸಿ ವರದಿ ಸಿದ್ಧಪಡಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಲು ಅಧಿಕಾರಿಗಳ ತಂಡ ಮುಂದಾಗಿದೆ.ಒಟ್ಟಿನಲ್ಲಿ ದೊಡ್ಡ ಭೂ ಹಗರಣಕ್ಕೆ ಬ್ರೇಕ್ ಬಿಳುವ ಎಲ್ಲಾ ಸಧ್ಯಾತೆ ಇದ್ದು ಅಧಿಕಾರಿಗಳ ವರದಿ ಪರಿಶೀಲಿಸಿದ ನಂತರ ಜಿಲ್ಲಾಧಿಕಾರಿಗಳ ಮುಂದಿನ ಕ್ರಮವೇನು ಎನ್ನುವುದನ್ನು ಕಾದು.ನೋಡಬೇಕಿದೆ ನಾವು ಕೂಡ ಈ ಭೂ ಹಗರಣದ ಸಂಪೂರ್ಣ ಮಾಹಿತಿ ಕಲೆಹಾಕಿ ಒಂದಷ್ಟು ಸಂಪೂರ್ಣ ವರದಿ ಮಾಡಲು ನಮ್ಮ ತಂಡ ಸಿದ್ಧವಾಗಿದೆ..

ಎನಿದು ಪ್ರಕರಣ .?
ಹೊದಲ-ಅರಳಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊಪ್ಪರಿಗೆಗುಡ್ಡದಲ್ಲಿ, ಕುರುಚಲು ಕಾಡುಗಳಿವೆ. ಇಲ್ಲಿ ಜೀವಿಸುತ್ತಿರುವ ಅಳಿವಿನಂಚಿನಲ್ಲಿರುವ ಪ್ರಾಣಿ, ಪಕ್ಷಿಗಳ ವಾಸ ಸ್ಥಾನವಾಗಿವೆ. ಈ ಗುಡ್ಡ ಪ್ರದೇಶದಲ್ಲಿ 2021ರಲ್ಲಿ ಸಾಕಷ್ಟು ಮಳೆಯಾದ ಕಾರಣಕ್ಕೆ ಇಲ್ಲಿ ಭೂಕುಸಿತ ಸಂಭವಿಸಿದ ಪರಿಣಾಮ ಲಕ್ಷ್ಮೀತೀರ್ಥ ಹಳ್ಳದ ಹರಿವು ನಿಂತಿದೆ.
ಯಡೇಹಳ್ಳಿ ಗ್ರಾಮ ವ್ಯಾಪ್ತಿಯ ಕೊಪ್ಪರಿಗೆ ಗುಡ್ಡ ಪ್ರದೇಶದಲ್ಲಿ 10 ಎಕರೆಗೆ ಸದ್ಯ ಲೇಔಟ್ ನಿರ್ಮಾಣಕ್ಕೆ ಅವಕಾಶ ಸಿಕ್ಕಿದೆ. ಅದಕ್ಕೆ ಭಾರೀ ಪ್ರಮಾಣದ ಗುಡ್ಡದ ಮಣ್ಣು ಬಳಕೆಯಾಗಿ ಅಲ್ಲಿ ಭೂಮಿಯ ನಿಜ ಸ್ವರೂಪವೆ ಬದಲಾಗುತ್ತಿದೆ. ಭೂಮಿಯ ನೈಜ ಸ್ಥಿತಿ ಬದಲಿಸಿ ಸಮತಟ್ಟು ಮಾಡುವ ಅಭಿವೃದ್ಧಿಗೆ ಸುತ್ತಮುತ್ತಲ ಸೂಕ್ಷ್ಮ ಪರಿಸರ ನಾಶವಾಗುತ್ತಿದೆ.ಪ್ರಾಣಿ ಪಕ್ಷಿಗಳ ಸಂಕುಲವೆ ನಶಿಸಿ ಹೋಗುತ್ತಿದೆ.!
ತೀರ್ಥಹಳ್ಳಿ ಪಟ್ಟಣದಿಂದ 5 ಕಿ.ಮೀ. ದೂರದಲ್ಲಿರುವ ಈ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದರೆ ಸಮೀಪವೇ ಹರಿಯುವ ಕುಶಾವತಿ ನದಿಯ ದಿಕ್ಕು ಬದಲಾಗಲಿದೆ ಎನ್ನುವ ಕೂಗು ಕೇಳಿಬರುತ್ತಿದೆ. ತೀರ್ಥಹಳ್ಳಿ ಪಟ್ಟಣಕ್ಕೆ ಹೊಂದಿಕೊಂಡಿರುವ ಬೆಟ್ಟಮಕ್ಕಿ, ಚಿಟ್ಟೇಬೈಲು,ಇಂದಾವರ,ಬದನೇಹಿತ್ಲು,ಕಿತ್ತನಗದ್ದೆ, ಮಜರೆ ಗ್ರಾಮದ ಸಾವಿರಾರು ಜನವಸತಿ ಪ್ರದೇಶ ಮತ್ತು ಸಾಗುವಳಿ ಪ್ರದೇಶ ನದಿ ಪಾಲಾಗಲಿರುವ ಸಾಧ್ಯತೆ ಇದ್ದು ಮಳೆಗಾಲದಲ್ಲಿ ಗುಡ್ಡದ ಮೇಲೆ ಸುರಿಯುವ ಮಳೆನೀರನ್ನು ಗಡ್ಡವನ್ನು ಹಾಸು ಹೊಕ್ಕಿರುವ ಏಕಜಾತಿಯ ಹುಲ್ಲು, ಗಿಡಗಳು ಗುಡ್ಡವನ್ನು ಕಾಪಡಿಕೊಳ್ಳುತ್ತಿದ್ದು ಇದರಿಂದ ಸುತ್ತಮುತ್ತಲ ಸುಮಾರು ಹತ್ತಾರು ಕಿಲೊಮೀಟರ್ ವ್ಯಾಪ್ತಿಯಲ್ಲಿ ಸದಾಕಾಲ ನೀರು ಜಿನುಗಲು ಅನುಕೂಲಕರ ವಾತಾವರಣವನ್ನು ಕಲ್ಪಿಸಿದೆ. ನೂರಾರು ಪ್ರಾಣಿ, ಪಕ್ಷಿಗಳಿಗೆ ಗುಡ್ಡವೇ ಜೀವಸೆಲೆಯಾಗಿದೆ.

ಯಡೇಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಅಂದಾಜು 30 ರಿಂದ 35 ಎಕರೆ ಪ್ರದೇಶದಲ್ಲಿ ಲೇಔಟ್ ನಿರ್ಮಾಣಕ್ಕೆ ಬಳಕೆಯಾಗುತ್ತಿದೆ. ದೀರ್ಘಕಾಲದ ಅನುಭವ ಹೊಂದಿರುವ ಆಧಾರದ ಮೇಲೆ ಆರ್ಆರ್ 5 ಮತ್ತು ಆರ್ಆರ್ 6 (ಹಕ್ಕುಗಳ ದಾಖಲೆ) ಖಾಸಗಿ ವ್ಯಕ್ತಿಗಳ ಅನುಭವಕ್ಕೆ ನೀಡಲಾಗಿದೆ. ಕರ್ನಾಟಕ ಭೂ ಕಂದಾಯ ನಿಯಮದನ್ವಯ ಇಂತಹ ದಾಖಲೆಯ ಭೂ ಪ್ರದೇಶದ ಪರಭಾರೆ, ಭೂ ಪರಿವರ್ತನೆಗೆ ಅವಕಾಶ ಇಲ್ಲ. ಆದರೆ ಈ ಪ್ರದೇಶವನ್ನು ಪರಭಾರೆ ಮಾಡಿ ಲೇಔಟ್ ಪ್ರದೇಶ ನಿರ್ಮಾಣಕ್ಕಾಗಿ ಅವಕಾಶ ನೀಡಿರುವ ಹಿಂದೆ ಅಧಿಕಾರಿಗಳು ಭೂ ಮಾಫಿಯಾ ಜೊತೆ ಕೈಜೋಡಿಸಿದ್ದಾರೆ. ಕೇವಲ 10 ಎಕರೆಗೆ ಮಾತ್ರ ಲೇಔಟ್ ನಿರ್ಮಾಣಕ್ಕೆ ಅವಕಾಶ ಲಭಿಸಿದ್ದು, ಸ್ಥಳದಲ್ಲಿ 34 ಎಕರೆಗೂ ಹೆಚ್ಚು ಪ್ರದೇಶದ ಭೂಸ್ವರೂಪ ಬದಲಾವಣೆ ಆಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬರುತ್ತಿದೆ…
ನಾವು ಕೂಡ ಈ ಪ್ರದೇಶದ ಸಂಪೂರ್ಣ ಮಾಹಿತಿ ಮತ್ತು ದಾಖಲೆಗಳನ್ನು ಕಲೆಹಾಕುತ್ತಿದ್ದು ಮುಂದಿನ ದಿನಗಳಲ್ಲಿ ಸಮಗ್ರ ವರದಿ ಮಾಡಲು ಮುಂದಾಗಿದ್ದೇವೆ…


