ಕೋಝಿಕೋಡ್ ಡ್ರಗ್ಸ್ ಪ್ರಕರಣ : ಮತ್ತೊಬ್ಬರು ಶಿಕ್ಷಕಿಬಂಧನ.!ಮಂಗಳೂರಿನ ಸ್ನೇಹಿತನಿಂದ ಡ್ರಗ್ಸ್ ದಂಧೆಗೆ ಕೈಇಟ್ಟ ಶಿಕ್ಷಕಿಯರು.!
news.ashwasurya.in
ಅಶ್ವಸೂರ್ಯ/ ಕೋಝಿಕೋಡ್, ಜುಲೈ,29 : ಕೇರಳದ ಕೋಝಿಕೋಡ್ ಗ್ರಾಮೀಣ ಪೊಲೀಸರ ವಿಶೇಷ ತನಿಖಾ ತಂಡ (SIT) ನಡೆಸುತ್ತಿರುವ ಎಂಡಿಎಂಎ (MDMA) ಮಾದಕ ದ್ರವ್ಯ ಜಾಲದ ತನಿಖೆಯಲ್ಲಿ ಮತ್ತೊಂದು ಶಾಕಿಂಗ್ ವಿಷಯ ಬೆಳಕಿಗೆ ಬಂದಿದ್ದು, ಪೆರಂಬ್ರಾ ಬಿಆರ್ಸಿಯ ಮೂರನೇ ವಿಶೇಷ ಶಿಕ್ಷಕಿ ವಿ.ಪಿ. ನೀಶ್ಮಾ (30) ಮಂಗಳವಾರ ಬಂಧನಕ್ಕೊಳಗಾಗಿದ್ದಾರೆ.

ಆಟಿಸಂ ಕೇಂದ್ರದ ವಿಶೇಷ ಶಿಕ್ಷಕಿ ಅವಲಾ ಕುಟ್ಟೋತ್ ಮೂಲದ ವಿ.ಪಿ. ನೀಶ್ಮಾ ಬಂಧನದೊಂದಿಗೆ ಪ್ರಕರಣದಲ್ಲಿ ಸಿಕ್ಕಿಬಿದ್ದ ಶಿಕ್ಷಕಿಯರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ಈ ಹಿಂದೆ ದೈಹಿಕ ಶಿಕ್ಷಣ ಶಿಕ್ಷಕಿ ಕೀರ್ತನಾ ಹಾಗೂ ಕಾವ್ಯಾ ಎಂಬವರನ್ನು ಬಂಧಿಸಿ ಸೇವೆಯಿಂದ ವಜಾಗೊಳಿಸಲಾಗಿತ್ತು. ಈ ಮೂವರೂ ಶಿಕ್ಷಕಿಯರು ನಿರಂತರವಾಗಿ ಮಾದಕ ದ್ರವ್ಯ (MDMA) ಸೇವನೆ ಮಾಡುತ್ತಿದ್ದುದಲ್ಲದೆ, ಇನ್ಸ್ಟಾಗ್ರಾಮ್ ಖಾತೆಗಳ ಮೂಲಕ ಗ್ರಾಹಕರನ್ನು ಸೆಳೆದು ಹೈಟೆಕ್ ದಂಧೆ ನಡೆಸುತ್ತಿದ್ದರು ಎಂದು ವಟಕರ ಇನ್ಸ್ಪೆಕ್ಟರ್ ಎ.ವಿ. ದಿನೇಶ್ ದೃಢಪಡಿಸಿದ್ದಾರೆ.

ಮಾದಕ ದ್ರವ್ಯದ ಜಾಲದ ಕೊಂಡಿ ಗಲ್ಫ್ ದೇಶದ ಸಂಖ್ಯೆಗೆ ಲಿಂಕ್ ಆಗಿದ್ದು, ಗಲ್ಫ್ ಸಂಖ್ಯೆಯ ಮೂಲಕ ವಾಟ್ಸಾಪ್/ಸಂದೇಶ ಕಳುಹಿಸಿ ಬುಕಿಂಗ್ ಮಾಡಲಾಗುತ್ತಿತ್ತು. ಹಣ ಪಾವತಿಗೆ ಕೀರ್ತನಾ ಅವರ ಕ್ಯೂಆರ್ ಕೋಡ್ ಬಳಸಲಾಗುತ್ತಿತ್ತು. ಪಾವತಿಯಾದ ತಕ್ಷಣ ಡ್ರಗ್ಸ್ ಅಡಗಿಸಿಟ್ಟ ಸ್ಥಳದ ಫೋಟೋ ಕಳುಹಿಸಿ ಡೆಲಿವರಿ ನೀಡಲಾಗುತ್ತಿತ್ತು. ಕೀರ್ತನಾ ಖಾತೆಗೆ ₹14 ಲಕ್ಷ ಹಾಗೂ ಕಾವ್ಯಾ ಖಾತೆಗೆ ಕೇವಲ 5 ತಿಂಗಳಲ್ಲಿ ₹9 ಲಕ್ಷ ಜಮೆಯಾಗಿರುವುದು ಪತ್ತೆಯಾಗಿದೆ. ತಿಂಗಳಿಗೆ ಕೇವಲ ₹12,000 ಗುತ್ತಿಗೆ ವೇತನ ಪಡೆಯುತ್ತಿದ್ದ ಈ ಶಿಕ್ಷಕಿಯರಿಗೆ ಮಂಗಳೂರಿನ ಸ್ನೇಹಿತನೊಬ್ಬ ಈ ಜಾಲಕ್ಕೆ ಪರಿಚಯಿಸಿದ್ದ ಎನ್ನಲಾಗಿದ್ದು, ಇವರು ಬೆಂಗಳೂರಿಗೆ ನಡೆಸಿದ ಸರಣಿ ಪ್ರವಾಸ ಹಾಗೂ ಖರೀದಿಸಿದ ಐಷಾರಾಮಿ ಕಾರಿನ ಮೂಲದ ಕುರಿತು ಎಸ್ಐಟಿ ತನಿಖೆ ಚುರುಕುಗೊಳಿಸಿದೆ.


