ಬೆಂಗಳೂರು : ಕೇರಳದ ಉದ್ಯಾಮಿಗಳಿಂದ 20 ಲಕ್ಷ ದರೋಡೆಗೈದ ಬೆಂಗಳೂರು ಸಿಐಡಿ ಇನ್ಸ್ಪೆಕ್ಟರ್ ಕರ್ಮಕಾಂಡ.! ಇದೇನು ಮೊದಲೇನಲ್ಲ!
news.ashwasurya.in
ಅಶ್ವಸೂರ್ಯ/ಬೆಂಗಳೂರು : ಹಣದಾಸೆಗೆ ಇಲಾಖೆಯ ಜೀಪಿನಲ್ಲೇ ತೆರಳಿ ಕೇರಳ ಮೂಲದ ವ್ಯಾಪಾರಿಗೆ ಬೆದರಿಸಿ 20 ಲಕ್ಷ ರೂಪಾಯಿ ಸುಲಿಗೆ ಮಾಡಿದ ಸಿಐಡಿ ಇನ್ಸ್ಪೆಕ್ಟರ್ ಮಹೇಶ್ ಕನಕಗಿರಿ ಮತ್ತು ಇಬ್ಬರು ಸಹಚರರನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದ್ದು, ಸುಲಿಗೆಯ ಸಂಪೂರ್ಣ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಹಣದ ದುರಾಸೆಗೆ ಬಿದ್ದು ಕಾನೂನು ರಕ್ಷಕರೇ ಭಕ್ಷಕರಾಗುತ್ತಿರುವ ಆತಂಕಕಾರಿ ಪ್ರವೃತ್ತಿ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮುಂದುವರಿದಿದ್ದು ಇದು ಅತಂಕ ಮೂಡಿಸಿದೆ.! ಇಲಾಖೆಯ ಅಧಿಕೃತ ಜೀಪಿನಲ್ಲೇ ತೆರಳಿ, ಕೇರಳ ಮೂಲದ ಉದ್ಯಾಮಿಗಳನ್ನು ಪೊಲೀಸ್ ಖದರ್ ನಲ್ಲಿ ಹೆದರಿಸಿ ಅವರಿಂದ 20 ಲಕ್ಷ ರೂಪಾಯಿ ದೊಡ್ಡ ಮೊತ್ತವನ್ನು ಸುಲಿಗೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ತನಿಖಾ ಇಲಾಖೆಯ (ಸಿಐಡಿ) ಇನ್ಸ್ಪೆಕ್ಟರ್ ಹಾಗೂ ಅವರ ಇಬ್ಬರು ಸಹಚರರನ್ನು ಮಡಿವಾಳ ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.
ಸಿಐಡಿ ಇನ್ಸ್ಪೆಕ್ಟರ್ ಮಹೇಶ್ ಕನಕಗಿರಿ ಹಾಗೂ ಆತನಿಗೆ ಬಾತ್ಮಿದಾರರಾಗಿ ಕೆಲಸ ಮಾಡುತ್ತಿದ್ದ ಸ್ನೇಹಿತರಾದ ಕುಪ್ಪೇಂದ್ರ ರೆಡ್ಡಿ ಮತ್ತು ವಸಂತ್ ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಸುಲಿಗೆ ಮಾಡಿದ್ದ ಪೂರ್ತಿ ಹಣವನ್ನು ಮಡಿವಾಳ ಪೊಲೀಸರು ಜಪ್ತಿ ಮಾಡಿದ್ದಾರೆ.

🚨 ದರೋಡೆ ನಡೆದಿದ್ದು ಹೇಗೆ?
ಕೇರಳ ಮೂಲದ ಜನೀಶ್ ಬಾಬು ಎಂಬುವವರಿಗೆ ಅವರ ಸ್ನೇಹಿತ ನವೀನ್ ಎಂಬುವವರು ಷೇರು ಮಾರುಕಟ್ಟೆ ಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದೆಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಟ್ರೇಡಿಂಗ್ ವ್ಯವಹಾರದ ಮಾತುಕತೆಗಾಗಿ ಜೂನ್ 15ರಂದು ಜನೀಶ್ ಬಾಬು ಬೆಂಗಳೂರಿಗೆ ಆಗಮಿಸಿದ್ದರು. ಇವರಿಬ್ಬರೂ ಮಡಿವಾಳದ ‘ವೈಟ್ ಸ್ಟೋನ್ ಲಾಡ್ಜ್’ನಲ್ಲಿ ತಂಗಿದ್ದರು.
ಜನೀಶ್ ಬಾಬು ಅವರು ಹಣದೊಂದಿಗೆ ಲಾಡ್ಜ್ನಲ್ಲಿ ತಂಗಿರುವ ನಿಖರ ಮಾಹಿತಿಯನ್ನು ಕುಪ್ಪೇಂದ್ರ ರೆಡ್ಡಿ ಮತ್ತು ವಸಂತ್ ಕುಮಾರ್ ಇನ್ಸ್ಪೆಕ್ಟರ್ ಮಹೇಶ್ ಕನಕಗಿರಿಗೆ ತಲುಪಿಸಿದ್ದರು. ಈ ಮಾಹಿತಿ ಆಧಾರದ ಮೇಲೆ ಜೂನ್ 15ರಂದೇ ಇಲಾಖೆಯ ಜೀಪಿನಲ್ಲಿ ಲಾಡ್ಜ್ ಮೇಲೆ ದಾಳಿ ನಡೆಸಿದ ಇನ್ಸ್ಪೆಕ್ಟರ್ ಮಹೇಶ್ ತಂಡ, ವ್ಯಾಪಾರಿಗಳಿಗೆ “ನೀವು ಅಕ್ರಮ ಚಟುವಟಿಕೆಯಲ್ಲಿ ತೊಡಗಿರುವ ಬಗ್ಗೆ ಮಾಹಿತಿ ಇದೆ, ತಕ್ಷಣ ನಿಮ್ಮನ್ನು ಬಂಧಿಸುತ್ತೇವೆ” ಎಂದು ತೀವ್ರವಾಗಿ ಬೆದರಿಸಿದ್ದಾರೆ. ಕೇಸ್ ದಾಖಲಿಸದೇ ಬಿಡಲು 20 ಲಕ್ಷ ರೂಪಾಯಿ ಹಣವನ್ನು ಸುಲಿಗೆ ಮಾಡಿ ಅಲ್ಲಿಂದ ಪರಾರಿಯಾಗಿದ್ದರು.

ಸಿಸಿಟಿವಿ ಕ್ಯಾಮೆರಾದಲ್ಲಿ ಬಯಲಾದ ಇನ್ಸ್ಪೆಕ್ಟರ್ ಕಳ್ಳಾಟ
ಸುಲಿಗೆಯಿಂದ ಕಂಗಾಲಾದ ಸಂತ್ರಸ್ತ ಜನೀಶ್ ಬಾಬು ಅವರು ಧೈರ್ಯ ಮಾಡಿ ಮಡಿವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಆಗ್ನೇಯ ವಿಭಾಗದ ಡಿಸಿಪಿ ಮೊಹಮ್ಮದ್ ಸುಜೀತಾ ನೇತೃತ್ವದಲ್ಲಿ ವಿಶೇಷ ತಂಡ ತನಿಖೆಗೆ ಇಳಿಯಿತು. ಘಟನಾ ಸ್ಥಳ ಹಾಗೂ ಸುತ್ತಮುತ್ತಲಿನ ಕಟ್ಟಡಗಳ ಸಿಸಿಟಿವಿ ಕ್ಯಾಮೆರಾಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಸ್ವತಃ ಸಿಐಡಿ ಇನ್ಸ್ಪೆಕ್ಟರ್ ಮಹೇಶ್ ಕನಕಗಿರಿ ಇಲಾಖೆಯ ಜೀಪಿನಲ್ಲೇ ಬಂದು ದರೋಡೆ ನಡೆಸಿರುವುದು ಪತ್ತೆಯಾಗಿದೆ. ಭದ್ರ ಪುರಾವೆಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಡಿಸಿಪಿ ನೇತೃತ್ವದ ತಂಡ, ಶುಕ್ರವಾರದಂದು ಮೂವರೂ ಆರೋಪಿಗಳನ್ನು ಹೆಡೆಮುರಿ ಕಟ್ಟಿದೆ.
ತನ್ನ ಸರ್ವೀಸ್ ಬೆಂಗಳೂರಿನಲ್ಲೇ ಕಳೆದ ಮಹೇಶ್ ಕನಕಗಿರಿ :
ಮುಂಬಡ್ತಿಯ ನಿರೀಕ್ಷೆಯಲ್ಲಿದ್ದ ಮಹೇಶ್ ಕನಕಗಿರಿ ಇಲಾಖೆಯಲ್ಲಿ ಸುದೀರ್ಘ ಕಾಲದಿಂದಲೂ ಪ್ರಭಾವಿಯಾಗಿದ್ದು, ತನ್ನ ಸೇವಾವಧಿಯ ಬಹುಪಾಲು ಸಮಯವನ್ನು ಬೆಂಗಳೂರು ನಗರದಲ್ಲೇ ಕಳೆದಿದ್ದಾರೆ. ಆರಂಭದಲ್ಲಿ ಹಲಸೂರು, ರಾಮಮೂರ್ತಿನಗರ ಹಾಗೂ ಕೆ.ಆರ್.ಪುರ ಠಾಣೆಗಳಲ್ಲಿ ಪಿಎಸ್ಐ (PSI) ಆಗಿ ಕಾರ್ಯನಿರ್ವಹಿಸಿದ್ದ. ನಂತರ ಬಡ್ತಿ ಪಡೆದು ಬಂಡೇಪಾಳ್ಯ ಹಾಗೂ ಸಿಸಿಬಿ (CCB) ಸೇರಿದಂತೆ ನಗರದ ಪ್ರಮುಖ ವಿಭಾಗಗಳಲ್ಲಿ ಇನ್ಸ್ಪೆಕ್ಟರ್ (PI) ಆಗಿ ಕೆಲಸ ಮಾಡಿದ್ದ. ಸೇವಾ ಹಿರಿತನದ ಆಧಾರದ ಮೇಲೆ ಶೀಘ್ರದಲ್ಲೇ ಡಿವೈಎಸ್ಪಿ (DySP) ಹುದ್ದೆಗೆ ಮುಂಬಡ್ತಿ ಪಡೆಯುವ ನಿರೀಕ್ಷೆಯಲ್ಲಿದ್ದ ಮಹೇಶ್ ಕನಕಗಿರಿ ಅದಕ್ಕಾಗಿ ಸರ್ಕಾರದ ಮಟ್ಟದಲ್ಲಿ ಓಡಾಟ ನಡೆಸುತ್ತಿದ್ದ ಎನ್ನಲಾಗಿದೆ. ಬಡ್ತಿಯ ಹೊಸ್ತಿಲಲ್ಲೇ ಈತ ಜೈಲು ಪಾಲಾಗಿದ್ದಾನೆ.
ಮಹೇಶ್ ಕನಕಗಿರಿ ಇಂತಹ ಕೃತ್ಯ ಎಸಗುತ್ತಿರುವುದು ಇದೇ ಮೊದಲೇನಲ್ಲ. ಕೇವಲ 4 ತಿಂಗಳ ಹಿಂದಷ್ಟೇ ಈತ ಬಂಡೇಪಾಳ್ಯ ಠಾಣೆಯ ಇನ್ಸ್ಪೆಕ್ಟರ್ ಆಗಿದ್ದಾಗಲೂ ಸುಲಿಗೆಯ ಆರೋಪ ಕೇಳಿಬಂದಿತ್ತು. ಯಲಹಂಕದ ಇಬ್ಬರು ಉದ್ಯಮಿಗಳನ್ನು ಅಕ್ರಮವಾಗಿ ಠಾಣೆಯಲ್ಲಿ ಕೂಡಿಹಾಕಿ ಹಣ ವಸೂಲಿಗೆ ಯತ್ನಿಸಿದ್ದ ಬಗ್ಗೆ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಕೆಯಾಗಿತ್ತು.
ಆಗ ಆಯುಕ್ತರು ಇಲಾಖಾ ವಿಚಾರಣೆಗೆ ಆದೇಶಿಸಿ, ಮಹೇಶ್ನನ್ನು ಬಂಡೇಪಾಳ್ಯ ಠಾಣೆಯಿಂದ ನಿಯಂತ್ರಣ ಕೊಠಡಿಗೆ (Control Room) ಎತ್ತಂಗಡಿ ಮಾಡಿದ್ದರು. ಆದರೆ, ಶಿಸ್ತು ಕ್ರಮದ ಭೀತಿಯಲ್ಲಿದ್ದ ಮಹೇಶ್, ತನ್ನ ರಾಜಕೀಯ ಹಾಗೂ ಇಲಾಖಾ ಪ್ರಭಾವ ಬಳಸಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಸಿಐಡಿ ವಿಭಾಗಕ್ಕೆ ವರ್ಗಾವಣೆ ಮಾಡಿಸಿಕೊಂಡಿದ್ದರು.! ಸಿಐಡಿಗೆ ಹೋದರೂ ಬುದ್ಧಿ ಕಲಿಯದ ಈತ, ಮತ್ತೆ ದರೋಡೆಗೆ ಇಳಿದು ಈಗ ಸಿಕ್ಕಿಬಿದ್ದಿದ್ದಾನೆ.
ಕೇಲವು ಮಂದಿ ನೀಚ ಪೋಲಿಸರಿಂದ ಇಲಾಖೆಗೆ ಕಪ್ಪು ಮಸಿ ಅಂಟಿಸುವ ಕಾರ್ಯಕ್ರಮ ಮುಂದುವರಿದೆ. ತಾವು ಹಾಕೀರುವ ಪವಿತ್ರ ಖಾಕಿಯನ್ನು ಮರೆತು ಹೆಸಿಗೆ ಹಣದ ಆಸೆಗೆ ಬಿದ್ದು ಇಲಾಖೆಯಲ್ಲಿರುವ ನಿಷ್ಠಾವಂತರು ತಲೆ ತಗ್ಗಿಸುವಂತೆ ಮಾಡುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪೊಲೀಸರೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಇಲಾಖೆಯ ಘನತೆಗೆ ತೀವ್ರ ಧಕ್ಕೆ ತಂದಿದೆ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಎಟಿಎಂಗೆ ಹಣ ತುಂಬಿಸುವ ವಾಹನದಿಂದ ₹7 ಕೋಟಿ ದರೋಡೆ ಮಾಡಿದ ಪ್ರಕರಣದಲ್ಲಿ ಗೋವಿಂದಪುರ ಠಾಣೆಯ ಕಾನ್ಸ್ಟೇಬಲ್ ಬಂಧನವಾಗಿತ್ತು.
ಕೆಲ ದಿನಗಳ ಹಿಂದೆ ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಲಂಚ ಸ್ವೀಕರಿಸುವಾಗ ಎಚ್ಎಎಲ್ ಠಾಣೆಯ ಮಹಿಳಾ ಪಿಎಸ್ಐ ಅನಿತಾ ಹಾಗೂ ಇಬ್ಬರು ಸಿಬ್ಬಂದಿ ರಾಜಸ್ಥಾನದಲ್ಲಿ ಸಿಕ್ಕಿಬಿದ್ದಿದ್ದರು. ಈಗ ಸಿಐಡಿ ಇನ್ಸ್ಪೆಕ್ಟರ್ ಮಹೇಶ್ ಕನಕಗಿರಿ ಜೈಲು ಪಾಲಾಗುವ ಮೂಲಕ ಇಲಾಖೆಯ ಕಪ್ಪು ಚುಕ್ಕೆಗಳ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗಿದ್ದು ಮಾತ್ರ ದುರಂತವೆ ಹೌದು.!

⚖️ ಪೊಲೀಸ್ ಕ್ರಮ ಮತ್ತು ಬಂಧನ
- ದೂರು ದಾಖಲು: ತಮಗಾದ ಅನ್ಯಾಯದ ವಿರುದ್ಧ ಉದ್ಯಮಿ ಜುನೀಶ್ ಬಾಬು ಮಡಿವಾಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
- ಸಿಸಿಟಿವಿ ಸಾಕ್ಷಿ: ಹೋಟೆಲ್ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ದರೋಡೆಗೆ ಸಿಐಡಿ ಜೀಪ್ ಬಳಸಿರುವುದು ಪತ್ತೆಯಾಯಿತು.
- ಬಂಧನ: ಮಡಿವಾಳ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ರಿಯಲ್ ಎಸ್ಟೇಟ್ ಉದ್ಯಮಿಗಳಾದ ಕುಪೇಂದ್ರ ರೆಡ್ಡಿ, ವಸಂತ್ ಕುಮಾರ್ ಮತ್ತು ತಲೆಮರೆಸಿಕೊಂಡಿದ್ದ ಇನ್ಸ್ಪೆಕ್ಟರ್ ಮಹೇಶ್ ಕನಕಗಿರಿಯನ್ನು ಬಂಧಿಸಿದ್ದಾರೆ.
- ರಿಕವರಿ: ದರೋಡೆ ಮಾಡಲಾಗಿದ್ದ ಬಹುತೇಕ ಸಂಪೂರ್ಣ ಹಣ ಮತ್ತು ಕೃತ್ಯಕ್ಕೆ ಬಳಸಿದ ಸಿಐಡಿ ಜೀಪನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಬೆಂಗಳೂರು ಪೊಲೀಸ್ ಕಮಿಷನರ್ ಸೂಚನೆಯ ಮೇರೆಗೆ ಸದ್ಯ ಆರೋಪಿಗಳ ವಿರುದ್ಧ ದರೋಡೆ, ಜೀವ ಬೆದರಿಕೆ ಹಾಗೂ ಅಪರಾಧಿಕ ಸಂಚಿನ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.


