
ಬೆಳಗಾವಿ : 2 ಕೋಟಿ ಹಣಕ್ಕಾಗಿ ಗಂಡನನ್ನೇ ಕೊಂದು ಮುಗಿಸಿದ ಮಗಳು.! ತಲೆ ಎತ್ತಿ ಓಡಾಡಲಾಗದೆ ತಾಯಿಯು ಆತ್ಮಹತ್ಯೆಗೆ ಶರಣು.!
news.ashwasurya.in
ಅಶ್ವಸೂರ್ಯ/ಬೆಳಗಾವಿ : 2 ಕೋಟಿ ರೂಪಾಯಿ ವಿಮೆ ಹಣಕ್ಕಾಗಿ ಮಾಜಿ ಸೈನಿಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಆಘಾತಕಾರಿ ಸುದ್ಧಿ ಹೊರಬಿದ್ದಿದೆ.! ಪ್ರಕರಣದ ಪ್ರಮುಖ ಆರೋಪಿ ಸುಮಾ ಮಂಜರಗಿ ಬಂಧನಕ್ಕೆ ಒಳಗಾಗುತ್ತಿದ್ದಂತೆ, ಅತ್ತ ಮಗಳ ಕೃತ್ಯದಿಂದ ಜರ್ಜರಿತರಾಗಿದ್ದ ಆಕೆಯ ತಾಯಿ ನೇಣಿಗೆ ಶರಣಾಗಿದ್ದಾರೆ.
ಮಾಜಿ ಸೈನಿಕ ಸಂದೀಪ್ ಮಂಜರಗಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾದ ಸುಮಾ ಮಂಜರಗಿಯ ತಾಯಿ ಮಹಾದೇವಿ ಬದಾಮಿ (57) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಮಗಳು ಸುಮಾ ಮತ್ತು ಆಕೆಯ ಪ್ರಿಯಕರ ಸೇರಿ ಅಳಿಯನನ್ನು ಭೀಕರವಾಗಿ ಕೊಂದ ವಿಷಯ ತಿಳಿಯುತ್ತಿದ್ದಂತೆ ತಾಯಿ ತೀವ್ರ ಆಘಾತಕ್ಕೊಳಗಾಗಿದ್ದರು. ಜೂನ್ 14ರಂದು ಮಗಳನ್ನು ಯಮಕನಮರಡಿ ಪೊಲೀಸರು ಬಂಧಿಸುತ್ತಿದ್ದಂತೆ ತಾಯಿ ಮಾನಸಿಕವಾಗಿ ಸಂಪೂರ್ಣ ಜರ್ಜರಿತರಾಗಿದ್ದರು ಎನ್ನಲಾಗಿದೆ.
ಮಗಳ ಈ ಪಾಪದ ಕೃತ್ಯದಿಂದ ಇಡೀ ಊರಿನಲ್ಲಿ ತಲೆ ಎತ್ತಿ ಓಡಾಡದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ತೀವ್ರ ಮನನೊಂದ ಮಹಾದೇವಿ ಅವರು ಇಂದು ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದಲ್ಲಿರುವ ತಮ್ಮ ಮನೆಯ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾರೆ.
ಘಟನೆ ನಡೆದ ವಿಷಯ ತಿಳಿಯುತ್ತಿದ್ದಂತೆ ಯಮಕನಮರಡಿ ಠಾಣೆಯ ಪೊಲೀಸರು ಘೋಡಗೇರಿ ಗ್ರಾಮದ ಸತ್ತವರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮಗಳ ಕೃತ್ಯಕ್ಕೆ ತಾಯಿ ಬಲಿಯಾದ ಹಿನ್ನೆಲೆಯಲ್ಲಿ ಮನೆಯ ಮುಂಭಾಗದಲ್ಲಿ ಸಂಬಂಧಿಕರು ಹಾಗೂ ಗ್ರಾಮಸ್ಥರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದು, ಗ್ರಾಮದಲ್ಲಿ ಕಣ್ಣೀರಿನ ವಾತಾವರಣ ಸೃಷ್ಟಿಯಾಗಿದೆ.

ಯಮಕನಮರಡಿ ಠಾಣಾ ವಾಪ್ತಿಯಲ್ಲಿ ಇತ್ತೀಚೆಗೆ ಮಾಜಿ ಸೈನಿಕ ಸಂದೀಪ್ ಮಂಜರಗಿ ಎಂಬುವವರ ಭೀಕರ ಕೊಲೆಯಾಗಿತ್ತು. ಸಂದೀಪ್ ಹೆಸರಲ್ಲಿದ್ದ ಬರೋಬ್ಬರಿ ಎರಡು ಕೋಟಿ ರೂಪಾಯಿ ಜೀವ ವಿಮೆ (Insurance) ಹಣವನ್ನು ಕೈವಶ ಮಾಡಿಕೊಳ್ಳಲು ಪಾಪಿ ಪತ್ನಿ ಸುಮಾ ಮಂಜರಗಿ ತನ್ನ ಪ್ರಿಯಕರ ಪುಂಡಲೀಕನ ಜೊತೆ ಸೇರಿ ಸ್ಕೆಚ್ ಹಾಕಿದ್ದಳು.
ಮಾರ್ಚ್ 13ರಂದು ಸಂದೀಪ್ ಬೈಕ್ನಿಂದ ಬಿದ್ದು ಸಣ್ಣಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಸಂದೀಪ್ ಗುಣಮುಖರಾಗಿ ಡಿಸ್ಚಾರ್ಜ್ ಆಗುವ ಮುನ್ನವೇ, ಪತ್ನಿ ಸುಮಾ ಮತ್ತು ಪ್ರಿಯಕರ ಸೇರಿ ಆಸ್ಪತ್ರೆಯ ಸಲೈನ್ ಬಾಟಲಿಯಲ್ಲಿ ವಿಷ ಬೆರಸಿ ಹಾಗೂ ನಿದ್ದೆ ಮಾತ್ರೆ ನೀಡಿ ಮಾರ್ಚ್ 15ರಂದು ಕೊಲೆ ಮಾಡಿದ್ದರು.
ಇದೊಂದು ನೈಸರ್ಗಿಕ ಸಾವು ಅಥವಾ ಅಪಘಾತದ ಸಾವು ಎಂದು ಬಿಂಬಿಸಲು ಮರಣೋತ್ತರ ಪರೀಕ್ಷೆಯ ವರದಿಯನ್ನು ಬದಲಾಯಿಸಲು ವಿಧಿವಿಜ್ಞಾನ (FSL) ಪ್ರಯೋಗಾಲಯದ ಸಿಬ್ಬಂದಿಗೆ 3 ಲಕ್ಷಕ್ಕೂ ಅಧಿಕ ಲಂಚ ನೀಡಲಾಗಿತ್ತು
ಯಾವುದೇ ಗಂಭೀರ ಗಾಯಗಳಿಲ್ಲದ ಸಂದೀಪ್ ಹಠಾತ್ತನೆ ಮೃತಪಟ್ಟಿದ್ದು ಪೊಲೀಸರಿಗೆ ಅನುಮಾನ ತಂದಿತ್ತು. ಇದರ ನಡುವೆ, ವಿಮೆ ಹಣ ಹಂಚಿಕೊಳ್ಳುವ ವಿಚಾರದಲ್ಲಿ ಸುಮಾ ಮತ್ತು ಪ್ರಿಯಕರ ಪುಂಡಲೀಕ ನಡುವೆ ಜಗಳ ನಡೆದಿತ್ತು. ಇದರಿಂದ ಸಿಟ್ಟಿಗೆದ್ದ ಪುಂಡಲೀಕ, “ಅಪಘಾತವಾದ ವ್ಯಕ್ತಿ ತಕ್ಷಣ ಸತ್ತಿದ್ದು ಹೇಗೆ?” ಎಂದು ವಾಟ್ಸಪ್ನಲ್ಲಿ ಪೋಸ್ಟ್ ಹಾಕಿದ್ದ. ಇದನ್ನು ಗಮನಿಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಡೀ ಕೊಲೆ ರಹಸ್ಯ ಬಯಲಾಗಿದೆ.

ಯಮಕನಮರಡಿ ಪೊಲೀಸರು ಜೂನ್ 14 ರಂದು ಪತ್ನಿ ಸುಮಾ, ಆಕೆಯ ಪ್ರಿಯಕರ ಪುಂಡಲೀಕ ಸೇರಿದಂತೆ ಒಟ್ಟು 9 ಜನ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದರು. ಮಗಳ ಈ ಘೋರ ಅಪರಾಧವೇ ಇದೀಗ ತಾಯಿಯ ಆತ್ಮಹತ್ಯೆಗೆ ಕಾರಣವಾಗಿದ್ದು ಮಾತ್ರ ದುರಂತವೆ ಹೌದು. ಇಂತಹ ನೀಚ ಮಕ್ಕಳು ಯಾವ ತಾಯಿಗೂ ಬೇಡ ಎನ್ನುವುದು ಅಲ್ಲಿ ನೆರೆದಿದ್ದವರ ಒಕ್ಕೊರಲಿನ ಧ್ವನಿ ಯಾಗಿತ್ತು.


