

ಬೆಳಗಾವಿ : ವಿಮೆ ಹಣಕ್ಕಾಗಿ ದೇಶದ ಗಡಿ ಕಾಯುವ ಯೋಧನ ಕೊಲೆ ಮಾಡಿದ ಮಡದಿ.!
ಬೆಳಗಾವಿ ಜಿಲ್ಲೆಯಲ್ಲಿ ₹2 ಕೋಟಿ ವಿಮೆ ಹಣ ಹಾಗೂ ಅಕ್ರಮ ಸಂಬಂಧಕ್ಕಾಗಿ ನಿವೃತ್ತ ಯೋಧನನ್ನು ಆತನ ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಆಸ್ಪತ್ರೆಯಲ್ಲೇ ವಿಷವಿಕ್ಕಿ ಕೊಲೆ ಮಾಡಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ.ಬೆಳಗಾವಿ ಜಿಲ್ಲೆಯ ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತರ ಪತ್ನಿ ಸುಮಾ ಮಂಜರಗಿ ಹಾಗೂ ಆಕೆಯ ಪ್ರಿಯಕರ ಪುಂಡಲೀಕ ಡೊಂಬರ್ ಸೇರಿದಂತೆ ಒಟ್ಟು 9 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ….


news.ashwasurya.in
ಅಶ್ವಸೂರ್ಯ/ಬೆಳಗಾವಿ : ನಿವೃತ್ತ ಯೋಧ ಸಂದೀಪ ಮಂಜರಗಿ ಅವರ ಸಾವಿನ ಪ್ರಕರಣವು ದಿನದಿಂದ ದಿನಕ್ಕೆ ರೋಚಕ ತಿರುವು ಪಡೆಯುತ್ತಿದೆ. 2 ಕೋಟಿ ರೂಪಾಯಿ ವಿಮೆ ಹಣಕ್ಕಾಗಿ, ಪತ್ನಿ ಸುಮಾ ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ಆಸ್ಪತ್ರೆಯಲ್ಲಿಯೇ ವಿಷ ನೀಡಿ ಪತಿಯನ್ನು ಹತ್ಯೆ ಮಾಡಿದ್ದಾಳೆ.!! ವಿಮೆ ಹಣ ಹಂಚಿಕೆ ಜಗಳದಿಂದಾಗಿ ಈ ಸಂಚು ಬಯಲಾಗಿದ್ದು, 9 ಜನರ ಬಂಧನವಾಗಿದ್ದು ಯೋಧನ ಹತ್ಯೆ ಪ್ರಕರಣ ಬಯಲಾಗಿದೆ.
ದೇಶ ಕಾಯುವ ನಿವೃತ್ತ ಯೋಧನೊಬ್ಬನ ಸಾವಿನ ಪ್ರಕರಣ ಈಗ ಭಯಾನಕ ತಿರುವು ಪಡೆದುಕೊಂಡಿದ್ದು ಕೇವಲ 2 ಕೋಟಿ ರೂಪಾಯಿ ವಿಮೆ ಹಣಕ್ಕಾಗಿ ಸ್ವಂತ ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹತ್ಯೆ ಮಾಡಿರುವ ರೋಚಕ ಕಥೆಯನ್ನು ಬೆಳಗಾವಿ ಪೊಲೀಸರು ಬಯಲಿಗೆಳೆದಿದ್ದಾರೆ. ಈ ಸಂಬಂಧ ಪತ್ನಿ ಸೇರಿದಂತೆ ಒಟ್ಟು 9 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಹಿನ್ನೆಲೆ:
ನಿವೃತ್ತ ಯೋಧ ಸಂದೀಪ ಮಂಜರಗಿ (46) ಈ ಪ್ರಕರಣದ ದುರ್ದೈವಿಯಾಗಿದ್ದು ಕೆಲವು ದಿನಗಳ ಹಿಂದೆ ಸಣ್ಣ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಸಂದೀಪ್ ಅವರನ್ನು ಅವರ ಪತ್ನಿ ಸುಮಾ, ಘಟಪ್ರಭಾದ ಜೆಜೆ ಕೋ-ಆಪರೇಟಿವ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಅದೇ ಆಸ್ಪತ್ರೆಯಲ್ಲಿ ಪತಿಯ ಪ್ರಾಣ ತೆಗೆಯಲು ಸುಮಾ ಮತ್ತು ಆಕೆಯ ಪ್ರಿಯಕರ ಪುಂಡಲೀಕ ಎಂಬಾತ ಸಂಚು ರೂಪಿಸಿದ್ದರು.

ಆಸ್ಪತ್ರೆಯಲ್ಲೇ ಕೊಲೆಗೆ ಸ್ಕೆಚ್.!
ಸಂಚು ಮತ್ತು ಕೊಲೆ: ಆರೋಪಿಗಳು ಸಂದೀಪ್ ಹೆಸರಿನಲ್ಲಿ ಅಪಘಾತ ಸಂಭವಿಸಿದರೆ ₹2 ಕೋಟಿ ಸಿಗುವಂತಹ ದೊಡ್ಡ ಮೊತ್ತದ ವಿಮೆ ಮಾಡಿಸಿದ್ದರು. ಮಾರ್ಚ್ 13 ರಂದು ಸಂದೀಪ್ ಬೈಕ್ ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅವರು ಗುಣಮುಖರಾದರೆ ತಮ್ಮ ಸಂಬಂಧಕ್ಕೆ ಅಡ್ಡಿಯಾಗುತ್ತಾರೆಂದು ಮತ್ತು ವಿಮೆ ಹಣದ ಆಸೆಯಿಂದ, ಆಸ್ಪತ್ರೆಯಲ್ಲೇ ಸಲೈನ್ ಬಾಟಲ್ ಮೂಲಕ ಕೀಟನಾಶಕ (ವಿಷ) ಉಣಿಸಿ ಮಾರ್ಚ್ 15 ರಂದು ಕೊಲೆ ಮಾಡಲಾಗಿತ್ತು.ಈ ಕೃತ್ಯಕ್ಕೆ ಸುಮಾ ಮತ್ತು ಪುಂಡಲೀಕನಿಗೆ ಅಪ್ಪಾಸಾಬ್ ನಾಯಿಕವಾಡಿ, ಚನ್ನಪ್ಪಾ ಅಡವಿಸ್ವಾಮಿಮಠ ಸೇರಿದಂತೆ ಒಟ್ಟು 9 ಜನ ಸಾಥ್ ನೀಡಿದ್ದರು.
ಪೊಲೀಸರಿಗೂ ಲಂಚ, ವರದಿ ತಿದ್ದುಪಡಿ:
ಕೊಲೆಯ ನಂತರ ಎಫ್ಎಸ್ಎಲ್ (FSL) ವರದಿಯಲ್ಲಿ ವಿಷಪ್ರಾಶನದ ಬಗ್ಗೆ ಉಲ್ಲೇಖವಾಗಿತ್ತು. ಆದರೆ, 2 ಕೋಟಿ ರೂಪಾಯಿ ವಿಮೆ ಹಣ ಸಿಗಬೇಕೆಂಬ ಉದ್ದೇಶದಿಂದ ಆರೋಪಿಗಳು ಹಣದ ಆಮಿಷವೊಡ್ಡಿ ಎಫ್ಎಸ್ಎಲ್ ವರದಿಯನ್ನೇ ತಿದ್ದುಪಡಿ ಮಾಡಿಸಲು ಪ್ರಯತ್ನಿಸಿದ್ದರು. ಇದಕ್ಕೆ ಕೆಲವು ಪೊಲೀಸ್ ಸಿಬ್ಬಂದಿಯೂ ಸಹಕರಿಸಿದ್ದರು ಎಂಬ ಸ್ಫೋಟಕ ಮಾಹಿತಿ ಸುದ್ದಿಗೋಷ್ಠಿಯಲ್ಲಿ ಹೊರಬಂದಿದೆ.

ವಿಮೆ ಹಣ ಹಂಚಿಕೆಯಲ್ಲಿ ಜಗಳ ಕೊಲೆ ಸಂಚು ಬಯಲು.!
ಇಷ್ಟೆಲ್ಲಾ ನಾಟಕವಾಡಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದು ವಿಮೆ ಹಣದ ಹಂಚಿಕೆಯ ವಿಚಾರದಲ್ಲಿ! ಸಂದೀಪ್ ಅವರ ಹೆಸರಿನಲ್ಲಿದ್ದ 2 ಕೋಟಿ ರೂ. ವಿಮೆ ಹಣವನ್ನು ಹಂಚಿಕೊಳ್ಳುವ ವಿಚಾರದಲ್ಲಿ ಪತ್ನಿ ಸುಮಾ ಮತ್ತು ಪ್ರಿಯಕರ ಪುಂಡಲೀಕ ನಡುವೆ ಜಗಳ ಆರಂಭವಾಗಿತ್ತು. ಈ ಸುಳಿವು ಬೆನ್ನಟ್ಟಿದ ಯಮಕನಮರಡಿ ಮತ್ತು ಘಟಪ್ರಭಾ ಪೊಲೀಸರು ತನಿಖೆ ನಡೆಸಿದಾಗ ಈ ಭೀಕರ ಹತ್ಯಾಕಾಂಡ ಬಯಲಾಗಿದೆ. ಬೆಳಗಾವಿ ಎಸ್ಪಿ ಕೆ. ರಾಮರಾಜನ್ ಅವರು ಸುದ್ದಿಗೋಷ್ಠಿ ನಡೆಸಿ, ಪ್ರಕರಣದ ಹಂತ ಹಂತದ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ ಮತ್ತು ದಕ್ಷತೆಯಿಂದ ಕೆಲಸ ಮಾಡಿದ ಪೊಲೀಸ್ ತಂಡವನ್ನು ಶ್ಲಾಘಿಸಿದ್ದಾರೆ.


