ಧಾರವಾಡ : ಜೈಲಲ್ಲಿ ಶಿವಮೊಗ್ಗ ಹರ್ಷಾ ಕೊಲೆ ಆರೋಪಿಗಳಿಂದ ವಾರ್ಡನ್ ಮೇಲೆ ಹಲ್ಲೆ.!
ಜೈಲ್ ಬ್ಯಾರಕ್ ನಿಂದ ಹೊರಗೆ ಬಿಡುವ ಸಣ್ಣ ವಿಚಾರಕ್ಕೆ ಸಂಬಂಧಿಸಿದಂತೆ ಕೈದಿಗಳು ಜೈಲು ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ.ಸಾಲದ್ದಕ್ಕೆ ಕರ್ತವ್ಯದಲ್ಲಿದ್ದ ಜೈಲು ವಾರ್ಡನ್ ಕಿರಣ್ ಘೋರ್ಪಡೆ ಅವರ ಮೇಲೆ ಎ1 (ಮೊಹಮ್ಮದ್ ಕಾಸಿಫ್) ಮತ್ತು ಎ2 (ರೆಹಾನ್ ಷರೀಫ್) ಆರೋಪಿಗಳು ಏಕಾಏಕಿ ಹಲ್ಲೆ ನಡೆಸಿದ್ದಾರೆ…

news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗದ ಹರ್ಷಾ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳು ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಜೈಲು ವಾರ್ಡನ್ ಮೇಲೆ ಹಲ್ಲೆ ಮಾಡಿದ್ದಾರೆ. ಆರೋಪಿಗಳ ಪುಂಡಾಟಿಕೆಯಿಂದಾಗಿ ಆರೋಪಿಗಳಿಗೆ ಒಂದು ತಿಂಗಳ ಕಾಲ ಕುಟುಂಬಸ್ಥರ ಭೇಟಿಯನ್ನು ನಿಷೇಧಿಸಲಾಗಿದ್ದು, ಭೇಟಿಗೆ ಬಂದಿದ್ದ ಅವರ ಕುಟುಂಬಸ್ಥರು ನಿರಾಸೆಯಿಂದ ವಾಪಸ್ಸಾಗಿದ್ದಾರೆ ಎಂದು ತಿಳಿದುಬಂದಿದೆ.
ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷಾ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳು ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಇದ್ದಂತ ಸಂಧರ್ಭದಲ್ಲಿ ಜೈಲು ವಾರ್ಡನ್ ಮೇಲೆ ಭೀಕರ ಹಲ್ಲೆ ನಡೆಸುವ ಮೂಲಕ ಮತ್ತೆ ತಮ್ಮ ಪುಂಡಾಟಿಕೆಯನ್ನು ಪ್ರದರ್ಶಿಸಿದ್ದಾರೆ. ಈ ಘಟನೆ ಕಾರಾಗೃಹದ ಆವರಣದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದ್ದು, ಹಲ್ಲೆ ನಡೆಸಿದ ಕೈದಿಗಳಿಗೆ ಜೈಲಾಧಿಕಾರಿಗಳು ತಕ್ಷಣವೇ ಕಠಿಣ ಪನಿಷಮೆಂಟ್ ನೀಡಿದ್ದಾರೆ ಎಂದು ತಿಳಿದುಬಂದಿದೆ.!

ಸೆಲ್ನಿಂದ ಹೊರಗೆ ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ :
ಕಳೆದ 2022 ರಲ್ಲಿ ಶಿವಮೊಗ್ಗದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಹಿಂದೂ ಕಾರ್ಯಕರ್ತ ಹರ್ಷಾ ಕೊಲೆ ಪ್ರಕರಣದ ಎ-1 (A1) ಮತ್ತು ಎ-2 (A2) ಆರೋಪಿಗಳನ್ನು ಅಂದಿನಿಂದಲೇ ಸುರಕ್ಷತೆಯ ದೃಷ್ಟಿಯಿಂದ ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ. ಶನಿವಾರದಂದು ಜೈಲಿನ ಸೆಲ್ನಿಂದ (ಬ್ಯಾರಕ್) ಹೊರಗೆ ಬಿಡುವ ಸಣ್ಣ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿಗಳು ಜೈಲು ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ.
ಮಾತು ಮೀರಿದಾಗ ಉದ್ಧಟತನ ತೋರಿದ ಇಬ್ಬರು ಆರೋಪಿಗಳು, ಅಲ್ಲಿಯೇ ಕರ್ತವ್ಯದಲ್ಲಿದ್ದ ಜೈಲು ವಾರ್ಡನ್ ಕಿರಣ್ ಘೋರ್ಪಡೆ ಅವರ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದಾಗಿ ತೀವ್ರವಾಗಿ ಗಾಯಗೊಂಡ ವಾರ್ಡನ್ ಕಿರಣ್ ಅವರನ್ನು ತಕ್ಷಣವೇ ಜೈಲಿನ ವೈದ್ಯಕೀಯ ವಿಭಾಗದಿಂದ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಪ್ರಸಿದ್ಧ ಎಸ್ಡಿಎಂ (SDM) ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಬ್ ಅರ್ಬನ್ ಠಾಣೆಯಲ್ಲಿ ಪ್ರಕರಣ ದಾಖಲು.
ಜೈಲಿನೊಳಗೆ ಸರ್ಕಾರಿ ನೌಕರನ ಮೇಲೆ ನಡೆದಿರುವ ಈ ದಾಳಿಯನ್ನು ಜೈಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ಕರ್ತವ್ಯನಿರತ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ (Obstruction of Duty) ಆರೋಪದಡಿಯಲ್ಲಿ ಹರ್ಷಾ ಕೊಲೆ ಆರೋಪಿಗಳ ವಿರುದ್ಧ ಧಾರವಾಡದ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಹೊಸ ಪ್ರಕರಣ ದಾಖಲಿಸಲಾಗಿದೆ.

ಕುಟುಂಬಸ್ಥರ ಭೇಟಿಗೆ ಒಂದು ತಿಂಗಳು ನಿಷೇಧ.
ಜೈಲಿನ ನಿಯಮಾವಳಿಗಳನ್ನು ಗಾಳಿಗೆ ತೂರಿ ವಾರ್ಡನ್ ಮೇಲೆ ಹಲ್ಲೆ ನಡೆಸಿದ ಕೈದಿಗಳಿಗೆ ಜೈಲರ್ ತಕ್ಷಣವೇ ಜಾರಿಗೆ ಬರುವಂತೆ ಕಠಿಣ ಶಿಕ್ಷೆ ಪ್ರಕಟಿಸಿದ್ದಾರೆ. ಮುಂದಿನ ಒಂದು ತಿಂಗಳ ಅವಧಿಗೆ ಅಪರಾಧಿಗಳ ಯಾವುದೇ ಕುಟುಂಬದ ಸದಸ್ಯರು ಅಥವಾ ಬಂಧುಗಳು ಈ ಕೈದಿಗಳನ್ನು ಭೇಟಿ ಮಾಡದಂತೆ ಕಟ್ಟುನಿಟ್ಟಿನ ನಿಷೇಧ ಹೇರಲಾಗಿದೆ.
ಶಿವಮೊಗ್ಗದಿಂದ ಬಂದಿದ್ದ ತಾಯಿ, ಪತ್ನಿ ಕಣ್ಣೀರು ಹಾಕುತ್ತಾ ವಾಪಸ್!

ಜೈಲಾಧಿಕಾರಿಗಳು ಶಿಕ್ಷೆ ಪ್ರಕಟಿಸಿದ ಬೆನ್ನಲ್ಲೇ, ಶಿವಮೊಗ್ಗದಿಂದ ಇಬ್ಬರು ಆರೋಪಿಗಳನ್ನು ನೋಡಲು ಅವರ ತಾಯಿ ಮತ್ತು ಪತ್ನಿಯರು ಧಾರವಾಡ ಜೈಲಿನ ಬಳಿಗೆ ಆಗಮಿಸಿದ್ದರು. ಆದರೆ ಕೈದಿಗಳ ಪುಂಡಾಟಿಕೆಯಿಂದ ಆಕ್ರೋಶಗೊಂಡಿದ್ದ ಜೈಲರ್, ನಿಯಮದ ಪ್ರಕಾರ ಮುಲಾಜಿಲ್ಲದೆ ಭೇಟಿಗೆ ಅವಕಾಶ ನಿರಾಕರಿಸಿದರು. ದೂರದ ಊರಿನಿಂದ ಬಂದಿದ್ದರೂ ಸಹ ಆರೋಪಿಗಳ ಕುಟುಂಬಸ್ಥರಿಗೆ ಒಳಗೆ ಹೋಗಲು ಅನುಮತಿ ಸಿಗದ ಕಾರಣ, ಎ1 ಮತ್ತು ಎ2 ಆರೋಪಿಗಳ ಪತ್ನಿ ಹಾಗೂ ತಾಯಿ ಜೈಲಿನ ಗೇಟ್ನಿಂದಲೇ ಕಣ್ಣೀರು ಹಾಕುತ್ತಾ ನಿರಾಸೆಯಿಂದ ಶಿವಮೊಗ್ಗಕ್ಕೆ ವಾಪಸ್ ಬಂದಿದ್ದಾರೆ. ಈ ಘಟನೆಯು ಜೈಲಿನೊಳಗಿನ ಭದ್ರತೆ ಮತ್ತು ಕೈದಿಗಳ ವರ್ತನೆಯ ಕುರಿತು ಮತ್ತೊಮ್ಮೆ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು ಪ್ರತಿಯೊಂದು ಜೈಲುಗಳಲ್ಲಿ ಕಟ್ಟು ನಿಟ್ಟಿನ ಕ್ರಮ ಜರುಗಿಸ ಬೇಕಾಗಿದೆ.


