

ಬಳ್ಳಾರಿ ಹತ್ಯೆ ಪ್ರಕರಣ : ರೇಣುಕಾಸ್ವಾಮಿ ಹತ್ಯೆ ಪ್ರಕರಣದಂತೆ ಬಳ್ಳಾರಿಯಲ್ಲಿ ಬಸವಗೌಡನ ಹತ್ಯೆ.! ಮೂವರು ಆರೋಪಿಗಳು ಅಂದರ್.
ಬಳ್ಳಾರಿಯಲ್ಲಿ ನಡೆದ ಪಾಟೀಲ್ ಬಸವನಗೌಡ (26) ಎಂಬ ಯುವಕನ ಬರ್ಬರ ಹತ್ಯೆ ಪ್ರಕರಣವು, ಬೆಂಗಳೂರಿನ ಪಟ್ಟಣಗೆರೆ ಶೆಡ್ನಲ್ಲಿ ನಡೆದಿದ್ದ ಪ್ರಸಿದ್ಧ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮಾದರಿಯಲ್ಲೇ ಇರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ಮಹಿಳೆಯೊಬ್ಬಳಿಗೆ ಅಶ್ಲೀಲ ಸಂದೇಶ ಹಾಗೂ ಫೋಟೋಗಳನ್ನು ಕಳುಹಿಸಿ ಪೀಡಿಸುತ್ತಿದ್ದ ಯುವಕನನ್ನು ಪ್ಲ್ಯಾನ್ ಮಾಡಿ ಕರೆಸಿಕೊಂಡು ಹತ್ಯೆ ಮಾಡಲಾಗಿದೆ. ಈ ಸಂಬಂಧ ಮೋಕಾ ಠಾಣೆ ಪೊಲೀಸರು ಶ್ವೇತಾ, ಆಕೆಯ ಪತಿ ದೊಡ್ಡಬಸವನಗೌಡ ಮತ್ತು ಸೋದರ ವಿಜಯ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ….

news.ashwasurya.in
ಅಶ್ವಸೂರ್ಯ/ಬಳ್ಳಾರಿ : ಖಾಸಗಿ ಲ್ಯಾಬ್ನಲ್ಲಿ ಕೆಲಸ ಮಾಡುತ್ತಿದ್ದ ಬಸನಗೌಡನನ್ನು ಬಳ್ಳಾರಿ ತಾಲೂಕಿನ ಮೋಕಾ ಸಮೀಪ ಕೊಲೆ ಮಾಡಿ ನಂತರ ಮೃತದೇಹವನ್ನು ಸುಟ್ಟು ಸಾಕ್ಷ್ಯ ನಾಶಕ್ಕೆ ಯತ್ನಿಸಲಾಗಿತ್ತು. ಮೋಕಾ ಬಳಿಯ ಎಲ್ಎಲ್ಸಿ ಕಾಲುವೆ ಪಕ್ಕದಲ್ಲಿ ಅರೆಬೆಂದ ಸ್ಥಿತಿಯಲ್ಲಿ ಬಸವ ಗೌಡನ ಮೃತದೇಹ ಪತ್ತೆಯಾಗಿತ್ತು. ಪ್ರಕರಣದ ತನಿಖೆ ಮುಂದಾಗಿದ್ದ ಪೊಲೀಸರಿಗೆ ಸಾಕಷ್ಟು ಸ್ಫೋಟಕ ಮಾಹಿತಿಗಳು ಬೆಳಕಿಗೆ ಬಂದಿವೆ.
ವಾರದ ಹಿಂದೆ ನಡೆದ ಬಸನಗೌಡ ಕೊಲೆ ಪ್ರಕರಣದ ತನಿಖೆಯಲ್ಲಿ ಆಘಾತಕಾರಿ ಸಂಗತಿಗಳು ಒಂದರಮೇಲೊಂದು ಬಹಿರಂಗವಾಗಿವೆ.

ಖಾಸಗಿ ಲ್ಯಾಬ್ನಲ್ಲಿ ಕೆಲಸ ಮಾಡುತ್ತಿದ್ದ ಬಸನಗೌಡನನ್ನು ಬಳ್ಳಾರಿ ತಾಲೂಕಿನ ಮೋಕಾ ಸಮೀಪ ಕೊಲೆ ಮಾಡಿ, ಮೃತದೇಹವನ್ನು ಸುಟ್ಟು ಸಾಕ್ಷ್ಯ ನಾಶಕ್ಕೆ ಆರೋಪಿಗಳು ಯತ್ನಿಸಿದ್ದಾರೆ. ಮರುದಿನ ಬೆಳಗ್ಗೆ ಮೋಕಾ ಬಳಿಯ ಎಲ್ಎಲ್ಸಿ ಕಾಲುವೆ ಪಕ್ಕದಲ್ಲಿ ಅರೆಬೆಂದ ಸ್ಥಿತಿಯಲ್ಲಿ ಮೃತದೇಹ ಒಂದು ಪತ್ತೆಯಾಗಿತ್ತು.ವಿಷಯ ತಿಳಿದ ಮೋಕಾ ಠಾಣೆಯ ಪೊಲೀಸರು ತನಿಖೆಗೆ ಮುಂದಾಗಿದ್ದರು. ಇದು ಪೂರ್ವಯೋಜಿತ ಕೊಲೆ ಎಂಬುದನ್ನು ಪತ್ತೆಹಚ್ಚಿದ್ದಾರೆ. ಬಸನಗೌಡನ ಅಣ್ಣನಿಗೆ ಆರೋಪಿ ಮಹಿಳೆಯ ತಂಗಿಯನ್ನು ಮದುವೆ ಮಾಡಿಕೊಡಲಾಗಿತ್ತು. ಸಂಬಂಧದಲ್ಲಿ ಅತ್ತಿಗೆಯಾಗಬೇಕಿದ್ದ ಮಹಿಳೆಗೆ ಬಸನಗೌಡ ಕಳೆದ ಎರಡು ವರ್ಷಗಳಿಂದ ಮಾನಸಿಕ ಕಿರುಕುಳ ನೀಡುತ್ತಿದ್ದನಂತೆ, ಮದುವೆ ಸಮಾರಂಭವೊಂದರಲ್ಲಿ ಪರಿಚಯವಾದ ಬಳಿಕ ಬಸನಗೌಡ, ಮಹಿಳೆಗೆ ಕೆಟ್ಟ ಮೆಸೇಜ್ಗಳು ಹಾಗೂ ಅಶ್ಲೀಲ ಫೋಟೋಗಳನ್ನು ಕಳುಹಿಸುತ್ತಿದ್ದನಂತೆ. ಒಂದು ವರ್ಷದಿಂದ ನಿರಂತರವಾಗಿ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಮಹಿಳೆ ಈ ವಿಷಯವನ್ನು ತನ್ನ ಪತಿ ದೊಡ್ಡ ಬಸವನಗೌಡ ಹಾಗೂ ಸಹೋದರ ವಿಜಯ್ಗೆ ತಿಳಿಸಿದ್ದಾಳೆ.

ಇದಾದ ಬಳಿಕ ಮೂವರು ಸೇರಿ ಬಸನಗೌಡನ ಕೊಲೆಗೆ ಸಂಚು ರೂಪಿಸಿದ್ದಾರೆ. ಮಹಿಳೆಯಿಂದ ಪೋನ್ ಮಾಡಿಸಿ ಬಸನಗೌಡನನ್ನು ಕರೆಸಿಕೊಂಡಿದ್ದಾರೆ. ಆಕೆಯ ಗಂಡ ಮತ್ತು ಸಹೋದರ ಸೇರಿ ಬಸನಗೌಡನ ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದಾರೆ. ನಂತರ ಸುಮಾರು 10 ಕಿಲೋಮೀಟರ್ ದೂರದ ಕಾಲುವೆ ಸಮೀಪದ ನಿರ್ಜನ ಪ್ರದೇಶಕ್ಕೆ ಮೃತದೇಹವನ್ನು ಕೊಂಡೊಯ್ದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ.
ಪ್ರಕರಣ ಸಂಬಂಧ ಮಹಿಳೆ, ಆಕೆಯ ಪತಿ ದೊಡ್ಡಬಸವನಗೌಡ ಹಾಗೂ ಸಹೋದರ ವಿಜಯ್ನನ್ನು ಪೊಲೀಸರು ಬಂಧಿಸಿದ್ದಾರೆ. ಮೂವರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಇನ್ನಷ್ಟು ತನಿಖೆ ಮುಂದುವರೆದಿದೆ.



