
ಪಶ್ಚಿಮ ಬಂಗಾಳ : ಅಂದು ಮನೆ ಕೆಲಸದಾಕೆ ಇಂದು ರಾಜ್ಯದ ಸಚಿವೆ.! ಕಲಿತಾ ಮಾಝಿ ಇದೀಗ ಬಂಗಾಳದ ರಾಜ್ಯ ಸಚಿವೆ!
ಪಶ್ಚಿಮ ಬಂಗಾಳದ ಮನೆಗಳಲ್ಲಿ ಪಾತ್ರೆ ತೊಳೆದು, ಮುಸುರೆ ತಿಕ್ಕಿ ತಿಂಗಳಿಗೆ ಕೇವಲ ₹2,500 ರಿಂದ ₹4,500 ಗಳಿಸುತ್ತಿದ್ದ ಕಲಿತಾ ಮಾಝಿ (Kalita Majhi) ಅವರು ಇದೀಗ ಪಶ್ಚಿಮ ಬಂಗಾಳ ಸರ್ಕಾರದ ರಾಜ್ಯ ಸಚಿವರಾಗಿ (Minister of State) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಭಾರತೀಯ ಪ್ರಜಾಪ್ರಭುತ್ವದ ತಳಮಟ್ಟದ ಶಕ್ತಿಗೆ ಇವರ ಈ ಯಶೋಗಾಥೆ ಅತ್ಯುತ್ತಮ ಉದಾಹರಣೆಯಾಗಿದೆ….
news.ashwasurya.in
ಅಶ್ವಸೂರ್ಯ/ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳದ ಆಸ್ಗ್ರಾಮ್ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ದ ಬಿಜೆಪಿ ಶಾಸಕಿ ಕಲಿತಾ ಮಾಝಿ ಅವರು ಕಳೆದ ಸೋಮವಾರ ರಾಜ್ಯ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮನೆಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಅವರು ಶಾಸಕಿಯಾಗಿ ಆಯ್ಕೆಯಾದಾಗ ಭಾರಿ ಸುದ್ದಿಯಾಗಿತ್ತು. ಇದೀಗ ಸಚಿವೆಯಾಗಿದ್ದು, ಪ್ರಧಾನಿ ಧನ್ಯವಾದ ಸಮರ್ಪಿಸಿದ್ದಾರೆ.
ಮನೆಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಮಹಿಳೆ ಇದೀಗ ಸಚಿವೆ :

ಪಶ್ಚಿಮ ಬಂಗಾಳದಲ್ಲಿ ಮನೆಕೆಲಸ ಮಾಡಿ ಜೀವನ ಸಾಗಿಸುತ್ತಿ ಮಹಿಳೆ ಬಿಜೆಪಿ ಪಕ್ಷದಿಂದ ಚುನಾವಣೆಯ ಕಣಕ್ಕೆ ಇಳಿದು ಶಾಸಕಿ ಯಾಗಿದ್ದು ನಿಮಗೆಲ್ಲಾ ತಿಳಿದಿರಬಹುದು. ಇದೀಗ ಅವರು ರಾಜ್ಯ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹೌದು, ಆಸ್ಗ್ರಾಮ್ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ದ ಬಿಜೆಪಿ ಶಾಸಕಿ ಕಲಿತಾ ಮಾಝಿ (Kalita Majhi) ಅವರು ಸೋಮವಾರ (ಜೂ. 1) ರಾಜ್ಯ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಒಂದು ಕಾಲದಲ್ಲಿ ತಿಂಗಳಿಗೆ ಕೇವಲ 2,500 ರೂ. ಗಳಿಸುತ್ತಿದ್ದ ಮಾಜಿ ಮನೆ ಕೆಲಸದಾಕೆ, ಈಗ ಇಡೀ ರಾಜ್ಯದ ಜವಾಬ್ದಾರಿ ತನ್ನ ಹೆಗಲ ಮೇಲೆ ಇದೆ ಎಂದು ಹೇಳಿದರು.
ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಸಂಪುಟಕ್ಕೆ ಸೇರ್ಪಡೆಯಾದ 35 ಸಚಿವರಲ್ಲಿ ಮಾಝಿ ಕೂಡ ಒಬ್ಬರು. ಈ ಮೂಲಕ ಸಚಿವ ಸಂಪುಟವನ್ನು 41ಕ್ಕೆ ವಿಸ್ತರಿಸಲಾಯಿತು. ಇನ್ನು ಸಚಿವೆಯಾಗಿ ಪ್ರಮಾಣ ಸ್ವೀಕರಿಸಿದ ಬಳಿಕ ಸಂತೋಷ ಹಂಚಿಕೊಂಡ ಮಾಝಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದರು.

“ಪ್ರಧಾನಿ ಮೋದಿ ಅವರು ತನಗೆ ಈ ಸ್ಥಾನಮಾನ ನೀಡಿರುವುದು ನಿಜಕ್ಕೂ ಖುಷಿ ತಂದಿದೆ. ತಾನು ಶಾಸಕಿಯಾಗಿ ಸಚಿವೆಯಾಗುತ್ತೇನೆ ಅಂತಾ ಎಂದಿಗೂ ಊಹಿಸಿರಲಿಲ್ಲ. ನಾನು 2014 ರಿಂದ ಭಾರತೀಯ ಜನತಾ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ನಾನು ಮೊದಲು ಶಾಸಕಿಯಾಗಿ ಆಯ್ಕೆಯಾದಾಗ, ನನ್ನ ಗಮನ ನನ್ನ ಸ್ವಂತ ಕ್ಷೇತ್ರದ ಮೇಲೆ ಮಾತ್ರ ಇತ್ತು. ಆದರೀಗ, ಪಶ್ಚಿಮ ಬಂಗಾಳದ ಸಂಪೂರ್ಣ ರಾಜ್ಯದ ಜವಾಬ್ದಾರಿ ನನ್ನ ಹೆಗಲ ಮೇಲೆ ಬಿದ್ದಿದೆ” ಎಂದು ಮಾಝಿ ಹೇಳಿದರು.
ಆರ್ಥಿಕ ಸಂಕಷ್ಟದಿಂದಾಗಿ ಮಾಝಿ ಶಿಕ್ಷಣವನ್ನು ತ್ಯಜಿಸಬೇಕಾಯಿತು. ತನ್ನ ಕುಟುಂಬವನ್ನು ಪೋಷಿಸಲು ಅನೇಕ ಮನೆಗಳಲ್ಲಿ ಮನೆಕೆಲಸ ಮಾಡುತ್ತಾ ಜೀವನಕ್ಕಾಗಿ ದುಡಿಯಬೇಕಾಯಿತು. ಅವರ ಪತಿ ಕೊಳಾಯಿ ರಿಪೇರಿ ಮಾಡುವ ಕೆಲಸ ಮಾಡುತ್ತಿದ್ದರೆ, ಮಗ ಪಾರ್ಥ್ ಶಾಲಾ ವಿದ್ಯಾರ್ಥಿಯಾಗಿದ್ದಾನೆ.
ಮಾಝಿ ತಮ್ಮ ರಾಜಕೀಯ ಪ್ರಯಾಣವನ್ನು ಬೂತ್ ಮಟ್ಟದ ಕಾರ್ಯಕರ್ತೆಯಾಗಿ ಪ್ರಾರಂಭಿಸಿದರು. 2021 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ, ಸೋತರು. ಆದರೆ 2026 ರಲ್ಲಿ ಅವರಿಗೆ ಎರಡನೇ ಅವಕಾಶ ನೀಡುವ ನಿರ್ಧಾರವು ಫಲ ನೀಡಿದೆ.
ಸೋಮವಾರ (ಜೂ.1), ಕೋಲ್ಕತ್ತಾದ ಲೋಕಭವನದಲ್ಲಿ ರಾಜ್ಯಪಾಲ ಆರ್.ಎನ್.ರವಿ ಅವರು ನೂತನ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. 13 ಮಂದಿ ಕ್ಯಾಬಿನೆಟ್ ಸಚಿವರು, ಮೂವರು ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ) ಮತ್ತು 19 ಮಂದಿ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.


