ಚಿಕ್ಕಮಗಳೂರು: ಶ್ರೀನಂದಾ ಶವ ಪರೀಕ್ಷೆಯಲ್ಲಿ ಸಿಕ್ಕಿದೆ ಬೆಚ್ಚಿಬೀಳಿಸುವ ಅಂಶ.! ಕೊನೆಯದಾಗಿ ಆಕೆ 1000 ಸೆಕೆಂಡ್ ಫೋನ್ ನಲ್ಲಿ ಮಾತನಾಡಿದ್ದು ಯಾರ ಬಳಿ.!?
news.ashwasurya.in
ಅಶ್ವಸೂರ್ಯ/ಚಿಕ್ಕಮಗಳೂರು : ಕೇರಳದಿಂದ ಕುಟುಂಬದ ಜೊತೆ ಪ್ರವಾಸಕ್ಕೆಂದು ಬಂದು ಮಾಣಿಕ್ಯಧಾರಾ ಬಳಿಕ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ್ದ ಶ್ರೀನಂದಾ ಶವಪರೀಕ್ಷೆಯಲ್ಲಿ ಶಾಕಿಂಗ್ ಅಂಶಗಳು ಬಯಲಾಗಿವೆ.!
ಚಿಕ್ಕಮಗಳೂರಿನ ಮಾಣಿಕ್ಯಧಾರಾ ಫಾಲ್ಸ್ ಬಳಿ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ್ದ ಕೇರಳದ ಶ್ರೀನಂದಾ ಪ್ರಕರಣ ಈಗ ಭಾರೀ ಚರ್ಚೆಯಾಗುತ್ತಿದೆ. ಬಾಲಕಿ ತಾನಾಗಿಯೇ ಪ್ರಪಾತಕ್ಕೆ ಬಿದ್ದಳೇ? ಅಥವಾ ಆಕೆಯನ್ನು ಯಾರಾದರೂ ಕಿಡ್ನ್ಯಾಪ್ ಮಾಡಿ ಇಲ್ಲಿ ಪ್ರಪಾತಕ್ಕೆ ತಳ್ಳಿದರೆ ಎಂಬ ಅನುಮಾನಗಳಿವೆ. ಈ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತಾಗಿ ಚಿಕ್ಕಮಗಳೂರು ಪೊಲೀಸರು ಈಗ ತೀವ್ರ ತನಿಖೆ ನಡೆಸುತ್ತಿದ್ದು ಇದು ಸಹಜ ಸಾವೇ ಅಥವಾ ಕೊಲೆಯೇ.? ಶ್ರೀನಂದಾಗೆ ಕೊನೆಯ ಕ್ಷಣದಲ್ಲಿ ಏನಾಗಿತ್ತು ಎಂಬ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.
ಈ ನಡುವೆ ಶ್ರೀನಂದಾ ಶವ ಪರೀಕ್ಷೆ ವರದಿಗಳು ಹೊರಬಿದ್ದಿವೆ. ಆ ಪ್ರಕಾರ ತಲೆಗೆ ತೀವ್ರತರವಾದ ಗಾಯವಾಗಿದ್ದರಿಂದ ಶ್ರೀನಂದಾ ಸಾವಾಗಿದೆ ಎನ್ನುವುದು ಖಚಿತವಾಗಿದೆ. ತಲೆ ಮಾತ್ರವಲ್ಲ ಶರೀರದ ಹಲವು ಭಾಗಗಳಲ್ಲಿ ಗಾಯಗಳು ಮತ್ತು ಎಲುಬು ಮುರಿತವಾಗಿದೆ ಎಂದು ತಿಳಿದುಬಂದಿದೆ.
ಇದು ಪ್ರಪಾತಕ್ಕೆ ಬೀಳುವ ಸಂದರ್ಭದಲ್ಲಿ ಆಗಿರಬಹುದು. ಆದರೆ ತಲೆಗೆ ಮೊದಲೇ ಯಾರಾದರೂ ಹೊಡೆದಿದ್ದರೇ ಅಥವಾ ಬೀಳುವ ಸಂದರ್ಭದಲ್ಲಿ ಆದ ಗಾಯವೇ ಎಂಬುದು ತನಿಖೆಯಿಂದ ಹೊರಬೀಳಬೇಕಿದೆ.
ಇನ್ನೂ ಪ್ರಾಥಮಿಕ ತನಿಖೆಯ ವೇಳೆ ಕೆಲವು ಮಹತ್ವದ ಸಂಗತಿಗಳು ಬೆಳಕಿಗೆ ಬಂದಿವೆ. ಶ್ರೀನಂದಾ ನಾಪತ್ತೆಯಾಗುವ ಮುನ್ನ ಸುಮಾರು 1000 ಸೆಕೆಂಡ್ಗಳ ಕಾಲ ಮೊಬೈಲ್ನಲ್ಲಿ ಮಾತನಾಡಿದ್ದಳು ಎಂಬುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ವಿಶೇಷವಾಗಿ, ಆಕೆ ತನ್ನ ಸ್ನೇಹಿತೆಯೊಂದಿಗೇ ಸುಮಾರು ಹದಿನೈದು ನಿಮಿಷಗಳ ಕಾಲ ಸಂಭಾಷಣೆ ನಡೆಸಿದ್ದಾಳೆ ಎಂಬ ಮಾಹಿತಿಯೂ ಹೊರಬಿದ್ದಿದೆ.

