
ಧಾರವಾಡ: ಕಾಂಗ್ರೇಸ್ ಮುಖಂಡ ಫೈರೋಜ್ ಪಠಾಣ್ ಕೊಲೆ.! ಸ್ವಗೃಹದಲ್ಲೇ ಅಟ್ಟಾಡಿಸಿ ಕೊಂದ ಹಂತಕರು.!
news.ashwasurya.in
ಅಶ್ವಸೂರ್ಯ/ಧಾರವಾಡ : ಯೂತ್ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ್ ಅವರನ್ನು ದುಷ್ಕರ್ಮಿಗಳು ಅವರ ಮನೆಯಲ್ಲೇ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ನಗರದ ಹಾಶ್ಮಿ ನಗರದ ನಿವಾಸದಲ್ಲಿ ಶುಕ್ರವಾರ ರಾತ್ರಿ ಈ ಭೀಕರ ಕೊಲೆ ನಡೆದಿದೆ.
ಈ ಹಿಂದೆ ಎನ್ಎಸ್ಯುಐ (NSUI) ವಿದ್ಯಾರ್ಥಿ ಸಂಘಟನೆಯಲ್ಲಿ ಪ್ರಬಲ ನಾಯಕರಾಗಿ ಗುರುತಿಸಿಕೊಂಡಿದ್ದ ಫೈರೋಜ್ ಪಠಾಣ್, ಸದ್ಯ ಯುವ ಕಾಂಗ್ರೆಸ್ನಲ್ಲಿ ಪ್ರಮುಖ ಜವಾಬ್ದಾರಿ ವಹಿಸಿಕೊಂಡಿದ್ದರು. ಶುಕ್ರವಾರ ರಾತ್ರಿ ಅವರು ತಮ್ಮ ಮನೆಯಲ್ಲಿದ್ದ ಸಂದರ್ಭದಲ್ಲಿ ಮಾರಕಾಸ್ತ್ರಗಳೊಂದಿಗೆ ಫೈರೋಜ್ ಮನೆಗೆ ನುಗ್ಗಿದ ಆರು ಮಂದಿ ಆರೋಪಿಗಳ ತಂಡವು ಈ ಕೃತ್ಯವೆಸಗಿದೆ.ಮೊದಲೆ ಸ್ಕೆಚ್ ಹಾಕಿ ತಂತ್ರ ರೂಪಿಸಿ ಫೈರೋಜ್ ಅವರ ಮೇಲೆ ದಾಳಿ ಮಾಡಿದ ಆರೋಪಿಗಳು, ಕೊಲೆ ಮಾಡಿದ ಬಳಿಕ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಉಪನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಈ ಪ್ರಕರಣದ ಕುರಿತು ಕ್ಷಿಪ್ರ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಕೊಲೆಗೆ ಸಂಚು ರೂಪಿಸಿದ ಆರೋಪದ ಮೇಲೆ ಅರ್ಬಾಜ್ ಪಠಾಣ್ ಮತ್ತು ಗುಲಾಬ್ ಎಂಬುವವರನ್ನು ಈಗಾಗಲೇ ವಶಕ್ಕೆ ಪಡೆದಿದ್ದಾರೆ. ದಾಳಿಯಲ್ಲಿ ನೇರವಾಗಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮೊಹಮ್ಮದ್ ಶಾ, ಸದ್ದಾಂ, ಗೌಸ್ ಮತ್ತು ಪರ್ವೇಜ್ ಅವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ವೈಯಕ್ತಿಕ ದ್ವೇಷ ಅಥವಾ ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿಯೇ ಈ ಹತ್ಯೆ ನಡೆದಿದೆ ಎಂದು ಶಂಕಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿ ಹಾಗೂ ಮೊಬೈಲ್ ಕರೆಗಳ ವಿವರಗಳನ್ನು ಆಧರಿಸಿ ತನಿಖೆ ಚುರುಕುಗೊಳಿಸಲಾಗಿದ್ದು ಪೊಲೀಸರು ವಿಷೇಶ ತಂಡ ರಚಿಸಿ ಹಂತಕರ ಬೇಟೆಗೆ ಇಳಿದಿದ್ದಾರೆ.

